Latest Videos

ವರ್ಜೀನಿಯಾದಲ್ಲಿ ಆ.30ರಿಂದ 3 ದಿನ 12ನೇ ಅಕ್ಕ ಸಮ್ಮೇಳನ: ಅಮೆರಿಕದ 42 ಸಂಘಗಳಿಂದ ಕನ್ನಡ ಹಬ್ಬ

By Kannadaprabha NewsFirst Published Jun 15, 2024, 9:26 AM IST
Highlights

ಕನ್ನಡ ನಾಡಿನ ಕಲೆ, ಸಂಸ್ಕೃತಿ, ಭಾಷೆಯನ್ನು ಸಪ್ತಸಾಗರದಾಚೆ ಪಸರಿಸುವ, ಬೆಳೆಸುವ 12ನೇ ಅಕ್ಕ ವಿಶ್ವ ಸಮ್ಮೇಳನ-2024 ಅಮೆರಿಕದ ವರ್ಜೀನಿಯಾ ರಾಜ್ಯದ ರಿಚ್‌ಮಂಡ್‌ ನಗರದಲ್ಲಿ ಆಗಸ್ಟ್‌ 30, 31 ಮತ್ತು ಸೆಪ್ಟೆಂಬರ್‌ 1ರಂದು ಅದ್ಧೂರಿಯಾಗಿ ನಡೆಯಲಿದೆ.

ಬೆಂಗಳೂರು (ಜೂ.15): ಕನ್ನಡ ನಾಡಿನ ಕಲೆ, ಸಂಸ್ಕೃತಿ, ಭಾಷೆಯನ್ನು ಸಪ್ತಸಾಗರದಾಚೆ ಪಸರಿಸುವ, ಬೆಳೆಸುವ 12ನೇ ಅಕ್ಕ ವಿಶ್ವ ಸಮ್ಮೇಳನ-2024 ಅಮೆರಿಕದ ವರ್ಜೀನಿಯಾ ರಾಜ್ಯದ ರಿಚ್‌ಮಂಡ್‌ ನಗರದಲ್ಲಿ ಆಗಸ್ಟ್‌ 30, 31 ಮತ್ತು ಸೆಪ್ಟೆಂಬರ್‌ 1ರಂದು ಅದ್ಧೂರಿಯಾಗಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ‘ಅಮೆರಿಕ ಕನ್ನಡ ಕೂಟಗಳ ಒಕ್ಕೂಟ’ದ (ಅಕ್ಕ) ಅಧ್ಯಕ್ಷರಾದ ರವಿ ಬೋರೇಗೌಡ ಅವರು, ಒಟ್ಟು 42 ಅಮೆರಿಕ ಕನ್ನಡ ಸಂಘಗಳು ಸೇರಿ ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸುತ್ತಿವೆ. ಸಮ್ಮೇಳನದಲ್ಲಿ ಎಲ್ಲಾ ವಯೋಮಾನದವರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ವಿಜೇತರಿಗೆ ಕರ್ನಾಟಕದಿಂದ ಆಗಮಿಸುವ ಗಣ್ಯರಿಂದ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.

ಕನ್ನಡ ನಾಡಿನ ಕಲೆ, ಸಂಸ್ಕೃತಿಯ ವಿವಿಧ ಮಾದರಿಯ ವಸ್ತ್ರ ಮಾದರಿ ಪ್ರದರ್ಶನ (ಫ್ಯಾಷನ್‌ ಶೋ), ಅಮೆರಿಕ ಮತ್ತು ಕರ್ನಾಟಕದ ಸಾಹಿತಿಗಳ ನಡುವೆ ಸಮ್ಮಿಲನ ಹಾಗೂ ಸಾಹಿತ್ಯ ವಿಚಾರಗೋಷ್ಠಿಗಳು ಜರುಗಲಿವೆ. ಅಮೆರಿಕ, ಭಾರತ ಮತ್ತು ಕರ್ನಾಟಕದ ವಿವಿಧ ಇಲಾಖೆಗಳ ಮಳಿಗೆಗಳು ಪ್ರದರ್ಶನಗೊಳ್ಳಲಿವೆ. ಪ್ರತಿದಿನ ಕರ್ನಾಟಕದ ಜಾನಪದ, ಸಾಹಿತ್ಯ, ಸಿನಿಮಾ ಕುರಿತಾದ ಸಂಗೀತ ಕಾರ್ಯಕ್ರಮಗಳು, ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣ, ನವೀನ್ ಸಜ್ಜು, ಅನುರಾಧಾ ಭಟ್ ಮತ್ತು ಅವರ ತಂಡದಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ವಿಶೇಷ ಬಿಸಿನೆಸ್ ಫೋರಂ: ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ ವಾಣಿಜ್ಯೋದ್ಯಮಿಗಳಿಗೆ ಅಲ್ಲಿ ಉದ್ಯಮ ಆರಂಭಿಸಲು ಮತ್ತು ಕೆಲಸ ನಿರ್ವಹಿಸಲು ಇರುವ ಅವಕಾಶಗಳ ಕುರಿತು ಆಸಕ್ತ ಕನ್ನಡಿಗರಿಗಾಗಿ ವಿಶೇಷ ಬಿಸಿನೆಸ್ ಫೋರಂ ಮೂಲಕ ಚರ್ಚೆ ನಡೆಸಲಾಗುತ್ತದೆ. ಮೂರು ದಿನಗಳ ಸಮ್ಮೇಳನದಲ್ಲಿ ಕನ್ನಡ ನಾಡಿನ ವಿಶಿಷ್ಟ ಭಕ್ಷ್ಯ ಭೋಜನ ಸವಿಯುವ ಅವಕಾಶ ಲಭಿಸಲಿದೆ. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ಎಲ್ಲ ಮಾದರಿಯ ಊಟವನ್ನು ಪ್ರಸಿದ್ಧ ಅಡುಗೆ ತಯಾರಕರು ತಯಾರಿಸಿ ಬಡಿಸಲಿದ್ದಾರೆ ಎಂದರು.

ವಿಶೇಷ ಸೌಲಭ್ಯ ಆರೋಪ ಹಿನ್ನೆಲೆ: ನಟ ದರ್ಶನ್‌ ಇರುವ ಠಾಣೆ ಸಿಸಿಟೀವಿ ದೃಶ್ಯ ಕೋರಿ ಆರ್‌ಟಿಐ ಅರ್ಜಿ!

ವಿಶೇಷ ಆಕರ್ಷಣೆಗಳು: ಯುವಕ, ಯುವತಿಯರಿಗಾಗಿ ವಿಶೇಷ ಕ್ರೀಡಾ ಸ್ಪರ್ಧೆಗಳು, ತಂತ್ರಜ್ಞಾನ ಕುರಿತು ಚರ್ಚೆ, ಆರೋಗ್ಯ, ಶಿಕ್ಷಣ, ಆಯುಷ್‌ ಮತ್ತು ಕನ್ನಡಿಗರ ಸಾಮಾಜಿಕ ಸಮಸ್ಯೆಗಳ ಕುರಿತು ಸಂವಾದ ನಡೆಯಲಿದೆ. ಕನ್ನಡ ಕಲಾವಿದರ ಚಿತ್ರಗಳು, ಶಿಲ್ಪಿಗಳು ಮತ್ತು ಕರಕುಶಲ ವಸ್ತುಗಳ ಪ್ರದರ್ಶನ, ಕರ್ನಾಟಕದ ಪಾರಂಪರಿಕ ನೃತ್ಯ ರೂಪಗಳು, ಯಕ್ಷಗಾನ, ಡೊಳ್ಳು ಕುಣಿತ ಮತ್ತು ವೀರಗಾಸೆ ಪ್ರದರ್ಶನ ಇರಲಿದೆ. ಅಕ್ಕ ಸಮ್ಮೇಳನದ ರಾಯಭಾರಿಯೂ ಆಗಿದ್ದ ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಸಮರ್ಪಿತ ವಿಶೇಷ ‘ಪುನೀತ್‌ ನಮನ’ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಕ್ಕ ಕಾರ್ಯದರ್ಶಿ ಮಾದೇಶ ಬಸವರಾಜು, ಖಜಾಂಚಿ ನಾಗಶಂಕರ್‌ ಚಂದ್ರಶೇಖರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!