KSRTC employee: ವಜಾಗೊಂಡಿದ್ದ ಕೆಎಸ್‌ಆರ್​ಟಿಸಿ ಸಿಬ್ಬಂದಿಗೆ ಗುಡ್‌ ನ್ಯೂಸ್

By Suvarna NewsFirst Published Dec 21, 2021, 4:06 PM IST
Highlights

* ವಜಾಗೊಂಡಿದ್ದ ಕೆಎಸ್‌ಆರ್​ಟಿಸಿ ಸಿಬ್ಬಂದಿಗೆ ಗುಡ್‌ ನ್ಯೂಸ್
* ಪ್ರತಿಭಟನೆ ಮಾಡಿ ವಜಾಗೊಂಡಿದ್ದವರ ಮರುನೇಮಕ
* ಸಾರಿಗೆ ಸಚಿವ ಶ್ರೀರಾಮುಲು ಸ್ಪಷ್ಟನೆ

ಗದಗ, (ಡಿ.21) : ವಜಾಗೊಂಡಿದ್ದ ಕೆಎಸ್‌ಆರ್​ಟಿಸಿ (KSRTC) ಸಿಬ್ಬಂದಿಯನ್ನು ಮರುನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramulu) ಹೇಳಿದ್ದಾರೆ.

ಗದಗದಲ್ಲಿ(Gadag) ಇಂದು(ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ವಜಾಗೊಂಡಿದ್ದ ಕೆಎಸ್‌ಆರ್​ಟಿಸಿ ಸಿಬ್ಬಂದಿಯನ್ನು ಮರುನೇಮಕ ಮಾಡಲು ತೀರ್ಮಾನಿಸಲಾಗಿದ್ದು, 4 ವಾರದೊಳಗೆ ಮರುನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

KSRTC Jobs ತಡೆಹಿಡಿಯಲಾಗಿದ್ದ ನೇಮಕಾತಿ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ ಕೆಎಸ್ಆರ್‌ಟಿಸಿ

ಮುಷ್ಕರ ವೇಳೆ ಕೆಲವರು ಕೆಲಸಕ್ಕೆ ಗೈರಾಗಿದ್ದರು. ಅಂತವರನ್ನ ಕೆಲಸದಿಂದ ವಜಾ ಮಾಡಲಾಗಿತ್ತು. ವಜಾ ಆಗಿದ್ದವರನ್ನ ಇಲ್ಲಿಯವರೆಗೆ ಕೆಲಸಕ್ಕೆ ನೇಮಕಗೊಳಿಸಲು ಸಾಧ್ಯ ಆಗಿರಲಿಲ್ಲ. ನಾಲ್ಕು ವಿಭಾಗದ ಎಂಡಿಗಳಿಗೆ ಈಗಾಗಲೇ ಸೂಚನೆ ಕೊಟ್ಟಿದ್ದೇನೆ. ಲೋಕಾದಾಲತ್ ಮೂಲಕ ಕಾನೂನು ತೊಡಕು ನಿವಾರಿಸಿ ಸಮಸ್ಯೆ ಇತ್ಯರ್ಥ ಮಾಡಲಾಗುತ್ತದೆ ಎಂದು ಶ್ರೀರಾಮುಲು ತಿಳಿಸಿದರು.

ಈ ಹಿಂದೆ ಮಾಜಿ ಸಚಿವ ಲಕ್ಷಣ ಸವದಿ (Laxman Savadi) ಸಾರಿಗೆ ಸಚಿವರಾಗಿದ್ದಾಗ ಸಾರಿಗೆ ನೌಕರರು ದೀರ್ಘ ಕಾಲದ ಮುಷ್ಕರ (Transport Strike) ನಡೆಸಿದ್ದು ನಮಗೆಲ್ಲಾ ತಿಳಿದಿರುವ ವಿಚಾರ. ಅಂದು ಸಾರಿಗೆ ನೌಕರರ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಲು ಆಗದೆ ನೂರಾರು ಸಾರಿಗೆ ನೌಕರರನ್ನು ಅಂದಿನ ಯಡಿಯೂರಪ್ಪ ನೇತೃತ್ವದ ಸರ್ಕಾರ ವಜಾ ಮಾಡುವ ಮೂಲಕ ಸಾರಿಗೆ ಸಿಬ್ಬಂದಿಗಳ ಮೇಲೆ ಒತ್ತಡ ಹಾಕಿತ್ತು. ನೂರಾರು ನೌಕರರನ್ನ ವಜಾ ಮಾಡಿದ ಬೆನ್ನಲೆ ಒಬ್ಬೊಬ್ಬರಾಗಿ ನೌಕರರು ಸರ್ಕಾರ ಬಿಗಿ ಪಟ್ಟಿಗೆ ಮಣಿದು ಕೆಲಸಕ್ಕೆ ಹಾಜರಾಗಿದ್ದರು. ಅಂದಿನಿಂದಲು ಇವತ್ತಿನವರೆಗೆ ಮತ್ತೆ ವಜಾಗೊಂಡಿದ್ದ ಸಿಬ್ಬಂದಿಯನ್ನು ಕೆಲಸಕ್ಕೆ ವಾಪಸ್  ನೇಮಿಸಬೇಕು ಎಂಬ ಕೂಗು ಕೇಳಿ ಬರುತ್ತಲೇ ಇತ್ತು.

ಸದ್ಯ ಯಡಿಯೂರಪ್ಪ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಯಾಗಿದ್ದು ಸಾರಿಗೆ ಸಚಿವರಾಗಿ ಬಿ. ಶ್ರೀರಾಮುಲು (Transport Minister B Sriramulu) ಅಧಿಕಾರದಲ್ಲಿ ಇದ್ದಾರೆ. ಯಾವುದೇ ಕಂಡಿಷನ್ ಇಲ್ಲದೆ ವಜಾ ಆಗಿದ್ದ ಸಾರಿಗೆ ನೌಕರರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದಾರೆ. ಮುಷ್ಕರದಲ್ಲಿ ಭಾಗಿಯಾಗಿ ಶಿಕ್ಷೆಗೆ ಗುರಿಯಾಗಿದ್ದ ಎಲ್ಲಾ ಸಿಬ್ಬಂದಿಗಳನ್ನು ಮರು ನೇಮಕ ಮಾಡಿಕೊಳ್ಳುಲು ಸೂಚನೆ ನೀಡಿದ್ದಾರೆ. ಈಗಾಗಲೇ ಬೇರೆಡೆಗೆ ವರ್ಗಾವಣೆ ಆಗಿದ್ದಲ್ಲಿ ಅಂತಹ ಸಿಬ್ಬಂದಿಗಳನ್ನು ಯಾವುದೇ ಕಂಡಿಷನ್ ಇಲ್ಲದೆ ಮತ್ತೆ ತಮ್ಮ ಕಾರ್ಯಕ್ಷೇತ್ರಕ್ಕೆ ಮರು ನೇಮಕ ಮಾಡುವಂತೆ ಸೂಚನೆ ನೀಡಿದ್ದೇನೆ. ಮುಷ್ಕರ ನಡೆಸುತ್ತಿರುವ ಸಿಬ್ಬಂದಿಗಳಿಗೆ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಮುಷ್ಕರದಿಂದ ಯಾರಿಗೂ ತೊಂದರೆ ಆಗಬಾರದು. ಸರ್ಕಾರ ಇಕ್ಕಟ್ಟಿಗೆ ಸಿಲುಕಬಾರದು. ಆ ರೀತಿಯಲ್ಲಿ ಎಲ್ಲರೂ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದರು.

ಸಿಎಂ ಬದಲಾವಣೆ ಬಗ್ಗೆ ಶ್ರೀರಾಮುಲು ಮಾತು
 ಸಿಎಂ ಬದಲಾವಣೆ, ಸಂಪುಟ ಪುನಾರಚನೆಯ ಪ್ರಸ್ತಾಪವಿಲ್ಲ. ಎಲ್ಲ ಮಂತ್ರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಬದಲಾವಣೆ ಬಗ್ಗೆ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ. ನಾನು ಡಿಸಿಎಂ ಆಗುವ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂದರು.

ಇನ್ನು ಮತಾಂತರ ಬಗ್ಗೆ ಪ್ರತಿಕ್ರಿಯಿಸಿದ್ದು, ಆಸೆ, ಆಮಿಷ, ಒತ್ತಡದ ಮೂಲಕ ಮತಾಂತರ ಆಗಬಾರದು. ಈ ರೀತಿ ಮತಾಂತರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮದುವೆ, ಶಿಕ್ಷಣ, ಹಣ, ಉಡುಗೊರೆ ಮೂಲಕ ಮತಾಂತರ ಮಾಡಿಸಿದರೆ ಅದು ಕಾನೂನು ಬಾಹಿರ. ಎಸ್‌ಸಿ, ಎಸ್‌ಟಿ ಸಮುದಾಯದ ಹಿತ ರಕ್ಷಣೆಗೆ ಸರ್ಕಾರ ಬದ್ಧ ಎಂದು ಹೇಳಿದರು.

ಇನ್ನು ಇದೇ ವೇಳೆ ಎಮ್‌ಇಎಸ್ ಪುಂಡರ ಪುಂಡಾಟಿಕೆ ಬಗ್ಗೆ ಮಾತನಾಡಿದ್ದು, ಎಂಇಎಸ್ ಅಂದ್ರೆ ಮಹಾ ಎಡವಟ್ಟು ಸಂಘ. ಪುಂಡಾಟಿಕೆ, ಹೇಡಿ ಕೃತ್ಯ, ನಾಟಕಕ್ಕೆ ಸರ್ಕಾರದಿಂದ ಪ್ರತ್ಯುತ್ತರ ಸಿಗುತ್ತದೆ. ಎಮ್​ಇಎಸ್ ನಿಷೇಧದ ಕುರಿತು ಸಿಎಂ ಪರಾಮರ್ಶೆ ಮಾಡುತ್ತಿದ್ದಾರೆ. ಇನ್ಮುಂದೆ ರಾಜ್ಯದಲ್ಲಿ ಎಂಇಎಸ್ ಆಟಗಳು ನಡೆಯೋದಿಲ್ಲ ಎಂದು ಕಿಡಿಕಾರಿದರು.

click me!