
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು(ಡಿ.26): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಇ-ಕೆವೈಸಿ ಮಾಡಿಸಲು ಹತ್ತಕ್ಕೂ ಅಧಿಕ ಬಾರಿ ಕೇಂದ್ರ ಸರ್ಕಾರ ಗಡುವು ವಿಸ್ತರಿಸುತ್ತಾ ಬಂದಿದ್ದರೂ ರಾಜ್ಯದ ರೈತರು ನಿರಾಸಕ್ತಿ ತೋರುತ್ತಿದ್ದಾರೆ. 16,89,402 ಅನ್ನದಾತರು ಇನ್ನೂ ಇ-ಕೆವೈಸಿ ಗೊಡವೆಗೇ ಹೋಗಿಲ್ಲ. ರಾಜ್ಯದಲ್ಲಿ ಆಧಾರ್ ಆಧಾರಿತವಾಗಿ 53,91,573 ಲಕ್ಷ ರೈತರು ಪಿಎಂ ಕಿಸಾನ್ ಯೋಜನೆಯಡಿ ನೊಂದಾಯಿತರಾಗಿದ್ದು ಇದರಲ್ಲಿ ಸುಮಾರು 37 ಲಕ್ಷ ರೈತರಷ್ಟೇ ಇ-ಕೆವೈಸಿ ಮಾಡಿಸಿದ್ದಾರೆ. ಇನ್ನುಳಿದ 16,89,402 ರೈತರು ಇನ್ನೂ ಇ-ಕೆವೈಸಿ ಮಾಡಿಸುವುದು ಬಾಕಿ ಇದೆ. ಫಲಾನುಭವಿಗಳ ಸಂಖ್ಯೆಯನ್ನು ಪರಿಗಣಿಸಿದರೆ ಬೆಳಗಾವಿ ಜಿಲ್ಲೆಯಲ್ಲೇ ಇನ್ನೂ 1,26,970 ರೈತರು ಇನ್ನೂ ನೊಂದಣಿ ಮಾಡಿಸಿಲ್ಲ
ತುಮಕೂರು ಜಿಲ್ಲೆಯಲ್ಲಿ 97,860, ಕಲಬುರಗಿಯಲ್ಲಿ 92,420, ವಿಜಯಪುರದಲ್ಲಿ 86,962, ಹಾಸನದಲ್ಲಿ 83,667, ಬೆಂಗಳೂರು ಗ್ರಾಮಾಂತರದಲ್ಲಿ 82,977 ಬಳ್ಳಾರಿಯಲ್ಲಿ 73,522, ರಾಯಚೂರಿನಲ್ಲಿ 69,521, ಉತ್ತರ ಕನ್ನಡದಲ್ಲಿ 58,305 ರೈತರು ಇ-ಕೆವೈಸಿ ಮಾಡಿಸಿಲ್ಲ. ಬೆಂಗಳೂರು ನಗರದಲ್ಲಿ ಮಾತ್ರ ಅತಿ ಕಡಿಮೆ ಎಂದರೆ 12,482 ಫಲಾನುಭವಿಗಳು ಮಾತ್ರ ಇನ್ನೂ ನೋಂದಣಿ ಮಾಡಿಸಬೇಕಿದೆ.
PM Modi Birthday: ಬಡ ಜನರ 'ಅಚ್ಚೇದಿನ್' ಸಲುವಾಗಿ ಪ್ರಧಾನಿ ಮೋದಿ ಘೋಷಿಸಿದ 10 ಯೋಜನೆಗಳು
ಅನರ್ಹರ ಪತ್ತೆಗೆ ಮುಂದಾದ ಕೇಂದ್ರ
ಅನರ್ಹರನ್ನು ಪತ್ತೆ ಹಚ್ಚಲೆಂದೇ ಕೇಂದ್ರ ಸರ್ಕಾರವು ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಪ್ರಾರಂಭದಲ್ಲಿ ತಾಂತ್ರಿಕ ತೊಂದರೆ ಉಂಟಾಗಿದ್ದರಿಂದ ನಾಲ್ಕೈದು ಬಾರಿ ಗಡುವು ವಿಸ್ತರಿಸಲಾಗಿತ್ತು. ಬಳಿಕ ರಾಜ್ಯಗಳ ಬೇಡಿಕೆ ಆಧಾರಿಸಿ ಐದಾರು ಸಲ ಅವಧಿ ನೀಡಲಾಗಿದ್ದರೂ ರಾಜ್ಯದ ರೈತರು ಇ-ಕೆವೈಸಿಗೆ ಬಗ್ಗೆ ತಲೆ ಕೆಡಿಕೊಳ್ಳುತ್ತಿಲ್ಲ. ಇನ್ನೂ ಬೃಹತ್ ಸಂಖ್ಯೆಯಲ್ಲಿ ನೊಂದಣಿ ಮಾಡಿಸದೇ ದೂರ ಉಳಿದಿದ್ದಾರೆ. ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಭೂಮಿ ಹೊಂದಿರುವ ಎಲ್ಲ ರೈತರಿಗೂ ವಾರ್ಷಿಕವಾಗಿ 10 ಸಾವಿರ ರು. ಸಹಾಯಧನ ನೀಡಲಿವೆ. ಮುಂದಿನ ಕಂತು ಬಿಡುಗಡೆಯಾಗುವುದರೊಳಗೆ ಬಾಕಿ ಇರುವ ಅರ್ಹ ರೈತರು ಇ-ಕೆವೈಸಿ ಮಾಡಿಸದಿದ್ದರೆ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತಿದ್ದ ಹಣಕ್ಕೆ ತಡೆ ಬೀಳಲಿದೆ.
ಗ್ರಾಮ ಮಟ್ಟದ ಅದಾಲತ್ ನಡೆಯಲಿ
ಅರ್ಹ ಫಲಾನುಭವಿಗಳನ್ನು ತಲುಪಲು ಇ-ಕೆವೈಸಿ ಸರಿಯಾದ ಕ್ರಮವಾಗಿದೆ. ಇ-ಕೆವೈಸಿ ಮಾಡಿಸುವಂತೆ ಸಾಕಷ್ಟು ಪ್ರಚಾರ ಮಾಡಿದ್ದರೂ ರೈತರು ಅಷ್ಟೊಂದು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಒಟಿಪಿ ಆಧಾರದಲ್ಲಿ ಮೊಬೈಲ್ ಮೂಲಕವೂ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ಬಯೋ ಮೆಟ್ರಿಕ್ ಆಧಾರದಲ್ಲೂ ಇ-ಕೆವೈಸಿ ಮಾಡಿಸಬಹುದು. ಆದರೆ ಲಕ್ಷಾಂತರ ರೈತರು ಇದರ ಗೊಡವೆಗೆ ಹೋಗುತ್ತಿಲ್ಲ. ಆದ್ದರಿಂದ ಕೃಷಿ ಇಲಾಖೆಯು ಇದನ್ನು ಸವಾಲಾಗಿ ಸ್ವೀಕರಿಸಿ ಗ್ರಾಮ ಮಟ್ಟದಲ್ಲಿ ಒಂದು ಬಾರಿ ಅದಾಲತ್ ಹಮ್ಮಿಕೊಂಡು ಅರ್ಹರಿಗೆ ಇ-ಕೆವೈಸಿ ಮಾಡಿಸಿದರೆ ಅನುಕೂಲ ಎಂಬ ಮಾತುಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ