ಅಭ್ಯರ್ಥಿಗಳು 1 ಗಂಟೆ ಮೊದಲೇ ಕೇಂದ್ರಕ್ಕೆ ಬರಬೇಕು, ಪರೀಕ್ಷೆಗೆ ಅರ್ಧಗಂಟೆ ಇರುವಾಗ ಕೇಂದ್ರ ಬಾಗಿಲು ಬಂದ್
ಬೆಂಗಳೂರು(ಅ.28): ಬರುವ ನವೆಂಬರ್ 6ರಂದು ನಡೆಯಲಿರುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೆ ಒಂದು ಗಂಟೆ ಮೊದಲೇ ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು. ಪರೀಕ್ಷೆ ಆರಂಭಕ್ಕೆ ಅರ್ಧಗಂಟೆ ಇರುವಾಗ ಕೇಂದ್ರದ ಬಾಗಿಲು ಬಂದ್ ಮಾಡಲಾಗುತ್ತದೆ ಎಂಬುದು ಸೇರಿದಂತೆ ಹಲವು ನಿಯಮಗಳನ್ನು ನಿಗದಿ ಪಡಿಸಲಾಗಿದೆ. ಈ ಬಾರಿಯ ಟಿಇಟಿ ಪರೀಕ್ಷೆಯನ್ನು ಭಾರೀ ಕಟ್ಟುನಿಟ್ಟಾಗಿ ನಡೆಸಲು ಶಿಕ್ಷಣ ಇಲಾಖೆಯು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅಭ್ಯರ್ಥಿಗಳ ಪರೀಕ್ಷಾ ಕೇಂದ್ರ, ಪರೀಕ್ಷಾ ಕೊಠಡಿ ಪ್ರವೇಶ, ಒಎಂಆರ್ ವಿತರಣೆ ಸೇರಿದಂತೆ ಪ್ರತಿಯೊಂದಕ್ಕೂ ಸಮಯ ನಿಗದಿಪಡಿಸಿ ಅಭ್ಯರ್ಥಿಗಳು ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ.
ಪರೀಕ್ಷೆಯ ದಿನ ಎಲ್ಲ ಅಭ್ಯರ್ಥಿಗಳನ್ನೂ ತಪಾಸಣೆಗೆ ಒಳಪಡಿಸುವುದರಿಂದ ಪರೀಕ್ಷೆಗೆ ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಬೆಳಗಿನ ಪರೀಕ್ಷೆಗೆ 9 ಗಂಟೆಗೆ, ಮಧ್ಯಾಹ್ನದ ಪರೀಕ್ಷೆಗೆ 1.30ಕ್ಕೆ ಹಾಜರಿರಬೇಕು. ತಪಾಸಣೆ ಹಿನ್ನೆಲೆಯಲ್ಲಿ ಗೌಪ್ಯತಾ ದೃಷ್ಟಿಯಿಂದ ಪರೀಕ್ಷೆ ಆರಂಭಕ್ಕೆ ಅರ್ಧಗಂಟೆ ಮುಂಚೆ ಪರೀಕ್ಷಾ ಕೇಂದ್ರದ ಪ್ರವೇಶದ್ವಾರ ಮುಚ್ಚಲಾಗುತ್ತದೆ. ಪರೀಕ್ಷೆ ಆರಂಭವಾದ ಬಳಿಕ ಯಾರಿಗೂ ಕೇಂದ್ರಕ್ಕೆ ಪ್ರವೇಶಾವಕಾಶ ಇರುವುದಿಲ್ಲ. ಒಮ್ಮೆ ಪರೀಕ್ಷಾ ಕೊಠಡಿ ಪ್ರವೇಶಿಸಿದ ಬಳಿಕ ಪರೀಕ್ಷೆ ಮುಗಿಯುವವರೆಗೂ ಯಾರಿಗೂ ಹೊರ ಹೋಗಲು ಅವಕಾಶವಿರುವುದಿಲ್ಲ ಎಂದು ಇಲಾಖೆಯ ಕೇಂದ್ರೀಯ ದಾಖಲಾತಿ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆ ಅರ್ಹತಾ ಅಂಕ ಕಡಿಮೆಗೆ ಸರ್ಕಾರ ನಕಾರ
ಇವುಗಳು ನಿಷಿದ್ಧ:
ಕೈಗಡಿಯಾರ, ಕ್ಯಾಲ್ಕು್ಯಲೇಟರ್, ಮೊಬೈಲ್, ಬ್ಲೂಟೂತ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳು. ಲಾಂಗ್ ಟೇಬಲ್, ಬೆಂಕಿಪೊಟ್ಟಣ ಅಥವಾ ಸಿಗರೇಟು ಲೈಟರ್ ಮುಂತಾದ ವಸ್ತುಗಳನ್ನು ಕೇಂದ್ರಕ್ಕೆ ತರುವಂತಿಲ್ಲ.
ನಿಮ್ಮ ಒಎಂಆರ್ ಖಾತಪರಿಪಡಿಸಿಕೊಳ್ಳಿ:
ಅಭ್ಯರ್ಥಿಗಳು ಬಹಳ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ಪರೀಕ್ಷೆಯಲ್ಲಿ ನೀಡುವ ಒಎಂಆರ್ ಪ್ರತಿ ಪೂರ್ವ ಮುದ್ರಿತವಾಗಿರುವುದರಿಂದ ಅದರಲ್ಲಿ ಅಭ್ಯರ್ಥಿಯ ಅರ್ಜಿ ಸಂಖ್ಯೆ, ಹೆಸರು ಸೇರಿದಂತೆ ಹಲವು ಮಾಹಿತಿಗಳು ಪೂರ್ವ ಮುದ್ರಿತವಾಗಿರುತ್ತವೆ. ಹಾಗಾಗಿ ಒಎಂಆರ್ ತಮ್ಮ ಕೈಗೆ ಬಂದ ಕೂಡಲೇ ಅದು ತಮ್ಮದೇ ಪ್ರತಿಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಅಲ್ಲದೆ, ಒಎಂಆರ್ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಪುಸ್ತಿಕೆ ಕ್ರಮಸಂಖ್ಯೆ ಎರಡೂ ಒಂದೇ ಆಗುತ್ತದೆ. ಇದನ್ನೂ ಕೂಡ ಪರಿಶೀಲಿಸಿಕೊಂಡು ನಂತರ ಉತ್ತರ ಬರೆಯಲು ಆರಂಭಿಸಿ. ತಪ್ಪಿದರೆ ನೀವು ಬರೆಯುವ ಉತ್ತರ ಬೇರೆಯವರ ಪಾಲಾಗಬಹುದು. ಅಥವಾ ಮೌಲ್ಯಮಾಪನಕ್ಕೆ ಅನರ್ಹ ಆಗಬಹುದು.