ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯುಂಟಾದ ನಂತರ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮತ್ತಷ್ಟುತೀವ್ರಗೊಂಡಿದ್ದು, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ವಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
ಬೆಂಗಳೂರು (ಜೂ.30) : ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯುಂಟಾದ ನಂತರ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮತ್ತಷ್ಟುತೀವ್ರಗೊಂಡಿದ್ದು, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ವಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸೇರಿದಂತೆ ಸ್ವಪಕ್ಷೀಯರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಣ್ಣಾಮಲೈ ಯಾರು? ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರ ಮಾತು ಕೇಳಬೇಕಿತ್ತು. ಸೆಲ್ಯೂಟ್ ಹೊಡೆಸಿಕೊಳ್ಳುತ್ತಿದ್ದವರು ಅಣ್ಣಾಮಲೈ ಮಾತು ಕೇಳಿಸಿಕೊಳ್ಳಬೇಕಿತ್ತು. ಅಣ್ಣಾಮಲೈ ಇಲ್ಲಿಗೆ ಬಂದು ಪೋಸ್ ಕೊಡುತ್ತಿದ್ದರು. ಚುನಾವಣೆಯಲ್ಲಿ ಸೋತವರಲ್ಲಿ ಸುಧಾಕರ್ ಒಬ್ಬರೇನಾ? ಅವರ ಮನೆಗೆ ಸಮಾಧಾನ ಹೇಳಲು ಹೋಗುತ್ತಾರೆ. ನಾವು ಯಾರೂ ಕಂಡಿಲ್ಲವೇ? ಎರಡು ಖಾತೆ ಕೊಟ್ಟಿಲ್ಲ ಎಂದರೆ ಪಕ್ಷ ಮುಗಿಸುತ್ತೇನೆ ಎಂದವನ ಮನೆಗೆ ಹೋಗುತ್ತಾರೆ. ನಮಗೆ ಒಂದು ಕರೆ ಮಾಡಿದ್ರಾ? ಎಂದು ಟೀಕಾಪ್ರಹಾರ ನಡೆಸಿದರು.
ಮಾಜಿ ಶಾಸಕ ರೇಣುಕಾಚಾರ್ಯಗೆ ನೋಟಿಸ್ ಜಾರಿ: ವಾರದೊಳಗೆ ಉತ್ತರಿಸಲು ಗಡುವು
ಅಧಿಕಾರದಲ್ಲಿದ್ದಾಗ ಅಕ್ಕಿ ಕೊಡಲಿಲ್ಲ, ಪ್ರಣಾಳಿಕೆಯಲ್ಲಿ ಕೊಟ್ಟಿದ್ದರು. ಸಿಲಿಂಡರ್ ಕೊಡುತ್ತೇನೆ ಎಂದು ಪ್ರಣಾಳಿಕೆಯಲ್ಲಿ ಹಾಕಲಾಗಿತ್ತು. ಅರ್ಧಲೀಟರ್ ಹಾಲು ಕೊಡುತ್ತೇನೆ ಎಂದು ತಿಳಿಸಲಾಗಿತ್ತು. ಇದೊಂದು ಪ್ರಣಾಳಿಕೆನಾ? ತೆಲುಗರನ್ನು ಕೂರಿಸಿಕೊಂಡು ಪ್ರಣಾಳಿಕೆ ತಯಾರಿಸಿದ್ದಾರೆ. ಪ್ರಣಾಳಿಕೆ ಸಮಿತಿ ಅಧ್ಯಕ್ಷರು ಯಾರು? ಎಂದು ಪ್ರಶ್ನಿಸಿದರು.
ಹಿರಿಯ ನಾಯಕರಾದ ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿ ಎಲ್ಲರನ್ನೂ ಮುಗಿಸಿಬಿಟ್ಟರು. ಬಸವರಾಜ ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿಯಾಗಿದ್ದರು. ಅವರ ಕೈಗಳನ್ನು ಕಟ್ಟಿಹಾಕಿದ್ದರು. ಪಕ್ಷದ ನಾಯಕರ ವರ್ತನೆಗಳೇ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾರಣ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರದಿಂದ ಇಳಿಯದಿದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ. ಯಡಿಯೂರಪ್ಪ ಅವರನ್ನು ಯಾವ ಪುರುಷಾರ್ಥಕ್ಕಾಗಿ ಅಧಿಕಾರದಿಂದ ಕೆಳಗಿಳಿಸಿದಿರಿ. ಮತ ಕೇಳಲು, ಅಧಿಕಾರ ಅನುಭವಿಸಲು ಯಡಿಯೂರಪ್ಪ ಬೇಕು. ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪ ಬೇಡ ಅಲ್ಲವೇ? ಎಂದು ಕಿಡಿಕಾರಿದರು.
ನಾನು ಎಂದಿಗೂ ಬಿಜೆಪಿ ವಿರುದ್ಧ ಮಾತನಾಡಿಲ್ಲ. ಬಿಜೆಪಿ ನನಗೆ ತಾಯಿಯ ಸಮಾನ. ಆದರೆ, ಕೆಲವು ದೌರ್ಭಾಗ್ಯಗಳನ್ನು ಅನಿವಾರ್ಯವಾಗಿ ಮಾತನಾಡಬೇಕಾಗುತ್ತದೆ. ಯಾರಿಗೂ ಅವಮಾನ ಮಾಡುವ ಅವಶ್ಯಕತೆ ನನಗಿಲ್ಲ. ನನಗೆ ಯಾವುದೇ ಭಯ ಇಲ್ಲ. ನಾನು ನಿರ್ಭಯವಾಗಿ ಮಾತನಾಡುತ್ತೇನೆ. ಚುನಾವಣೆಗೆ ಎರಡು ದಿನ ಇದ್ದಾಗ ಆನ್‌ಲೈನ್‌ನಲ್ಲಿ ಸಭೆ ಮಾಡಿದರು. ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಆಗದವರು ನಮಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.
ಸೋತವರಲ್ಲಿ ಸುಧಾಕರ್ ಮಾತ್ರನಾ?, ನಾವು ಯಾರು ಕಂಡಿಲ್ವಾ!?: ರೇಣುಕಾಚಾರ್ಯ ಪ್ರಶ್ನೆ
ರೇಣುಕಾಚಾರ್ಯ ಆರೋಪಗಳೇನು?
- ಅಣ್ಣಾಮಲೈಯಿಂದ ಸೆಲ್ಯೂಟ್ ಹೊಡೆಸಿಕೊಳ್ಳುತ್ತಿದ್ದ ಬೊಮ್ಮಾಯಿ ಕೊನೆಗೆ ಅಣ್ಣಾಮಲೈ ಮಾತು ಕೇಳುವಂತಾಗಿತ್ತು
- ಬೊಮ್ಮಾಯಿ ಹೆಸರಿಗಷ್ಟೇ ಸಿಎಂ ಆಗಿದ್ದರು; ಅವರ ಕೈ ಕಟ್ಟಿದ್ದರು. ಪಕ್ಷದ ನಾಯಕತರ ವರ್ತನೆಯೇ ಸೋಲಿಗೆ ಕಾರಣ
- 2 ಖಾತೆ ನೀಡದಿದ್ದರೆ ಪಕ್ಷ ಮುಗಿಸುತ್ತೇನೆ ಎಂದವ ಸೋತಾಗ ನಾಯಕರು ಆತನ ಮನೆಗೆ ಹೋಗಿ ಸಾಂತ್ವನ ಹೇಳಿದರು
- ನಾವೂ ಸೋತಿದ್ದೇವೆ. ನಮಗೆ ಕನಿಷ್ಠಪಕ್ಷ ಒಂದು ಫೋನ್ ಕರೆಯನ್ನಾದರೂ ಮಾಡಿದರಾ?
- ಯಾವ ಪುರುಷಾರ್ಥಕ್ಕೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದಿರಿ? ಮತ ಕೇಳಲು ಬಿಎಸ್‌ವೈ ಬೇಕು, ಆಮೇಲೆ ಬೇಡ್ವಾ?
- ಬಿಜೆಪಿಯದು ಒಂದು ಪ್ರಣಾಳಿಕೇನಾ? ತೆಲುಗರನ್ನು ಕೂರಿಸಿಕೊಂಡು ಪ್ರಣಾಳಿಕೆ ತಯಾರಿಸಿದರು
- ಅಧಿಕಾರದಲ್ಲಿದ್ದಾಗ ಅಕ್ಕಿ ಕೊಡದೆ ಪ್ರಣಾಳಿಕೆಯಲ್ಲಿ ಅಕ್ಕಿ ಕೊಡ್ತೇವೆ, ಸಿಲಿಂಡರ್ ಕೊಡ್ತೇವೆ, ಹಾಲು ಕೊಡ್ತೇವೆ ಅಂದರು