Karnataka Rains: ಮಂಡ್ಯದಲ್ಲಿ 17 ಸೆಂ.ಮೀ.ಮಳೆ: ಜನಜೀವನ ಅಸ್ತವ್ಯಸ್ತ

Published : Oct 16, 2022, 01:08 AM IST
Karnataka Rains: ಮಂಡ್ಯದಲ್ಲಿ 17 ಸೆಂ.ಮೀ.ಮಳೆ: ಜನಜೀವನ ಅಸ್ತವ್ಯಸ್ತ

ಸಾರಾಂಶ

ರಾಜ್ಯದ ವಿವಿಧೆಡೆ ಶನಿವಾರವೂ ಮಳೆಯಾಗಿದ್ದು, ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ವರುಣನ ಆರ್ಭಟ ಜೋರಾಗಿತ್ತು. ಮಹಾಮಳೆಗೆ ಮಂಡ್ಯ ಜಿಲ್ಲೆ ತತ್ತರಿಸಿದ್ದು, ಶುಕ್ರವಾರ ರಾತ್ರಿಯಿಂದೀಚೆಗೆ ಮಂಡ್ಯದಲ್ಲಿ 17 ಸೆಂ.ಮೀ. ಮಳೆಯಾದ ವರದಿಯಾಗಿದೆ. 

ಬೆಂಗಳೂರು (ಅ.16): ರಾಜ್ಯದ ವಿವಿಧೆಡೆ ಶನಿವಾರವೂ ಮಳೆಯಾಗಿದ್ದು, ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ವರುಣನ ಆರ್ಭಟ ಜೋರಾಗಿತ್ತು. ಮಹಾಮಳೆಗೆ ಮಂಡ್ಯ ಜಿಲ್ಲೆ ತತ್ತರಿಸಿದ್ದು, ಶುಕ್ರವಾರ ರಾತ್ರಿಯಿಂದೀಚೆಗೆ ಮಂಡ್ಯದಲ್ಲಿ 17 ಸೆಂ.ಮೀ. ಮಳೆಯಾದ ವರದಿಯಾಗಿದೆ. ಮಳೆಯಿಂದಾಗಿ ಮಂಡ್ಯ ತಾಲೂಕಿನ ಬೂದನೂರು ಕೆರೆ ಕೋಡಿ ಒಡೆದ ಪರಿಣಾಮ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿತ್ತು. ಹೀಗಾಗಿ, ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಮಧ್ಯಾಹ್ನದವರೆಗೆ ಬಂದ್‌ ಮಾಡಲಾಗಿತ್ತು. ಮಂಡ್ಯಜಿಲ್ಲೆ ಪಾಂಡವಪುರದ ಪ್ರಸಿದ್ಧ ಪ್ರವಾಸಿತಾಣ ಕೆರೆ ತೊಣ್ಣೂರಿನಲ್ಲಿ ಕೆರೆ ಭರ್ತಿಯಾಗಿ ನೀರು ಗ್ರಾಮಕ್ಕೆ ನುಗ್ಗಿದ್ದರಿಂದ ಜನ ಪರದಾಡುವಂತಾಯಿತು.

ಈ ಮಧ್ಯೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಇಡಗೂರು ಬಳಿ ಶುಕ್ರವಾರ ರಾತ್ರಿ ಕುಮದ್ವತಿ ನದಿ ಸೇತುವೆ ಮೇಲೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಕೂಲಿ ಕಾರ್ಮಿಕರಿಬ್ಬರು ಕೊಚ್ಚಿ ಹೋಗಿದ್ದು, ಆ ಪೈಕಿ ಗೌರಿಬಿದನೂರಿನ ಆನೂಡಿ ಗ್ರಾಮದ ಪ್ರಶಾಂತ್‌ ಎಂಬುವರನ್ನು ರಕ್ಷಿಸಲಾಗಿದೆ. ತುಮಕೂರು ಜಿಲ್ಲೆಯ ಶಿರಾ ಮೂಲದ ಬಸವರಾಜ್‌ ಎಂಬುವರ ಮೃತದೇಹ ಶನಿವಾರ ಬೆಳಗ್ಗೆ ಪತ್ತೆಯಾಗಿದೆ. ಮಳೆಯಿಂದಾಗಿ ಕನಕಪುರ ತಾಲೂಕಿನ ಹಾರೋಬಲೆ ಬಳಿಯಿರುವ ಅರ್ಕಾವತಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ನದಿ ಪಾತ್ರದ ಜನರು ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.

Bengaluru Rain: ಸಿಲಿಕಾನ್ ಸಿಟಿಯಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ

ರಾಜಧಾನಿ ಬೆಂಗಳೂರಿನ ಹಲವೆಡೆ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತುಕೊಂಡು ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಬಳ್ಳಾರಿ ರಸ್ತೆಯಲ್ಲಿರುವ ಸೆವೆನ್‌ ಮಿನಿಸ್ಟರ್‌ ಕ್ವಾಟ್ರಸ್‌ನ ಕಾಂಪೌಂಡ್‌ ಒಳಗೆ ನೀರು ನುಗ್ಗಿದ್ದು, ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಅವರಿರುವ ಸರ್ಕಾರಿ ಮನೆಗಳಿಗೆ ಕೆಲಕಾಲ ಮಾರ್ಗವೇ ಇಲ್ಲದಂತಾಗಿತ್ತು. ಸತತ ಮಳೆಯಿಂದಾಗಿ ತುಮಕೂರಿನ ದೇವರಾಯಪಟ್ಟಣ ಕೆರೆ 35 ವರ್ಷಗಳ ನಂತರ ಕೋಡಿ ಬಿದ್ದಿದ್ದು, ಗ್ರಾಮದ ತೋಟಗಳು ಜಲಾವೃತಗೊಂಡಿವೆ. ಗುಬ್ಬಿ ತಾಲೂಕಿನಲ್ಲಿ ಮಳೆಗೆ 57 ಮನೆಗಳು ಕುಸಿದು ಬಿದ್ದಿವೆ.

ಎಲ್ಲೆಲ್ಲಿ ಎಷ್ಟು ಮಳೆ?: ಮಂಡ್ಯದಲ್ಲಿ 17 ಸೆಂ.ಮೀ., ಮಂಡ್ಯ ಕೆವಿಕೆ 15, ಮೈಸೂರಿನ ಟಿ.ನರಸೀಪುರ, ಚಾಮರಾಜನಗರದ ಕೊಳ್ಳೆಗಾಲ ತಲಾ 9, ಬೀದರ್‌ನ ಮಂಠಾಳ, ಕಲಬುರಗಿಯ ಯಡ್ರಾಮಿ, ರಾಮನಗರದ ಕನಕಪುರ, ಕೋಲಾರದ ಮಾಲೂರಿನಲ್ಲಿ 8 ಸೆಂ.ಮೀ ಮಳೆಯಾಗಿದೆ.

ನಗರದ ಸುತ್ತ ಪ್ರವಾಹದಂತೆ ಹರಿದ ನೀರು: ಶುಕ್ರವಾರ ರಾತ್ರಿ ಸುರಿದ ರಣ ಮಳೆಯಿಂದಾಗಿ ನಗರದ ಸುತ್ತಲಿನ ಹೆಬ್ಬಳ್ಳಗಳು, ಕಾಲುವೆಗಳು, ಕೆರೆಗಳು ತುಂಬಿ ಹರಿಯುತ್ತಿವೆ. ಮಂಡ್ಯ-ನಾಗಮಂಗಲ ರಸ್ತೆಯಲ್ಲಿ ನೀರು ಪ್ರವಾಹದಂತೆ ಹರಿಯುತ್ತಿದೆ. ನಗರದ ಹೊರವಲಯದಲ್ಲಿರುವ ಹೆಬ್ಬಳ್ಳಗಳೂ ಉಕ್ಕಿ ಹರಿಯುತ್ತಿವೆ. ಇದರಿಂದ ನಗರದ ಸುತ್ತ ಪ್ರವಾಹದಂತೆ ಎಲ್ಲೆಡೆ ನೀರು ರಭಸದಿಂದ ಹರಿಯುತ್ತಿರುವುದು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಪ್ರತಿ ಬಾರಿ ಮಳೆ ಬಂದಾಗಲೂ ವಿವೇಕಾನಂದನಗರ ಬಡಾವಣೆ, ಬೀಡಿ ಕಾರ್ಮಿಕರ ಕಾಲೋನಿ, ಕೆಹೆಚ್‌ಬಿ ಬಡಾವಣೆ ಮುಳುಗುವ ಹಂತ ತಲುಪುತ್ತವೆ. ಇಲ್ಲಿನ ನಿವಾಸಿಗಳು ಜೀವ ಕೈಯಲ್ಲಿಡಿದುಕೊಂಡು ಬದುಕು ನಡೆಸಬೇಕಾದಂತಹ ವಾತಾವರಣ ಸೃಷ್ಟಿಯಾಗಿದೆ.

Rain Alert: ಕರ್ನಾಟಕದಲ್ಲಿ ಇನ್ನೂ 6 ದಿನ ಮಳೆ: ಯೆಲ್ಲೋ ಅಲರ್ಟ್‌

ರಾತ್ರಿ ಸುರಿದ ಭಾರಿ ಮಳೆಗೆ ಕೆಎಚ್‌ಬಿ ಬಡಾವಣೆ ಸಂಪೂರ್ಣ ಜಲಾವೃತವಾಗಿದ್ದು, ಅಲ್ಲಿನ ನಿವಾಸಿಗಳು ಹಾಗೂ ಶಾಲಾ ಮಕ್ಕಳು ಮನೆಯಿಂದ ಹೊರಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳಲ್ಲಿ 2ರಿಂದ 3 ಅಡಿಗಳಷ್ಟುನೀರು ಸಂಗ್ರಹವಾಗಿದ್ದು, ಓಡಾಡಲು ಸಾಧ್ಯವಾಗದಂತಾಗಿದೆ. ಮಧ್ಯಾಹ್ನವಾದರೂ ವಿವೇಕಾನಂದನಗರ, ಬೀಡಿ ಕಾರ್ಮಿಕರ ಕಾಲೋನಿಯಿಂದ ನೀರು ರಸ್ತೆಗೆ ನುಗ್ಗಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಭಾಗದಲ್ಲಿರುವ 1000ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಮನೆಯೊಳಗೆ ಎರಡು ಅಡಿಯಿಂದ ಮೂರು ಅಡಿಗಳಷ್ಟುನೀರು ಸಂಗ್ರಹವಾಗಿದೆ. ಮನೆಯಿಂದ ನೀರು ತೆರವುಗೊಳಿಸಲಾಗದೆ ಜನರು ಸುರಕ್ಷಿತ ನೆಲೆಗಾಗಿ ಹುಡುಕಾಟ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌