ಕರ್ನಾಟಕದಲ್ಲಿ 1624 ಮಂದಿಗೆ ಕೋವಿಡ್‌, 2 ಸಾವು: ಶೇ.4.8 ಪಾಸಿಟಿವಿಟಿ

By Govindaraj S  |  First Published Jul 28, 2022, 2:52 AM IST

ರಾಜ್ಯದಲ್ಲಿ ಕೊರೋನಾ ಹೊಸ ಪ್ರಕರಣಗಳು ಬುಧವಾರ 1624ಕ್ಕೆ ಹೆಚ್ಚಿದ್ದು, 1647 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ. ಸದ್ಯ 8,836 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ.


ಬೆಂಗಳೂರು (ಜು.28): ರಾಜ್ಯದಲ್ಲಿ ಕೊರೋನಾ ಹೊಸ ಪ್ರಕರಣಗಳು ಬುಧವಾರ 1624ಕ್ಕೆ ಹೆಚ್ಚಿದ್ದು, 1647 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ. ಸದ್ಯ 8,836 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 33 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.4.8 ರಷ್ಟು ದಾಖಲಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 10 ಸಾವಿರ ಏರಿಕೆಯಾಗಿವೆ. ಹೀಗಾಗಿ, ಹೊಸ ಪ್ರಕರಣಗಳು 199 ಹೆಚ್ಚಳವಾಗಿವೆ. (ಮಂಗಳವಾರ 1,425 ಕೇಸ್‌, ಸಾವು ಒಂದು).

ಉಡುಪಿಯಲ್ಲಿ 68 ವರ್ಷದ ವೃದ್ಧೆ, ದಕ್ಷಿಣ ಕನ್ನಡದಲ್ಲಿ 72 ವರ್ಷದ ವೃದ್ಧ ಸಾವಿಗೀಡಾಗಿದ್ದಾರೆ. ಇಬ್ಬರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಸೋಂಕು ಪರೀಕ್ಷೆ ಮಾಡಿದಾಗ ಕೊರೋನಾ ದೃಢಪಟ್ಟಿತ್ತು. ಈ ಹಿಂದೆ ರಾಜ್ಯದಲ್ಲಿ ಜುಲೈ 22 ರಂದು 1562 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಆ ಬಳಿಕ ಪರೀಕ್ಷೆ ಇಳಿಕೆ ಹಿನ್ನೆಲೆ ತಗ್ಗಿದ್ದು, ಸದ್ಯ ಪರೀಕ್ಷೆ ಹೆಚ್ಚಳವಾದ ಹಿನ್ನೆಲೆ ಏರಿಕೆಯಾಗಿದೆ. ಸಕ್ರಿಯ ಸೋಂಕಿತರ ಪೈಕಿ 86 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 10 ಮಂದಿ ಐಸಿಯು, 9 ಮಂದಿ ಆಕ್ಸಿಜನ್‌, 67 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 8,850 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.

Tap to resize

Latest Videos

undefined

Corona Crisis: 8 ದಿನ ಬಳಿಕ ಕೋವಿಡ್‌ 1000ಕ್ಕಿಂತ ಕೆಳಗೆ ಇಳಿಕೆ: 1 ಸಾವು

ಬೆಂಗಳೂರಿನಲ್ಲಿ 1176 ಕೊರೋನಾ ಕೇಸ್: ಬೆಂಗಳೂರಿನಲ್ಲಿ ಬುಧವಾರ 1,176 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.6.90 ರಷ್ಟಿದೆ. 1,381 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ. ನಗರದಲ್ಲಿ ಸದ್ಯ7,299 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 35 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

12424 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 556 ಮಂದಿ ಮೊದಲ ಡೋಸ್‌, 3813 ಮಂದಿ ಎರಡನೇ ಡೋಸ್‌ ಮತ್ತು 8055 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 18188 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 14549 ಆರ್‌ಟಿಪಿಸಿಆರ್‌ ಹಾಗೂ 3,639 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ.

3ನೇ ಡೋಸ್‌ ಪಡೆದಿದ್ದು ಬರೀ 15% ಜನ: ರಾಜ್ಯದಲ್ಲಿ ಕೊರೋನಾ ಲಸಿಕೆಯ ಮುನ್ನೆಚ್ಚರಿಕಾ (ಮೂರನೇ) ಡೋಸ್‌ಗೆ ಅರ್ಹತೆ ಪಡೆದವರ ಪೈಕಿ ಶೇ.15ರಷ್ಟು ಮಂದಿ ಮಾತ್ರವೇ ಲಸಿಕೆ ಪಡೆದಿದ್ದು, ಬರೋಬ್ಬರಿ 1.3 ಕೋಟಿ ಮಂದಿ (ಶೇ.85 ರಷ್ಟು) ದೂರ ಉಳಿದಿದ್ದಾರೆ! ಉಚಿತವಾಗಿ ಮೂರನೇ ಡೋಸ್‌ ನೀಡಿದರೂ ಶೇ.30ರಷ್ಟು ಆರೋಗ್ಯ ಕಾರ್ಯಕರ್ತರು, ಶೇ.40ರಷ್ಟು ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಹೊಸ ಪ್ರಕರಣಗಳು ಏರಿಕೆಯಾಗುತ್ತಿದ್ದು, ಒಮಿಕ್ರೋನ್‌ ರೂಪಾಂತರಿಯ ಉಪತಳಿಗಳು ಪತ್ತೆಯಾಗಿವೆ. ಈ ನಡುವೆ ಮುನ್ನೆಚ್ಚರಿಕಾ ಡೋಸ್‌ ಅಭಿಯಾನ ಮಂಕಾಗಿರುವುದು ಆತಂಕ ಮೂಡಿಸಿದೆ.

Corona Crisis: ಐದು ತಿಂಗಳ ಬಳಿಕ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಕೋವಿಡ್‌!

ಸದ್ಯ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ1.6 ಕೋಟಿ ಜನರು ಮೂರನೇ ಡೋಸ್‌ಗೆ ಅರ್ಹರಿದ್ದಾರೆ. ಆದರೆ, ಈವರೆಗೂ 26 ಲಕ್ಷ ಮಂದಿ (ಶೇ.15ರಷ್ಟು) ಮಾತ್ರವೇ ಮೂರನೇ ಡೋಸ್‌ ಪಡೆದಿದ್ದಾರೆ. 1.34 ಕೋಟಿ ಮಂದಿ ಎರಡನೇ ಡೋಸ್‌ ಪಡೆದು ಒಂಬತ್ತು ತಿಂಗಳು ಪೂರ್ಣಗೊಂಡಿದ್ದರೂ ಮೂರನೇ ಡೋಸ್‌ ಪಡೆದಿಲ್ಲ. ಅಲ್ಲದೇ, 6.5 ಲಕ್ಷ ಆರೋಗ್ಯ ಕಾರ್ಯಕರ್ತರ ಪೈಕಿ 4.71 ಲಕ್ಷ ಮಂದಿ, 7.1 ಲಕ್ಷ ಮುಂಚೂಣಿ ಕಾರ್ಯಕರ್ತರ ಪೈಕಿ 4.4 ಲಕ್ಷ ಮಂದಿ ಮಾತ್ರ ಮೂರನೇ ಡೋಸ್‌ ಪಡೆದಿದ್ದು, ಈ ಎರಡೂ ವಲಯದಲ್ಲಿ ಐದು ಲಕ್ಷ ಮಂದಿ ಇಂದಿಗೂ ಮೂರನೇ ಡೋಸ್‌ನಿಂದ ದೂರ ಉಳಿದಿದ್ದಾರೆ.

click me!