ಕರ್ನಾಟಕದಲ್ಲಿ 17,000 ಶಿಕ್ಷಕರ ಹುದ್ದೆಗಳು ಖಾಲಿ..!

By Kannadaprabha News  |  First Published Jun 25, 2023, 4:15 AM IST

ಖಾಲಿ ಇರುವ 50000 ಶಿಕ್ಷಕರ ಹುದ್ದೆ ಪೈಕಿ 33000 ಹುದ್ದೆಗೆ ಮಾತ್ರ ಅತಿಥಿ ಶಿಕ್ಷಕರ ನೇಮಕ, ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆ. 


ಲಿಂಗರಾಜು ಕೋರಾ

ಬೆಂಗಳೂರು(ಜೂ.25):  ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 50000 ಹುದ್ದೆಗಳ ಪೈಕಿ 33000 ಹುದ್ದೆಗಳಿಗೆ ಮಾತ್ರವೇ ಅತಿಥಿ ಶಿಕ್ಷಕರನ್ನು ನೇಮಿಸುವ ಸರ್ಕಾರದ ಕ್ರಮದಿಂದ, ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗುವ ಆತಂಕ ಎದುರಾಗಿದೆ.

Latest Videos

undefined

ಈ ಬಾರಿ ಶಿಕ್ಷಣ ಇಲಾಖೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಪ್ರಾಥಮಿಕ ಶಾಲೆಗಗಳಿಗೆ 27 ಸಾವಿರ ಮತ್ತು ಪ್ರೌಢಶಾಲೆಗಳಿಗೆ 6 ಸಾವಿರ ಅತಿಥಿ ಶಿಕ್ಷಕರು ಸೇರಿ ಒಟ್ಟು 33 ಸಾವಿರ ಮಂದಿ ನೇಮಕಾತಿಗೆ ಆದೇಶ ಹೊರಡಿಸಿದೆ. ಇದರಲ್ಲಿ ಪ್ರತಿ ಶೈಕ್ಷಣಿಕ ಜಿಲ್ಲೆಗೆ ಕನಿಷ್ಠ 300 ಹಾಗೂ ಹೆಚ್ಚು ಶಿಕ್ಷಕ ಹುದ್ದೆ ಖಾಲಿ ಇರುವ ಕೆಲವು ಜಿಲ್ಲೆಗಳಿಗೆ ಗರಿಷ್ಠ 1500ಕ್ಕೆ ಹೆಚ್ಚು ಅತಿಥಿ ಶಿಕ್ಷಕ ಹುದ್ದೆಗಳನ್ನು ಹಂಚಿಕೆ ಮಾಡಿದೆ. ಆದರೆ, ಆಯಾ ಜಿಲ್ಲೆಗಳಿಗೆ ಲಭ್ಯವಾಗಿರುವ ಅತಿಥಿ ಶಿಕ್ಷಕರನ್ನು ಖಾಲಿ ಇರುವ ಹುದ್ದೆಗಳಿಗೆ ಅಗತ್ಯದಷ್ಟುಹಂಚಿಕೆ ಮಾಡುವುದು ಡಿಡಿಪಿಐ, ಬಿಇಒಗಳಿಗೆ ಸವಾಲಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ಕೆಲಸಕ್ಕೆ ಅಧಿಕಾರಿಗಳೇ ಇಲ್ಲ: 2.58 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿ, ಭರ್ತಿ ಯಾವಾಗ ?

ಕಳವಳ:

ಕೆಲವೆಡೆ ಶಾಲೆಗಳ ಪ್ರಾಂಶುಪಾಲರು ಶಾಲೆಯ ಮಕ್ಕಳ ಸಂಖ್ಯೆ ಆಧರಿಸಿ ನಾಲ್ಕು ಅತಿಥಿ ಶಿಕ್ಷಕರಿಗೆ ಬೇಡಿಕೆ ಇಟ್ಟಿದ್ದರೆ ಇಬ್ಬರನ್ನು ನೀಡಲಾಗಿದೆ. ತಾಲ್ಲೂಕುವಾರು ಕಡಿಮೆ ಸ್ಥಾನಗಳು ಹಂಚಿಕೆಯಾಗಿರುವೆಡೆ ಕೆಲವು ಶಾಲೆಗಳಿಗೆ ಒಬ್ಬ ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ ನೀಡಿದ್ದಾರೆ. ಇನ್ನೂ ಕೆಲವು ಶಾಲೆಗಳಿಗೆ ಬೇಡಿಕೆ ಇದ್ದರೂ ಒಂದೂ ಸ್ಥಾನ ಹಂಚಿಕೆ ಮಾಡಿಲ್ಲ. ಇದರಿಂದ ಪಠ್ಯ ಬೋಧನೆ, ಪರೀಕ್ಷೆಗಳು, ಮೌಲ್ಯಮಾಪನ ಸೇರಿದಂತೆ ಶೈಕ್ಷಣಿಕ ಚಟುವಟಿಕೆಗಳನ್ನು ಸಮಯಕ್ಕೆ ಸರಿಯಾಗಿ ನಡೆಸಲು ಕಷ್ಟಸಾಧ್ಯವಾಗಲಿದೆ ಎಂಬುದು ಶಿಕ್ಷಕ ವರ್ಗ ಹಾಗೂ ಪ್ರಾಂಶುಪಾಲರುಗಳ ಅಭಿಪ್ರಾಯವಾಗಿದೆ.

ಪ್ರಸ್ತುತ ನೇಮಕ ಮಾಡಲು ಅನುಮತಿ ನೀಡಿರುವುದು ಕೇವಲ ವಿಷಯ ಶಿಕ್ಷಕರು ಮಾತ್ರ. ದೈಹಿಕ ಶಿಕ್ಷಕರು, ಚಿತ್ರಕಲೆ ಸೇರಿದಂತೆ ಖಾಲಿ ಇರುವ ಇತರೆ ಶಿಕ್ಷಕರ ಸ್ಥಾನಗಳಿಗೆ ಅತಿಥಿ ಶಿಕ್ಷಕರನ್ನು ಸರ್ಕಾರ ಪರಿಣಿಸಿಯೇ ಇಲ್ಲ. ಇದರಿಂದ ವಿಷಯ ಶಿಕ್ಷಕರೇ ಮಕ್ಕಳಿಗೆ ಕ್ರೀಡೆ, ದೈಹಿಕ ಶಿಕ್ಷಣ ಇತರೆ ಚಟುವಟಿಕೆಗಳನ್ನೂ ನಡೆಸುವಂತಾಗಿದೆ ಎನ್ನುವುದು ಶಿಕ್ಷಕರ ಅಳಲಾಗಿದೆ.

ಪ್ರಾಥಮಿಕ ಶಾಲೆ:

ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 37000 ಶಿಕ್ಷಕರ ಹುದ್ದೆ ಪೈಕಿ 27000 ಹುದ್ದೆ ನೇಮಕಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ಇನ್ನೂ 10000 ಶಿಕ್ಷಕರ ನೇಮಕಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.

ಚುನಾವಣಾ ಗಿಫ್ಟ್‌ ಸಮರ: ಅಂಗನವಾಡಿ ಕಾರ‍್ಯಕರ್ತೆಯರ ಗೌರವಧನ 13000 ರೂ.ಗೆ ಏರಿಕೆ

ಪ್ರೌಢಶಾಲೆ:

ಪ್ರೌಢ ಶಾಲೆಗಳಲ್ಲಿ ಸುಮಾರು 13 ಸಾವಿರ ಶಿಕ್ಷಕರ ಕೊರತೆ ಇದೆ. ಆದರೆ, ಸರ್ಕಾರ ಕೇವಲ 6 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡಿದೆ. ಇದರಿಂದ ಪ್ರೌಢ ಶಾಲೆಗಳಿಗೆ ಇನ್ನೂ ಆರೇಳು ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕಾಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಚಿಂತನೆ ನಡೆಸಿರುವುದಾಗಿ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ.

13000 ಕಾಯಂ ಶಿಕ್ಷಕರ ನೇಮಿಸಿದರೆ ಸಮಸ್ಯೆಗೆ ಪರಿಹಾರ

ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ, ಕಳೆದ ಸರ್ಕಾರದ ಅವಧಿಯಲ್ಲಿ 15 ಸಾವಿರ ಶಿಕ್ಷಕ ಹುದ್ದೆಗೆ ನಡೆಸಲಾದ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿರುವ 13 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಶಾಲೆಗಳಿಗೆ ನಿಯೋಜಿಸಿದರೆ ಕೊರತೆ ಇರುವ ಇತರೆ ಸ್ಥಾನಗಳಿಗೆ ಸರಿಹೋಗುತ್ತದೆ. ಈ ಲೆಕ್ಕಾಚಾರದಲ್ಲಿ ಪ್ರಸ್ತುತ 33 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಅವಕಾಶ ನೀಡಲಾಗಿದೆ. ಆದರೆ, 13 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಕಾನೂನು ಗೊಂದಲದಲ್ಲಿ ಸಿಲುಕಿದೆ.
ಸರ್ಕಾರಿ ಶಾಲೆಗಳಲ್ಲಿ ಸದ್ಯ 33 ಸಾವಿರ ಅತಿಥಿ ಶಿಕ್ಷಕ ನೇಮಕಾತಿಗೆ ಸೂಚಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿ ಶಿಕ್ಷಕರ ಅಗತ್ಯವಿದೆಯೇ ಎಂಬ ಬಗ್ಗೆ ಡಿಡಿಪಿಐ, ಬಿಇಒಗಳಿಂದ ಬರುವ ಮಾಹಿತಿ ಆಧರಿಸಿ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಾತಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಅಂತ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಆರ್‌.ವಿಶಾಲ್‌ ತಿಳಿಸಿದ್ದಾರೆ. 

click me!