ರಾಜ್ಯದಲ್ಲಿ 10 ಜನರಿಗೆ ಕೊರೋನಾ ಸೋಂಕು ದೃಢ!

By Kannadaprabha NewsFirst Published Mar 17, 2020, 7:32 AM IST
Highlights

ಸೋಮವಾರ ಒಂದೇ ದಿನ ಬೆಂಗಳೂರಿನಲ್ಲಿ ಇಬ್ಬರು ಹಾಗೂ ಕಲುಬರ್ಗಿಯಲ್ಲಿ ಒಬ್ಬರು ಸೇರಿದಂತೆ ಮೂರು ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಬರೋಬ್ಬರಿ 10ಕ್ಕೆ ಏರಿಕೆಯಾಗಿದೆ.

ಬೆಂಗಳೂರು [ಮಾ.17]:  ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಮವಾರ ಒಂದೇ ದಿನ ಬೆಂಗಳೂರಿನಲ್ಲಿ ಇಬ್ಬರು ಹಾಗೂ ಕಲುಬರ್ಗಿಯಲ್ಲಿ ಒಬ್ಬರು ಸೇರಿದಂತೆ ಮೂರು ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ ಬರೋಬ್ಬರಿ 10ಕ್ಕೆ ಏರಿಕೆಯಾಗಿದೆ.

ಸೋಮವಾರ ಸಂಜೆ ವೇಳೆಗೆ ಬೆಂಗಳೂರು ಮೂಲದ 32 ವರ್ಷದ ಮತ್ತೊಬ್ಬ ಟೆಕಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಳಿಕ ಸೋಮವಾರ ತಡರಾತ್ರಿ ಮತ್ತಿಬ್ಬರ ಕೊರೋನಾ ಸೋಂಕು ಪರೀಕ್ಷಾ ವರದಿ ಹೊರಬಿದ್ದಿದ್ದು, ಇಬ್ಬರಿಗೂ ಸೋಂಕು ತಗುಲಿರುವುದು ಸಾಬೀತಾಗಿದೆ. ತಡವಾಗಿ ವರದಿಯಾದ ಬೆಂಗಳೂರು ವ್ಯಕ್ತಿ ಹಾಗೂ ಕಲಬುರ್ಗಿ ವ್ಯಕ್ತಿಯ ವಿವರವನ್ನು ಮಂಗಳವಾರ ತಿಳಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸದಾಗಿ ಸೋಂಕು ದೃಢಪಟ್ಟಮೂವರ ಪೈಕಿ ಒಬ್ಬ ಬೆಂಗಳೂರು ಟೆಕಿ (32) ಈಗಾಗಲೇ ಸೋಂಕಿತ ಎಂದು ಘೋಷಿಸಲಾಗಿರುವ 50 ವರ್ಷದ (4ನೇ ಸೋಂಕಿತ) ಟೆಕಿಯ ಸಹೋದ್ಯೋಗಿಯಾಗಿದ್ದು, ಮಾ.8ರಂದು ಈ ಇಬ್ಬರು ಒಂದೇ ವಿಮಾನದಲ್ಲಿ ಲಂಡನ್‌ನಿಂದ ಬೆಂಗಳೂರಿಗೆ ಆಗಮಿಸಿದ್ದರು.

ಘೋಷಿತ ಸೋಂಕಿತ ಟೆಕಿಯು ರಾಜ್ಯದ ನಾಲ್ಕನೇ ಸೋಂಕಿತ ವ್ಯಕ್ತಿಯಾಗಿದ್ದರು. ಅವರಿಗೆ ನಗರಕ್ಕೆ ಹಿಂತಿರುಗಿದ ವೇಳೆ ಸೋಂಕು ಕಾಣಿಸಿಕೊಂಡ ನಂತರ ವಿಮಾನ ನಿಲ್ದಾಣದಿಂದ ನೇರವಾಗಿ ನೇರವಾಗಿ ರಾಜೀವ್‌ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿ ಪರೀಕ್ಷೆ ನಡೆಸಿ ಮನೆಗೆ ವಾಪಸು ಕಳುಹಿಸಲಾಗಿತ್ತು. ಮಾ.9ರಂದು ರೋಗದ ಲಕ್ಷಣಗಳು ಗೋಚರಿಸಿದ್ದರಿಂದ ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಆಗಮಿಸಿದ್ದ ವ್ಯಕ್ತಿಗೆ ಎರಡನೇ ಪರೀಕ್ಷೆ ವೇಳೆ ತಕ್ಷಣ ಸೋಂಕು ದೃಢಪಟ್ಟಿತ್ತು.

ಕರೋನಾ ಕಾಟ; ಕಲ್ಯಾಣ ಕರ್ನಾಟಕ ನಿಟ್ಟುಸಿರು ಬಿಡುವ ಸುದ್ದಿ ಕೊಟ್ಟ ಕೇಂದ್ರ..

ಆದರೆ, ಅವರ ಜೊತೆಯಲ್ಲಿಯೇ ಅಮೆರಿಕದಿಂದ ಲಂಡನ್‌ಗೆ ಆಗಮಿಸಿದ (ಮಾ.8ರಂದು) ವ್ಯಕ್ತಿಯಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಮಾ.8ರಂದು ಮಧ್ಯಾಹ್ನ 2.30ಕ್ಕೆ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಮಾದರಿ ಸಂಗ್ರಹಿಸಲಾಗಿತ್ತು. ಈ ವೇಳೆ ಸೋಂಕು ದೃಢಪಡದ ಹಿನ್ನೆಲೆಯಲ್ಲಿ ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿತ್ತು. ಈ ವ್ಯಕ್ತಿಗೆ ಈಗ ರೋಗದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಇದೀಗ ಎರಡನೇ ಹಂತದ ಪರೀಕ್ಷೆ ಮಾಡಲಾಗಿದ್ದು, ಈ ವೇಳೆ ಸೋಂಕು ದೃಢಪಟ್ಟಿದೆ. ಪ್ರಸ್ತುತ ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ .ಸುಧಾಕರ್‌ ಹೇಳಿದ್ದಾರೆ.

ಇಬ್ಬರೊಂದಿಗೆ ಪ್ರಾಥಮಿಕ ಸಂಪರ್ಕ:

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್‌, ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿದ್ದವರ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ವ್ಯಕ್ತಿಯೊಂದಿಗೆ ಪತ್ನಿ ಹಾಗೂ ಅವರ ಮನೆಯ ಕೆಲಸದಾಕೆ ಮಾತ್ರ ಸಂಪರ್ಕ ಹೊಂದಿದ್ದರು. ಹೀಗಾಗಿ ಅವರನ್ನು ಮನೆಯಲ್ಲೇ ಪ್ರತ್ಯೇಕವಾಗಿಟ್ಟು ನಿಗಾ ವಹಿಸಲಾಗಿದೆ. ಇನ್ನು ಇವರ ಜೊತೆ ಪರೋಕ್ಷ ಸಂಪರ್ಕ ಹೊಂದಿರುವವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಎಲ್ಲರನ್ನೂ ಪತ್ತೆ ಹಚ್ಚಿ ಪ್ರತ್ಯೇಕವಾಗಿಡಲಾಗುವುದು ಎಂದು ಮಾಹಿತಿ ನೀಡಿದರು.

ವೈದ್ಯರೂ ಈಗ ಯೋಧರು!

ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ವೈದ್ಯರು ಸಾಕಷ್ಟುಪರಿಶ್ರಮ ಹಾಕಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ವೈದ್ಯ ಯೋಧರು ಎಂದು ಗುರುತಿಸಿ ನೈತಿಕ ಬೆಂಬಲ ಹಾಗೂ ಆರ್ಥಿಕ ಬೆಂಬಲ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ವೈದ್ಯರಿಗೆ ವಿಮೆ ಸೌಲಭ್ಯ ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಬೆಂಗಳೂರಿನಲ್ಲಿ 3000 ಹಾಸಿಗೆ

ಕೊರೋನಾ ಹಾವಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೂರು ಸಾವಿರ ಹಾಸಿಗೆಗಳ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ. ಈಗಾಗಲೇ ಬೆಂಗಳೂರಿನ ಹದಿನಾಲ್ಕು ಸರ್ಕಾರಿ ಆಸ್ಪತ್ರೆಗಳಲ್ಲಿ ಫಸ್ಟ್‌ ರೆಸ್ಪಾನ್ಸ್‌ ಆಸ್ಪತ್ರೆಗಳಾಗಿ ಗುರುತಿಸಿ ಅಗತ್ಯ ವ್ಯವಸ್ಥೆ ಮಾಡಿದ್ದೇವೆ. ಅಲ್ಲದೆ, ಖಾಸಗಿ ಆಸ್ಪತ್ರೆಗಳಾದ ಆಕಾಶ್‌ ವಿದ್ಯಾಸಂಸ್ಥೆ , ಈಸ್ಟ್‌ ಪಾಯಿಂಟ್‌, ಎಂವಿಜೆ ಮೆಡಿಕಲ್‌ ಕಾಲೇಜು ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಒಟ್ಟು ಬೆಂಗಳೂರಿನಲ್ಲಿ 3 ಸಾವಿರ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಕಲಬುರಗಿ ಮಹಿಳೆಯ ಆರೋಗ್ಯ ಸ್ಥಿರ

ಕಲಬುರಗಿಯಲ್ಲಿ ಕೊರೋನಾ ಸೋಂಕಿನಿಂದ ಮೃತರಾದ ವೃದ್ಧನ 45 ವರ್ಷ ವಯಸ್ಸಿನ ಮಗಳ ಆರೋಗ್ಯ ಸ್ಥಿರವಾಗಿದೆ. ಇವರ ಸಂಪರ್ಕದಲ್ಲಿದ್ದ ಮೂವರಿಗೆ ಸೋಂಕು ಬಂದಿಲ್ಲ ಎಂದು ವೈದ್ಯಕೀಯ ವರದಿಯಿಂದ ದೃಢವಾಗಿದೆ. ಹಾಗೆಯೇ ಇವರ ಸಂಪರ್ಕದಲ್ಲಿದ್ದ 79 ಮಂದಿಯನ್ನು ಪತ್ತೆ ಮಾಡಿ ಅವರ ಮೇಲೂ ನಿಗಾ ವಹಿಸಲಾಗಿದೆ ಎಂದು ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಸೋಂಕು ಶಂಕೆ ಹಿನ್ನೆಲೆಯಲ್ಲಿ ಸೋಮವಾರ 9 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ನಿಲ್ದಾಣಗಳು, ಬಂದರಿನಲ್ಲಿ 1,14,705 ಮಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆರೋಗ್ಯ ಸಹಾಯವಾಣಿಗೆ (104) 2,616 ಮಂದಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಸಹಾಯವಾಣಿಯ 40 ಲೈನ್‌ಗಳ ಪೈಕಿ 10 ಲೈನ್‌ಗಳನ್ನು ವಿದೇಶದಿಂದ ಬಂದವರಿಗೆ ಮೀಸಲಿಡಲಾಗಿದೆ. ಈ ಲೈನ್‌ನ ಮೂಲಕ ಪ್ರತಿ ದಿನ ನಿಗಾದಲ್ಲಿರುವವರಿಗೆ ಕರೆ ಮಾಡಿ ಆರೋಗ್ಯದ ಮಾಹಿತಿ ಪಡೆಯಲಾಗುತ್ತಿದೆ. ಅಲ್ಲದೆ, ಕೌನ್ಸೆಲಿಂಗ್‌ ನಡೆಸಿ ಧೈರ್ಯ ತುಂಬಲಾಗುತ್ತಿದೆ ಎಂದರು.

click me!