Corona Crisis: ಮತ್ತೆ 1000 ದಾಟಿದ ಕೇಸ್‌: 4% ಪಾಸಿಟಿವಿಟಿ

By Govindaraj S  |  First Published Jul 7, 2022, 8:56 AM IST

ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಮತ್ತೆ ಸಾವಿರದ ಗಡಿ ದಾಟಿದೆ. ಬುಧವಾರ 1,127 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 1,044 ಮಂದಿ ಚೇತರಿಸಿಕೊಂಡಿದ್ದಾರೆ. ಜು.1 ರಂದು 1,073 ಮಂದಿಯಲ್ಲಿ ಸೋಂಕು ಪತ್ತೆಯಾದ ನಂತರ ಸೋಂಕಿತರ ಸಂಖ್ಯೆ 800-900ಕ್ಕೆ ಕುಸಿದಿತ್ತು. 


ಬೆಂಗಳೂರು (ಜು.07): ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಮತ್ತೆ ಸಾವಿರದ ಗಡಿ ದಾಟಿದೆ. ಬುಧವಾರ 1,127 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 1,044 ಮಂದಿ ಚೇತರಿಸಿಕೊಂಡಿದ್ದಾರೆ. ಜು.1 ರಂದು 1,073 ಮಂದಿಯಲ್ಲಿ ಸೋಂಕು ಪತ್ತೆಯಾದ ನಂತರ ಸೋಂಕಿತರ ಸಂಖ್ಯೆ 800-900ಕ್ಕೆ ಕುಸಿದಿತ್ತು. ಇದೀಗ ಮತ್ತೆ ದೈನಂದಿನ ಪ್ರಕರಣಗಳ ಸಂಖ್ಯೆ ನಾಲ್ಕಂಕಿಗೆ ಏರಿಕೆ ಕಂಡಿದೆ.

26,437 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು ಪಾಸಿಟಿವಿಟಿ ದರ ಶೇ.4.26ಕ್ಕೆ ಏರಿದೆ. ಬೆಂಗಳೂರು ನಗರದಲ್ಲಿ 1,053 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮೈಸೂರು ಮತ್ತು ದಕ್ಷಿಣ ಕನ್ನಡ ತಲಾ 13, ಧಾರವಾಡ 11 ಮತ್ತು ಬಳ್ಳಾರಿಯಲ್ಲಿ 9 ಮಂದಿ ಸೋಂಕಿತರು ಪತ್ತೆಯಾಗಿದೆ. ಈವರೆಗೆ ಒಟ್ಟು 39.75 ಲಕ್ಷ ಮಂದಿಯಲ್ಲಿ ಸೋಂಕು ವರದಿಯಾಗಿದ್ದು 39.28 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 6,481 ಸಕ್ರಿಯ ಪ್ರಕರಣಗಳಿವೆ. 40,080 ಮಂದಿ ಅಸುನೀಗಿದ್ದಾರೆ.

Latest Videos

3 ದಿನಗಳ ಬಳಿಕ ರಾಜ್ಯದಲ್ಲಿ ಕೋವಿಡ್‌ ಹೆಚ್ಚಳ: ಇಬ್ಬರು ಸೋಂಕಿತರು ಸಾವು

ಬೆಂಗಳೂರಿನಲ್ಲಿ 1 ಸಾವಿರ ಗಡಿ ದಾಟಿದ ಕೇಸ್‌: ನಗರದಲ್ಲಿ ಮಂಗಳವಾರ 1053 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.4.99ರಷ್ಟಿದೆ. 985 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ. ನಗರದಲ್ಲಿ ಸದ್ಯ 6056 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 93 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6111 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 

848 ಮಂದಿ ಮೊದಲ ಡೋಸ್‌, 1696 ಮಂದಿ ಎರಡನೇ ಡೋಸ್‌ ಮತ್ತು 3567 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 18,623 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 14202 ಆರ್‌ಟಿಪಿಸಿಆರ್‌ ಹಾಗೂ 4421 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ. ಮಂಗಳವಾರ ಮಹದೇವಪುರ ವಲಯದಲ್ಲಿ ಹೊಸದಾಗಿ ಒಂದು ಕಂಟೈನ್ಮೆಂಟ್‌ ಪ್ರದೇಶ ಸೃಷ್ಟಿಯಾಗಿದೆ.

ಕೋವಿಡ್‌ ಸೋಂಕು ಪತ್ತೆಯಾದರೆ ಸೀಲ್‌ಡೌನ್‌ ಇಲ್ಲ:  ನಗರದಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಲಕ್ಷಣಗಳಿರುವವರನ್ನು ಶಾಲೆ, ಕಾಲೇಜು ಮತ್ತು ಕಚೇರಿಗೆ ಹಾಜರಾಗದಂತೆ ಸೂಚಿಸಬೇಕು ಎಂಬುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೊರಡಿಸಿದೆ. ನಗರ ವ್ಯಾಪ್ತಿಗೆ ಅನ್ವಯಿಸಿ ಶಿಕ್ಷಣ ಸಂಸ್ಥೆ, ಕಾಲೇಜು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಕೋವಿಡ್‌ ಪರೀಕ್ಷೆ, ಚಿಕಿತ್ಸೆ, ಕ್ವಾರಂಟೈನ್‌, ಪ್ರವೇಶ ಕುರಿತ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. 

Covid Crisis: ಮಾಸ್ಕ್‌ ಧರಿಸದವರಿಗೆ ದಂಡ ಹಾಕಿ: ತಜ್ಞರು

ಸೋಂಕು ಕಂಡು ಬಂದರೆ ಶಾಲೆಗಳನ್ನು ಮುಚ್ಚುವ ಅಥವಾ ಅಪಾರ್ಟ್‌ಮೆಂಟ್‌ಗಳನ್ನು ಸೀಲ್‌ಡೌನ್‌ ಮಾಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಶಾಲೆಗಳಲ್ಲಿ (12 ತರಗತಿವರೆಗೆ) ಸೋಂಕು ಲಕ್ಷಣ ಹೊಂದಿರುವ ಮಕ್ಕಳನ್ನು ಶಾಲೆಗೆ ಹಾಜರಾಗದಂತೆ ಸೂಚಿಸಬೇಕು. ಸೋಂಕು ಲಕ್ಷಣ ಹೊಂದಿರುವವರನ್ನು ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟಲ್ಲಿ ಅವರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಹೋಂ ಐಸೋಲೇಷನ್‌, ಕೋವಿಡ್‌ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಬೇಕು. ವರದಿ ನೆಗೆಟಿವ್‌ ಬಂದಲ್ಲಿ ಆರ್‌ಟಿಪಿಸಿಆರ್‌ ಮಾದರಿ ಪರೀಕ್ಷೆ ವರದಿ ಬರುವವರೆಗೂ ನಿಗಾದಲ್ಲಿ ಇರಿಸಿ ನಂತರ ಕ್ರಮ ವಹಿಸಬೇಕು.

click me!