
ಬೆಂಗಳೂರು (ಡಿ.25): ಅಪ್ರಾಪ್ತರಿಗೆ ಪಾಸ್‌ಪೋರ್ಟ್ ನೀಡುವ ನಿಯಮಗಳಲ್ಲಿ ಗೊಂದಲಗಳಿರುವ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ಹೈಕೋರ್ಟ್, ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಕೋರ್ಟ್‌ಗಳಲ್ಲಿ ವಿವಾಹ ವಿಚ್ಛೇದನ ಪ್ರಕರಣ ಬಾಕಿ ಇದ್ದ ಸಂದರ್ಭದಲ್ಲಿ ಅಪ್ರಾಪ್ತರಿಗೆ ಪಾಸ್‌ಪೋರ್ಟ್ ನೀಡಬೇಕೆಂದು ಪಾಸ್‌ಪೋರ್ಟ್ ಮ್ಯಾನುಯಲ್ 2020 ತಿಳಿಸಿದ್ದರೂ ಈ ನಿಯಮದ ಪಾಲನೆ ಆಗುತ್ತಿಲ್ಲ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಪಾಸ್‌ಪೋರ್ಟ್ ನಿಯಮಗಳಿಗೂ, ವಿವಾಹ ವಿಚ್ಛೇದನ ಮತ್ತು ಮಕ್ಕಳ ಹಕ್ಕುಗಳ ಕಾಯ್ದೆಯ ನಡುವೆ ಕೆಲವು ಗೊಂದಲಗಳಿವೆ. ಹಾಗಾಗಿ ತಿದ್ದುಪಡಿಗೆ ಇದು ಸಕಾಲ ಎಂದು ನ್ಯಾಯಾಲಯ ಹೇಳಿದೆ. ಪತಿ, ಪತ್ನಿ ಕೌಟುಂಬಿಕ ವ್ಯಾಜ್ಯಗಳಲ್ಲಿ ತೊಡಗಿದ್ದಾಗ ಒರ್ವ ಪೋಷಕರು ಅಪ್ರಾಪ್ತ ಮಗುವಿಗೆ ಪಾಸ್ ಪೋರ್ಟ್ ಕೋರಿ ಅರ್ಜಿ ಸಲ್ಲಿಸಿದರೆ ಪೋಷಕರ ವಿಳಾಸ ಮತ್ತು ವಿವರಗಳನ್ನು ಆಧರಿಸಿ ಮಗುವಿಗೆ ಪಾಸ್‌ಪೋರ್ಟ್ ನೀಡಬೇಕೆಂದು ನ್ಯಾಯಪೀಠ ಸೂಚಿಸಿದೆ. ಪಾಸ್‌ಪೋರ್ಟ್ ವಿತರಣೆಯಲ್ಲಿ ಅಧಿಕಾರಿಗಳು ಹಲವು ಬಗೆಯ ಸಮಸ್ಯೆ ಎದುರಿಸುತ್ತಿರುವುದು ಕೋರ್ಟ್ ಗಮನಕ್ಕೂ ಬಂದಿದೆ. ಆದರೆ ಪಾಸ್‌ಪೋರ್ಟ್ ನಿಯಮಕ್ಕೂ, ಮ್ಯಾನುಯಲ್‌ಗೂ ವ್ಯತ್ಯಾಸವಿದೆ.
ದುಬೈ ಮಹಿಳೆ ಮೇಲಿನ ಕೇಸ್ ರದ್ದತಿಗೆ ಒಪ್ಪದ ಹೈಕೋರ್ಟ್
ಆದುದರಿಂದ ಕೇಂದ್ರ ಸರಕಾರ ನಿಯಮಗಳಿಗೆ ತಿದ್ದುಪಡಿ ಮಾಡಿ ಆ ಮೂಲಕ ಅಪ್ರಾಪ್ತರಿಗೆ ಪಾಸ್‌ಪೋರ್ಟ್ ಪಡೆಯಲು ಆಗುತ್ತಿರುವ ತೊಂದರೆಗಳನ್ನು ನಿವಾರಿಸುವಂತೆ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ತಮ್ಮ ಅಪ್ರಾಪ್ತ ಮಗನನ್ನು ಸುಪರ್ದಿಗೆ ಪಡೆದಿರುವ ಅರ್ಜಿದಾರರು ಕ್ರಿಸ್ಮಸ್ ಆಚರಣೆಗೆ ಆಸ್ಪ್ರೇಲಿಯಾಕ್ಕೆ ತೆರಳಲು ಮಗನ ಪಾಸ್‌ಪೋರ್ಟ್ ನವೀಕರಣಕ್ಕಾಗಿ 2022ರ ಜು.2ರಂದು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರು ಗಂಡನಿಂದ ಬೇರ್ಪಟ್ಟಿರುವ ಕಾರಣ ಅವರು ಪತಿಯ ಸಹಿಯನ್ನು ಸಲ್ಲಿಸಿರಲಿಲ್ಲ. ಪಾಸ್‌ಪೋರ್ಟ್ ಅಧಿಕಾರಿಗಳಿ ಈ ಕಾರಣಕ್ಕೆ ಮಗುವಿನ ಪಾಸ್‌ಪೋರ್ಟ್ ನವೀಕರಿಸಿರಲಿಲ್ಲ. ಇದನ್ನು ಅರ್ಜಿದಾರರು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಪಕ್ಷಾಂತರ ನಿಷೇಧ ನಿಯಮ ರೂಪಿಸಲು ಸರ್ಕಾರಕ್ಕೆ ಆದೇಶ: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವೇಳೆ ವಿಪ್ ಉಲ್ಲಂಘನೆ ಪ್ರಕರಣದಲ್ಲಿ ಸಿಲುಕಿ ಸದಸ್ಯರು ಅನರ್ಹತೆಗೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದ ‘ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ ಕಾಯ್ದೆ) 1987’ರ ಕಾಯ್ದೆಯಡಿ ಅನರ್ಹತೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೂಕ್ತ ನಿಯಮ ರೂಪಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಅಕ್ರಮ ಸಂಬಂಧದಿಂದ ಜನಿಸಿದ ಮಗುವೂ ಪರಿಹಾರಕ್ಕೆ ಅರ್ಹ: ಹೈಕೋರ್ಟ್
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ವಿಪ್ ಉಲ್ಲಂಘಿಸಿದ ಆರೋಪ ಸಂಬಂಧ ತಮ್ಮನ್ನು ಸದಸ್ಯರ ಸ್ಥಾನದಿಂದ ಅನರ್ಹತೆಗೊಳಿಸಿದ ಜಿಲ್ಲಾಧಿಕಾರಿಯ ಕ್ರಮ ಪ್ರಶ್ನಿಸಿ ಸವಿತಾ, ಚಾಂದಿನಿ ಮತ್ತು ಗೋದಾವರಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್. ಸಂಜಯ ಗೌಡ ಅವರ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ರಾಜ್ಯ ಸರ್ಕಾರವು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ ಕಾಯ್ದೆ) 1987ರ ಕಾಯ್ದೆಯಡಿಯಲ್ಲಿ ಅನರ್ಹತೆ ಪ್ರಕ್ರಿಯೆಗೆ ನಿಯಮ ರೂಪಿಸುವವರೆಗೆ ರಾಜಕೀಯ ಪಕ್ಷದ ತೀರ್ಮಾನವನ್ನು (ವಿಪ್) ಚುನಾಯಿತ ಸದಸ್ಯರಿಗೆ ರವಾನಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಇದೇ ವೇಳೆ ರಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ