
ಬೆಂಗಳೂರು(ಜು.27): ರಾಜ್ಯದಲ್ಲಿ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು, ಆಗಸ್ಟ್ 5ರೊಳಗೆ ಕಬ್ಬು ಬೆಳೆಗೆ ಸರ್ಕಾರ ದರ ನಿಗದಿ ಮಾಡಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ರಸ್ತೆ ತಡೆ ನಡೆಸಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ. ನಗರದ ಗಾಂಧೀಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿನ ಕಬ್ಬು ಬೆಳೆಗಾರರ ಹಿತ ಕಾಪಾಡುವಂತೆ ಸಾಕಷ್ಟು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ, ಅಷ್ಟೇ ಅಲ್ಲದೆ ಕಬ್ಬು ಬೆಳೆಗೆ ದರ ನಿಗದಿಪಡಿಸಬೇಕು ಎಂದು ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದರೂ ಸಹ ಸರ್ಕಾರ ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ. ಈ ಹಿನ್ನೆಲೆ ಸರ್ಕಾರಕ್ಕೆ ಆಗಸ್ಟ್ 5ರ ವೆರೆಗೆ ಗಡವು ನೀಡಲಾಗಿದ್ದು, ಅಷ್ಟರೊಳಗಾಗಿ ಕಬ್ಬಿಗೆ ದರ ನಿಗದಿ ಮಾಡದ್ದಿದ್ದಲ್ಲಿ ರಾಜ್ಯಾದ್ಯಂತ ರಸ್ತೆ ತಡೆ ನಡೆಸಿ ಉಗ್ರ ಹೋರಾಟ ನಡೆಸಲಾಗುವುದು ಎಂದಿದ್ದಾರೆ.
ಇನ್ನು ರೈತರ ಬೆಳೆಗೆ ಬೆಂಬಲ ಬೆಲೆ ಖಾತ್ರಿ ಯೋಜನೆಗೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಆಗಸ್ಟ್ 22ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನೆ ಹಾಗೂ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ದೇಶದ ಸಾವಿರಾರು ರೈತ ಸಂಘಟನೆಗಳು ಈ ರ್ಯಾಲಿಯಲ್ಲಿ ಭಾಗವಹಿಸಲಿದೆ ಎಂದು ಮಾಹಿತಿ ನೀಡಿದರು.
ರೈತ ಉತ್ಪನ್ನಗಳ ಮೇಲೆ ಜಿಎಸ್ಟಿ ಹೇರಿಕೆ ಮಾಡಿದ ಕೇಂದ್ರ ಸರ್ಕಾರಕ್ಕೆ ನಾಚಿಕೆಯಗಬೇಕು
ರೈತ ದೇಶದ ಬೆನ್ನೆಲುಬು ಅಂತ ಹೇಳಲಾಗುತ್ತೆ, ಆದ್ರೆ ಕೇಂದ್ರ ಸರ್ಕಾರ ಮಾತ್ರ ರೈತರು ಉತ್ಪಾದಿಸುವ ವಸ್ತುಗಳ ಮೇಲೇಯೂ ಜಿಎಸ್ಟಿ ಹೇರಿಕೆ ಮಾಡಿದೆ, ಇಂತಹ ಕೆಲಸ ಮಾಡಿರೋದು ಕೇಂದ್ರ ಸರ್ಕಾರ ಮಾಡಿರುವ ಅತ್ಯಂತ ನಾಚಿಕ್ಕೇಡಿನ ಸಂಗತಿ ಎಂದು ಶಾಂತಕುಮಾರ್ ಕಿಡಿಕಾರಿದ್ದಾರೆ.
ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿದ್ದ ಶಾಂತಕುಮಾರ್, ಇದುವರೆಗೂ ಪ್ರತಿಕ್ರಿಯೆ ಇಲ್ಲ
ಶಾಂತಕುಮಾರ್ ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ಕಬ್ಬು ದರ ನಿಗದಿ ಮಾಡಲು ಒತ್ತಾಯಿಸಿದ್ದರು. ಬಣ್ಣಾರಿ ಸಕ್ಕರೆ ಕಾರ್ಖಾನೆಯವರು ಕಬ್ಬು ಸರಬರಾಜು ಮಾಡಿದ ರೈತರಿಗೆ ಎಫ್‌ಆರ್‌ಪಿ ದರಕ್ಕಿಂತ ಕಡಿಮೆ . 2500 ಹಣ ಪಾವತಿಸುತ್ತಿರುವುದು ಕಾನೂನುಬಾಹಿರ, ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚ ಮನಬಂದಂತೆ ಕಡಿತಗೊಳಿಸಿ, ಬಿಲ್ಲಿನಲ್ಲಿ ನಮೂದಿಸದೆ ರೈತರಿಗೆ ಮೋಸ ಮಾಡುತ್ತಿದ್ದಾರೆ. ಕೆಲವು ಫೀಲ್ಡ… ಮೆನ್ ಗಳು ದಂಧೆ ಮಾಡುತ್ತಿದ್ದಾರೆ ಜಿಲ್ಲಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತರು ಬೆಳೆದ ಕೃಷಿ ಉತ್ಪನ್ನಗಳಾದ ಬೆಲ್ಲ, ಮೊಸರು, ಮಜ್ಜಿಗೆ, ಹನಿ ನೀರಾವರಿ ಉಪಕರಣಗಳು ರಸಗೊಬ್ಬರ ಕೀಟನಾಶಕ ಮೇಲೆ ವಿಧಿಸಿರುವ ಜಿಎಸ್‌ಟಿ ರದ್ದುಗೊಳಿಸಬೇಕು. ಕುದುರೆ ರೇಸ್, ಕ್ಯಾಸಿನೋ, ಜೂಜು ಕಟ್ಟೆಗಳಿಗೆ ಜಿಎಸ್ಟಿವಿಧಿಸದೆ ರೈತರಿಗೆ ಯಾಕೆ ಜಿಎಸ್ಟಿದಂಡ ಸರ್ಕಾರ ಕೂಡಲೇ ನಿರ್ಧಾರ ಕೈಗೊಳ್ಳಬೇಕು ಎಂದರು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಪಿ. ಸೋಮಶೇಖರ್, ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಕಿರಗಸೂರು ಶಂಕರ್, ಬಿ.ಪಿ. ಪರಶಿವಮೂರ್ತಿ, ನಂಜನಗೂಡು ತಾಲೂಕು ಅಧ್ಯಕ್ಷ ಹಾಡ್ಯರವಿ, ಅಂಬಳೆ ಮಹಾದೇವಸ್ವಾಮಿ, ಮಂಜುನಾಥ್, ಸಿಂದುವಳ್ಳಿ ಬಸವಣ್ಣ, ಸಿದ್ದಲಿಂಗಪ್ಪ, ಬರಡನಪುರ ನಾಗರಾಜ…, ಚಿಕ್ಕಸ್ವಾಮಿ, ಗಣೇಶ್, ಹಳಗಂಚಿ ಕುಮಾರ್, ಭುಜಂಗಪ್ಪ, ಮಂಜೇಶ್, ಕುರುಬೂರು ಪ್ರದೀಪ, ಕಾಟೂರು ಮಹಾದೇವಸ್ವಾಮಿ, ಪಿ. ರಾಜು, ವಾಜಮಂಗಲ ಮಹಾದೇವು, ಶಿವಸ್ವಾಮಿ, ವಿಜೇಂದ್ರ, ಮೂರ್ತಿ, ಉಡಿಗಾಲ ರೇವಣ್ಣ, ಶಿವರಾಜು, ದಿನೇಶ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ