Bharat Jodo Yatra: ರಾಹುಲ್‌ ಸ್ವಾಗತಕ್ಕೆ ರಾಜ್ಯದ ಗಡೀಲಿ ಕಾಂಗ್ರೆಸ್ ನಾಯಕರೇ ಇರಲಿಲ್ಲ!

By Govindaraj S  |  First Published Oct 1, 2022, 10:59 AM IST

ಭಾರತ ಐಕ್ಯತಾ ಯಾತ್ರೆಯ ಭಾಗವಾಗಿ ರಾಹುಲ್‌ ಗಾಂಧಿ ತಮಿಳುನಾಡು ಗಡಿ ದಾಟಿ ಕರ್ನಾಟಕ ಪ್ರವೇಶಿಸುತ್ತಿದ್ದಂತೆ ಸ್ವಾಗತಿಸಬೇಕಿದ್ದ ರಾಜ್ಯ ಕಾಂಗ್ರೆಸ್‌ ನಾಯಕರು ಕೊಂಚ ಯಾಮಾರಿದ್ದರಿಂದ ರಾಹುಲ್‌ ಗಾಂಧಿ ಅವರು ಏಕಾಂಗಿಯಾಗಿ ರಾಜ್ಯ ಪ್ರವೇಶಿಸುವ ಸ್ಥಿತಿ ನಿರ್ಮಾಣವಾಯಿತು. 


ಬೆಂಗಳೂರು (ಅ.01): ಭಾರತ ಐಕ್ಯತಾ ಯಾತ್ರೆಯ ಭಾಗವಾಗಿ ರಾಹುಲ್‌ ಗಾಂಧಿ ತಮಿಳುನಾಡು ಗಡಿ ದಾಟಿ ಕರ್ನಾಟಕ ಪ್ರವೇಶಿಸುತ್ತಿದ್ದಂತೆ ಸ್ವಾಗತಿಸಬೇಕಿದ್ದ ರಾಜ್ಯ ಕಾಂಗ್ರೆಸ್‌ ನಾಯಕರು ಕೊಂಚ ಯಾಮಾರಿದ್ದರಿಂದ ರಾಹುಲ್‌ ಗಾಂಧಿ ಅವರು ಏಕಾಂಗಿಯಾಗಿ ರಾಜ್ಯ ಪ್ರವೇಶಿಸುವ ಸ್ಥಿತಿ ನಿರ್ಮಾಣವಾಯಿತು. ಗಡಿ ದಾಟಿ ಒಂದಷ್ಟುಕಿ.ಮೀ. ಬಂದ ನಂತರ ಎದುರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರ ನಾಯಕರ ತಂಡ ಮಾರ್ಗಮಧ್ಯದಲ್ಲೇ ಸ್ವಾಗತ ಕೋರಿತು. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಈ ವೇಳೆ ಆಗಮಿಸಿರಲಿಲ್ಲ. ಬದಲಿಗೆ ಗುಂಡ್ಲುಪೇಟೆಯಲ್ಲಿ ರಾಹುಲ್‌ ಅವರನ್ನು ಬರಮಾಡಿಕೊಂಡರು.

ಏಕಾಂಗಿ: ಶುಕ್ರವಾರ ಬೆಳಗ್ಗೆ ತಮಿಳುನಾಡು ಮತ್ತು ಕೇರಳ ಗಡಿಗೆ ಹೊಂದಿಕೊಂಡಿರುವ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ ಮೂಲಕ ರಾಹುಲ್‌ ರಾಜ್ಯ ಪ್ರವೇಶಿಸಿದ್ದಾರೆ. ಈ ವೇಳೆ ರಾಜ್ಯದ ಯಾವುದೇ ಕಾಂಗ್ರೆಸ್‌ ನಾಯಕರು ಸ್ಥಳದಲ್ಲಿದ್ದು ಬರಮಾಡಿಕೊಂಡಿಲ್ಲ. ಈ ಮಧ್ಯೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ವಿವಿಧ ನಾಯಕ ತಂಡ ರಾಹುಲ್‌ ಬರಮಾಡಿಕೊಳ್ಳಲು ಕೆಕ್ಕನಹಳ್ಳಿ ಚೆಕ್‌ಪೋಸ್ಟ್‌ನತ್ತ ತೆರಳುತ್ತಿದ್ದರಾದರೂ ಅಷ್ಟರಲ್ಲಾಗಲೇ ರಾಹುಲ್‌ ರಾಜ್ಯ ಪ್ರವೇಶಿಸಿದ್ದರು.

Tap to resize

Latest Videos

ಜನರ ನೋವು ಆಲಿಸಲು ಭಾರತ ಐಕ್ಯತಾ ಯಾತ್ರೆ: ರಾಹುಲ್‌ ಗಾಂಧಿ

ಇದರಿಂದ ಚೆಕ್‌ಪೋಸ್ಟ್‌ ಮತ್ತು ಗುಂಡ್ಲುಪೇಟೆ ಮಾರ್ಗ ಮಧ್ಯೆ ಅವರನ್ನು ಬರಮಾಡಿಕೊಂಡು ರಾಜ್ಯ ನಾಯಕರು ಕರೆತಂದರು. ಸಿದ್ದರಾಮಯ್ಯ ಅವರು ಮಾರ್ಗಮಧ್ಯದಲ್ಲೇ ಕಾರು ನಿಲ್ಲಿಸಿ ರಾಹುಲ್‌ ಅವರಿಗೆ ಹೂ ಗುಚ್ಚ ನೀಡಿ ರೇಷ್ಮೆ ಶಾಲು ಹೊದಿಸಿ ಸ್ವಾಗತ ಕೋರಿ ಬರಮಾಡಿಕೊಂಡರು. ಬಳಿಕ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ ಅವರ ಕಾರಿನಲ್ಲೇ ಪಯಣ ಬೆಳೆಸಿದ್ದು ವಿಶೇಷವಾಗಿತ್ತು.

ವನಸಿರಿಯಲ್ಲಿ ಉಪಹಾರ: ಗುಂಡ್ಲುಪೇಟೆಯತ್ತ ರಾಹುಲ್‌ ಅವರನ್ನು ಕರೆದುಕೊಂಡು ಹೊರಟ ಸಿದ್ದರಾಮಯ್ಯ ಅವರ ತಂಡ ಮಾರ್ಗ ಮಧ್ಯೆ ಅಂಗಳ ಗ್ರಾಮದ ಸಮೀಪ ವನಸಿರಿ ಹೋಟೆಲ್‌ನಲ್ಲಿ ಉಪಹಾರ ಸೇವಿಸಿತು. ಉದ್ದಿನ ವಡೆ, ಕಾಫಿ ಸೇವಿಸಿ ರಾಹುಲ್‌ ಅಲ್ಲಿಂದ ಪ್ರಯಾಣ ಮುಂದುವರೆಸಿದರು. ಈ ವೇಳೆ ಮಾಜಿ ಸಚಿವರಾದ ಎಚ್‌.ಸಿ.ಮಹದೇವಪ್ಪ, ಕೆ.ಜೆ.ಜಾಜ್‌ರ್‍, ಎಂ.ಬಿ.ಪಾಟೀಲ್‌, ವೀರಪ್ಪ ಮೊಯ್ಲಿ, ಪ್ರಕಾಶ್‌ ರಾಥೋಡ್‌, ಆರ್‌.ವಿ.ದೇಶಪಾಂಡೆ ಮತ್ತಿತರಿದ್ದರು.

ಗುಂಡ್ಲುಪೇಟೆಯಲ್ಲೇ ಡಿಕೆಶಿ ಸ್ವಾಗತ: ಇನ್ನು ಡಿ.ಕೆ.ಶಿವಕುಮಾರ್‌ ರಾಹುಲ್‌ ಗಾಂಧಿ ಅವರನ್ನು ಬರಮಾಡಿಕೊಳ್ಳಲು ಸಿದ್ದರಾಮಯ್ಯ ಅವರ ತಂಡದೊಂದಿಗಾಗಲಿ ಅಥವಾ ಪ್ರತ್ಯೇಕವಾಗಿಯಾಗಲಿ ಗಡಿ ಭಾಗಕ್ಕೆ ಬರಲಿಲ್ಲ. ಬದಲಿಗೆ ಗುಂಡ್ಲುಪೇಟೆಯಲ್ಲಿ ಪಾದಯಾತ್ರೆಗೆ ಚಾಲನೆ ನೀಡಲು ಆಯೋಜಿಸಿದ್ದ ವೇದಿಕೆಯಲ್ಲೇ ರಾಹುಲ್‌ಗೆ ರಾಷ್ಟ್ರಧ್ವಜ ನೀಡಿ ಬರಮಾಡಿಕೊಂಡರು.

ಪಾದಯಾತ್ರೆಯಲ್ಲಿ 25ಸಾವಿರ ಜನ, ಭಾರೀ ಭದ್ರತೆ: ಭಾರತ್‌ ಐಕ್ಯತಾ ಯಾತ್ರೆಯಲ್ಲಿ 25ಸಾವಿರಕ್ಕೂ ಅಧಿಕ ಜನರೊಂದಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೆಜ್ಜೆ ಹಾಕಿದ್ದು ಗುಂಡ್ಲುಪೇಟೆಯಲ್ಲಿ ಐತಿಹಾಸಿಕ ಪಾದಯಾತ್ರೆಯಾಗಿ ಹೊರಹೊಮ್ಮಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಈ ಪ್ರಮಾಣದಲ್ಲಿ ಜನ ಸೇರಿದ್ದು ಇದೇ ಮೊದಲು. ಗುಂಡ್ಲುಪೇಟೆ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದ ಮುಂದೆ ಕೆಪಿಸಿಸಿ ಆಯೋಜಿಸಿದ್ದ ಭಾರತ್‌ ಐಕ್ಯತಾ ಯಾತ್ರೆಯ ಸಮಾರಂಭದಲ್ಲಿ ರಾಹುಲ್‌ ಗಾಂಧಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭಾಷಣ ಮಾಡಿದರು. 

ಕರ್ನಾಟಕದಲ್ಲಿ 40 ದಿನ ಪಾದಯಾತ್ರೆ ಮಾಡಿದ್ರೂ ಕಾಂಗ್ರೆಸ್‌ ಗೆಲ್ಲಲ್ಲ

ಸಭೆಯ ಬಳಿಕ ಬೆಳಗ್ಗೆ 0 ಕ್ಕೆ ಪಾದಯಾತ್ರೆ ಆರಂಭಗೊಂಡು ಸಾವಿರಾರು ಪೊಲೀಸರ ಸರ್ಪಗಾವಲಿನಲ್ಲಿ ಮೈಸೂರು-ಊಟಿ ಹೆದ್ದಾರಿಯ ಕಬ್ಬೇಕಟ್ಟೆಶನೇಶ್ವರಸ್ವಾಮಿ ದೇವಸ್ಥಾನದ ಬಳಿಗೆ 11ರ ವೇಳೆ ಪಾದಯಾತ್ರೆ ತಲುಪಿತು. ಅಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಬಳಿಕ ಊಟ, ವಿಶ್ರಾಂತಿ ಬಳಿಕ ಬೇಗೂರಿಗೆ ಪಾದಯಾತ್ರೆ ಆರಂಭವಾಯಿತು. ರಾತ್ರಿ ಬೇಗೂರನ್ನು ತಲುಪಿತು. ರಾಹುಲ್‌ ಗಾಂಧಿ, ಕಾಂಗ್ರೆಸ್‌ ಪಕ್ಷದ ಬಾವುಟ ಹಿಡಿದ ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿಗೆ ಜೈಕಾರ ಕೂಗುತ್ತಾ ಸಾಗಿದರು. ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಇದ್ದರು.

click me!