
ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು 3.96 ಲಕ್ಷ ಅರ್ಜಿಗಳು ಇಲಾಖೆಗೆ ಬಂದಿವೆ. ಈ ಪೈಕಿ 2.95 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಮಂಗಳವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನ ಮೇರೆಗೆ ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳ ಪತ್ತೆ ಕಾರ್ಯ ಮುಂದುವರೆದಿದೆ. ಅನರ್ಹರನ್ನು ಪತ್ತೆ ಹಚ್ಚಿ ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹೊಸದಾಗಿ ಬಿಪಿಎಲ್ ಕಾರ್ಡ್ ಕೋರಿ 3.96 ಲಕ್ಷ ಅರ್ಜಿಗಳು ಬಂದಿದ್ದು, ಈ ಪೈಕಿ 2.95 ಲಕ್ಷ ಅರ್ಜಿಗಳು ವಿಲೇವಾರಿ ಮಾಡಲಾಗಿದೆ. ಉಳಿದ ಅರ್ಜಿಗಳನ್ನು ಒಂದು ತಿಂಗಳೊಳಗೆ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
- ಉಳಿದ ಅರ್ಜಿ ತಿಂಗಳೊಳಗೆ ವಿಲೇವಾರಿ
- ಒಟ್ಟು 3.96 ಲಕ್ಷ ಅರ್ಜಿ ಸ್ವೀಕಾರ: ಸಚಿವ
ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಅಡಿ ಈ ಬಾರಿ ರಾಜ್ಯದಲ್ಲಿ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಅವಕಾಶ ನೀಡಿದೆ. ಅದರಂತೆ ಈಗಾಗಲೇ ರಾಜ್ಯದಲ್ಲಿ 2.57 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಅಂತೆಯೇ ಕೇಂದ್ರ ಸರ್ಕಾರ 3 ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿಗೆ ಅವಕಾಶ ನೀಡಿದ್ದು, ಜೋಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
71 ಕಾರ್ಖಾನೆಗಳ ಪರಿಶೀಲನೆ:
ಬಳ್ಳಾರಿ ಮತ್ತು ಕಲಬುರಗಿ ವಿಭಾಗದಲ್ಲಿ 78 ಸಕ್ಕರೆ ಕಾರ್ಖಾನೆಗಳು ಇವೆ. ರೈತರು ಮತ್ತು ಕಬ್ಬುಬೆಳೆಗಾರರಿಗೆ ತೂಕ ಮತ್ತು ಅಳತೆಯಲ್ಲಿ ಯಾವುದೇ ಮೋಸ ಆಗದಂತೆ ಅಧಿಕಾರಿಗಳು 78 ಸಕ್ಕರೆ ಕಾರ್ಖಾನೆಗಳ ಪೈಕಿ 71 ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಈವರೆಗೂ ಯಾವುದೇ ದೂರುಗಳು ಅಥವಾ ತಕರಾರು ಬಂದಿಲ್ಲ. ಒಂದು ವೇಳೆ ಅಳತೆ ಮತ್ತು ತೂಕದಲ್ಲಿ ಮೋಸ ಮಾಡಿದರೆ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು ಎಂದು ಸಚಿವರು ಹೇಳಿದರು.
ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಬೆಲೆ ಅಂಗಡಿ ತೆರೆಯುವ ಬಗ್ಗೆ ನಮ್ಮ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಅದರಂತೆ ಹೊಸದಾಗಿ ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಆಯಾಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ತಿಂಗಳ ಅಂತ್ಯದೊಳಗೆ ಪ್ರತಿ ಜಿಲ್ಲೆಗಳಲ್ಲಿ ಸಭೆ ಮಾಡಿ ನ್ಯಾಯಬೆಲೆ ಅಂಗಡಿ ತೆರೆಯಲಾಗುವುದು. ಹೊಸ ಒಳ ಮೀಸಲಾತಿ ಅನ್ವಯ 3,517 ಮಂದಿ ಎಸ್ಸಿ-ಎಸ್ಟಿಗಳಿಗೆ ನ್ಯಾಯಬೆಲೆ ಅಂಗಡಿ ಸಿಗಲಿದೆ. ರಾಜ್ಯದ ಯಾವುದೇ ಭಾಗದಲ್ಲಿ ದವಸ-ಧಾನ್ಯಗಳಿಗೆ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ