ರಾಜ್ಯದಲ್ಲಿ 110 ಪಿಎಫ್‌ಐ ಮುಖಂಡರ ಬಂಧನ: ಗೃಹ ಸಚಿವ ಅರಗ ಜ್ಞಾನೇಂದ್ರ

By Suvarna NewsFirst Published Oct 1, 2022, 3:40 PM IST
Highlights

 ರಾಜ್ಯದಲ್ಲಿ ಪಿಎಫ್‌ಐನ 110 ಜನರನ್ನು ಬಂಧಿಸಲಾಗಿದೆ.  ಕೆಲವೊಂದು ಕಡೆ ಪಿಎಫ್‌ಐ ಕಚೇರಿಗೆ ಬೀಗ ಮುದ್ರೆ ಹಾಕಲಾಗಿದೆ. ಈ ವೇಳೆ ಲ್ಯಾಪ್‌ಟ್ಯಾಪ್‌ ಹಾಗೂ ಕೆಲ ವಸ್ತುಗಳು ಸಿಕ್ಕಿವೆ. ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ. 

ತುಮಕೂರು (ಅ.1): ರಾಜ್ಯದಲ್ಲಿ ಪಿಎಫ್‌ಐನ 110 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ತುಮಕೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೊನ್ನೆ ಒಂದೇ ದಿನ 106 ಜನ ಬಂಧನಕ್ಕೆ ಒಳಗಾಗಿದ್ದಾರೆ. ಗುರುವಾರ ನಾಲ್ಕು ಜನರನ್ನ ಬಂಧಿಸಲಾಗಿದೆ. ನಮ್ಮ ಮಾಹಿತಿ ಪ್ರಕಾರ ಒಟ್ಟು 110 ಜನರನ್ನು್ನ ಬಂಧಿಸಲಾಗಿದೆ. ಕೆಲವೊಂದು ಕಡೆ ಪಿಎಫ್‌ಐ ಕಚೇರಿಗೆ ಬೀಗ ಮುದ್ರೆ ಹಾಕಲಾಗಿದೆ. ಈ ವೇಳೆ ಲ್ಯಾಪ್‌ಟ್ಯಾಪ್‌ ಹಾಗೂ ಕೆಲ ವಸ್ತುಗಳು ಸಿಕ್ಕಿವೆ. ಅದರಲ್ಲಿ ಏನೇನಿದೆ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ತುಮಕೂರಿನಲ್ಲಿಯೂ ಸಹ ಪಿಎಫ್‌ಐ ಜಿಲ್ಲಾಧ್ಯಕ್ಷನನ್ನು ಬಂಧಿಸಲಾಗಿದೆ. ತುಮಕೂರಿನಲ್ಲಿ ಯಾವುದೇ ಕಚೇರಿಯಿಲ್ಲ. ಈಗಾಗಲೇ ಅವರ ಪರ್ಸನಲ್ ಬ್ಯಾಂಕ್‌ ಅಕೌಂಟ್‌ಗಳನ್ನು ಇಡಿ ನೋಡುತ್ತಿದೆ. ಎನ್‌ಐಎ ತನಿಖೆ ನಡೆಸುತ್ತಿದೆ. ಇವತ್ತು ಬಂಟ್ವಾಳದಲ್ಲಿ ಪಿಎಫ್‌ಐ ಟ್ರೈನಿಂಗ್‌ ಕಚೇರಿಯನ್ನು ಸೀಜ್ ಮಾಡಲಾಗಿದೆ ಎಂದು ತಿಳಿಸಿದರು. ಅಕ್ರಮ ಚಟುವಟಿಕೆಗಳ ಕೇಂದ್ರ ಎನಿಸಿಕೊಳ್ಳುತ್ತಿರುವ ಮಿತ್ತೂರು ಫ್ರೀಡಂ ಕಮ್ಯುನಿಟಿ ಹಾಲ್‌ ಅನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮುಚ್ಚಿ ವಶಪಡಿಸಿಕೊಳ್ಳಲಾಗಿದೆ. ಪಿಎಫ್‌ಐ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ನೇರಳಕಟ್ಟೆಸಮೀಪದ ಮಿತ್ತೂರು ಹಾಲ್‌ನಲ್ಲಿ ಅಕ್ರಮ ಚಟುವಟಿಕೆಗಳಿಗೆ ತರಬೇತಿ ನೀಡಲಾಗುತ್ತಿತ್ತು ಎಂಬ ಕಾರಣ ನೀಡಿ ಬಂದ್‌ ಮಾಡಲಾಗಿದೆ. ಜಿಲ್ಲಾಧಿಕಾರಿ ಆದೇಶದಂತೆ ವಿಟ್ಲ ನಾಡಕಚೇರಿಯ ಕಂದಾಯ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. 

ಭಾರತ್‌ ಜೋಡೋ ಯಾತ್ರೆಯಿಂದ ಹೊಡೆತ ಬೀಳಲ್ಲ:  ಕರ್ನಾಟಕದಲ್ಲಿ ಭಾರತ್‌ ಜೋಡೋ ಯಾತ್ರೆ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿಗೆ ಹೊಡತ ಬೀಳುತ್ತಾ ಎಂಬ ಪ್ರಶ್ನೆಗೆ ಅದರಿಂದ ಯಾವುದೇ ಹೊಡೆತ ಬೀಳಲ್ಲ. ಸ್ವಾತಂತ್ರ್ಯ ಬಂದಾಗ ದೇಶವನ್ನು ಒಡೆದಿದ್ದು ಇವರೆ. ಗಾಂಧೀಜಿ ತಡೆದರೂ ಕೂಡ ದೇಶವನ್ನು ವಿಭಜನೆ ಮಾಡಿದರು. ಆ ಸಮಯದಲ್ಲಿ ಕಾಂಗ್ರೆಸ್‌ನವರು ಪಾಕಿಸ್ತಾನವನ್ನು ಮಾಡಿಕೊಟ್ಟರು. ಆಮೇಲೆ ಊರೂರು ಹೊಡೆಯುವಂತಹ ಮತೀಯ ಶಕ್ತಿಗಳನ್ನು ಎತ್ತಿ ಕಟ್ಟಿದ್ದಾರೆ.

ಈ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಯನ್ನು ಹಾಳು ಮಾಡಿದ್ದು, ಒಂದು ಧರ್ಮದವರು ಇನ್ನೊಂದು ಧರ್ಮವನ್ನು ಅನುಮಾನದಿಂದ ನೋಡುವಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಇವರೇ. ಅದೆಲ್ಲವೂ ಕಾಂಗ್ರೆಸ್‌ನ ಬಳುವಳಿ ಈ ದೇಶಕ್ಕೆ ಎಂದ ಜ್ಞಾನೇಂದ್ರ, ಅವರಿಗೆ ಅವರ ಓಟ್‌ಬ್ಯಾಂಕ್‌, ಅವರ ಅಧಿಕಾರ ಮುಖ್ಯವೆ ಹೊರತು, ಕಾಂಗ್ರೆಸ್‌ನವರಿಗೆ ಈ ದೇಶ ಮುಖ್ಯವಲ್ಲ. ಭಾರತ್‌ ಜೋಡೋ ಇದು ಅರ್ಥವೆ ಇಲ್ಲದ್ದು. ಇದರಿಂದ ಅವರಿಗೆ ಏನು ಉಪಯೋಗ ಇಲ್ಲ. ಅಧಿಕಾರ ಕಳೆದು ಕೊಂಡ ಮೇಲೆ ಭಾರತ್‌ ಜೋಡೋ ಮಾಡ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಯಾಕೆ ಭಾರತ್‌ ಜೊಡೋ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದ ಸಚಿವರು, ನಮಗೆ ಭಾರತ ಒಂದಾಗಿದ್ದರೆ ಸಾಕು. ಅದರಲ್ಲೂ ಅಖಂಡ ಭಾರತವನ್ನ ಮಾಡ ಬೇಕು ಎನ್ನುವುದು ನಮ್ಮ ಇಚ್ಚೆ ಎಂದರು.

ಪಿಎಫ್‌ಐನ ಮಿತ್ತೂರಿನ ತರಬೇತಿ ಕೇಂದ್ರಕ್ಕೆ ಬೀಗ: ಪ್ರವೀಣ್‌, ಶರತ್‌ ಹತ್ಯೆಗೆ ಇಲ್ಲೇ ಸ್ಕೆಚ್‌?

ಸಿದ್ಧರಾಮಯ್ಯಗೆ ಓಟಿನ ಹಿತದೃಷ್ಟಿ ಮುಖ್ಯ: ಪಿಎಫ್‌ಐ ಬ್ಯಾನ್‌ ಮಾಡಿದ್ದು ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯಗೆ ಇಷ್ಟವಿಲ್ಲ. ಅವರಿಗೆ ದೇಶದ ಹಿತದೃಷ್ಟಿಗಿಂತ ಓಟಿನ ಹಿತದೃಷ್ಟಿಮುಖ್ಯ. ಇದು ಚುನಾವಣಾ ವರ್ಷ, ಅವರ ಓಟ್‌ಬ್ಯಾಂಕ್‌ಗೆ ಹಾನಿಯಾಗುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಪಿಎಫ್‌ಐ ನಿಷೇಧ ಮಾಡಬಾರದಿತ್ತು ಎಂದು ಹೇಳುವ ಬದಲು, ಆರ್‌ಎಸ್‌ಎಸ್‌ನ್ನು ಯಾಕೆ ಬ್ಯಾನ್‌ ಮಾಡಲ್ಲ ಎಂದಿದ್ದಾರೆ.

 

ಪಿಎಫ್‌ಐ ದಾಳಿ ವೇಳೆ ಸಾವರ್ಕರ್‌ ಸೇರಿ ಹಲವು ಪುಸ್ತಕ, ಹಣ ಪತ್ತೆ

ಆರ್‌ಎಸ್‌ಎಸ್‌ ಒಂದು ದೇಶ ಭಕ್ತ ಸಂಘಟನೆ. ಇದು ಎಲ್ಲರಿಗೂ ಗೊತ್ತಿದೆ. ಇಡೀ ದೇಶದ ಎಲ್ಲಾ ಜನ ಸ್ವೀಕಾರ ಮಾಡಿದ್ದಾರೆ. ದೇಶಭಕ್ತರನ್ನ ದೇಶಕ್ಕೆ ಪೂರಕವಾಗಿ ಬದುಕವಂತಹ ವ್ಯಕ್ತಿತ್ವಗಳನ್ನ ಪ್ರತಿನಿತ್ಯ ಆರ್‌ಎಸ್‌ಎಸ್‌ ಬೆಳೆಸುತ್ತಿದೆ. ಹೀಗಾಗಿ ಆರ್‌ಎಸ್‌ಎಸ್‌ ಹಾಗೂ ಪಿಎಫ್‌ಐಗೂ ತಾಳೆ ಹಾಕುವಂತಹದ್ದು ಅವರ ಕೆಟ್ಟಮನಸ್ಥಿತಿಗೆ ಉದಾರಹಣೆಯಾಗಿದೆ. ಓಲೈಕೆ ರಾಜಕಾರಣದಿಂದಲೇ ಅವರ ಪಕ್ಷ ದೇಶದಲ್ಲಿ ಮಣ್ಣು ಪಾಲಾಗಿದೆ ಎಂದು ಅರಗ ಜ್ಞಾನೇಂದ್ರ ಹೇಳಿದರು.

click me!