Professor Recruitment Scam ತನಿಖೆ ಮಧ್ಯೆಯೇ ಪ್ರಾಧ್ಯಾಪಕರ ಆಯ್ಕೆ ಪಟ್ಟಿ ಪ್ರಕಟ

Published : Sep 13, 2022, 09:55 AM IST
 Professor Recruitment Scam  ತನಿಖೆ ಮಧ್ಯೆಯೇ ಪ್ರಾಧ್ಯಾಪಕರ ಆಯ್ಕೆ ಪಟ್ಟಿ ಪ್ರಕಟ

ಸಾರಾಂಶ

ತನಿಖೆ ಮಧ್ಯೆಯೇ ಪ್ರಾಧ್ಯಾಪಕರ ಆಯ್ಕೆ ಪಟ್ಟಿ ಪ್ರಕಟ. 26 ವಿಷಯಗಳ ಪೈಕಿ 17ಕ್ಕೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿ. 9 ವಿಷಯಗಳಲ್ಲಿ ತಡೆ. ಭೂಗೋಳಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಸುದ್ದಿಯಾಗಿದ್ದ ಸಹಾಯಕ ಪ್ರಾಧ್ಯಾಪಕ ಪರೀಕ್ಷೆ.

ಬೆಂಗಳೂರು (ಸೆ.13): ಭೂಗೋಳ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ. ಆದರೆ, 26 ವಿಷಯಗಳ ಪೈಕಿ 17 ವಿಷಯಗಳಿಗೆ ಮಾತ್ರ ಮೆರಿಟ್‌ ಪಟ್ಟಿ ಪ್ರಕಟಿಸಿದ್ದು ಇಂಗ್ಲೀಷ್‌, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಸೇರಿದಂತೆ 9 ವಿಷಯಗಳಲ್ಲಿ ಹಲವು ವಿದ್ಯಾರ್ಥಿಗಳು ಪಡೆದಿರುವ ಅಂಕ ಹಾಗೂ ಜನ್ಮದಿನಾಂಕ ಒಂದೇ ರೀತಿ ಇರುವುದರಿಂದ ಆ ವಿಷಯಗಳ ಆಯ್ಕೆ ಪಟ್ಟಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಕೆಇಎ ಮೂಲಗಳು ತಿಳಿಸಿವೆ. ಪ್ರಸ್ತುತ ಪ್ರಕಟಿಸಿರುವ ಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟ್‌  http://kea.kar.nic.in  ನಲ್ಲಿ ನೋಡಬಹುದು. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಒಟ್ಟು 26 ವಿಷಯಗಳಲ್ಲಿ ಖಾಲಿ ಇದ್ದ 1242 ಹುದ್ದೆಗಳಿಗೆ ಕಳೆದ ಮಾರ್ಚ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನಂತರ ಕೀ ಉತ್ತರ, ಫಲಿತಾಂಶ ಪಟ್ಟಿ, ತಾತ್ಕಾಲಿಕ ಮೆರಿಟ್‌ ಪಟ್ಟಿ ಪ್ರಕಟಿಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಗ ಅಂತಿಮ ಮೆರಿಟ್‌ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. 17 ವಿಷಯಗಳಿಗೆ ಮಾತ್ರ ಅಂತಿಮ ಮೆರಿಟ್‌ ಪಟ್ಟಿಯನ್ನು ಪ್ರಕಟಿಸಿದ್ದು, ಉಳಿದ 9 ವಿಷಯಗಳಲ್ಲಿ ಪಟ್ಟಿಪ್ರಕಟಿಸಲಾಗಿಲ್ಲ.

ಇದಕ್ಕೆ ಕೆಇಎ ಅಧಿಕಾರಿಗಳು ಹೇಳುತ್ತಿರುವ ಕಾರಣವೆಂದರೆ, ಆ 9 ವಿಷಯಗಳ ಮೆರಿಟ್‌ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಲವು ಅಭ್ಯರ್ಥಿಗಳು ಒಂದೇ ರೀತಿಯ ಅಂಕಗಳನ್ನು ಪಡೆದಿದ್ದಾರೆ. ಅಲ್ಲದೆ, ಅವರ ಜನ್ಮ ದಿನಾಂಕ ಕೂಡ ಒಂದೇ ರೀತಿ ನಮೂದಾಗಿದೆ. ಹೀಗೆ ಹಲವು ಅಭ್ಯರ್ಥಿಗಳ ಕೆಲ ವಿಚಾರ, ದಾಖಲೆಗಳಲ್ಲಿ ಸಾಮ್ಯತೆ ಇರುವುದರಿಂದ ಅನುಮಾನಗೊಂಡು ಪಟ್ಟಿತಡೆಹಿಡಿಯಲಾಗಿದೆ. ಅಭ್ಯರ್ಥಿಗಳಿಂದ ಈ ಬಗ್ಗೆ ಸ್ಪಷ್ಟನೆ ಪಡೆದು ಯಾವುದೇ ಲೋಪದೋಷಗಳಿಲ್ಲದಿರುವುದು ಖಚಿತವಾದ ಬಳಿಕ ಅವರ ಮೆರಿಟ್‌ ಪಟ್ಟಿಪ್ರಕಟಿಸಲಾಗುವುದು ಎಂದು ಹೇಳುತ್ತಿದ್ದಾರೆ.

Professor Recruitment Scam ಪ್ರೊ. ನಾಗರಾಜ್ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯ

ಕಳೆದ ಮಾರ್ಚ್‌ 12ರಿಂದ 16ರವರೆಗೆ ನಡೆದ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಗಳೆಲ್ಲಾ ಮುಗಿದ ಕೆಲ ದಿನಗಳ ಬಳಿಕ ಭೌತಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ವಾಟ್ಸ್‌ಅಪ್‌ ಮೂಲಕ ಸೋರಿಕೆಯಾಗಿರುವುದು ಬಯಲಾಗಿತ್ತು. ನಂತರ ಕೆಲ ಅಭ್ಯರ್ಥಿಗಳು ನೀಡಿದ ದೂರಿನ ಆಧಾರದಲ್ಲಿ ಕೆಇಎ ಅಧಿಕಾರಿಗಳು ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ ಬಳಿಕ ಪೊಲೀಸ್‌ ತನಿಖೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದಕ್ಕೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿದ್ದವು. ನಂತರ ಸರ್ಕಾರ ಪ್ರಕರಣವನ್ನು ಸಿಸಿಬಿಗೆ ವಹಿಸಿತ್ತು.

Professor Recruitment scam ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ತನಿಖೆ ನಡೆಸಿದ ಪೊಲೀಸರು ಮೈಸೂರು ವಿವಿಯ ಭೂಗೋಳಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ನಾಗರಾಜು ಮತ್ತು ಅವರ ಪಿಎಚ್‌ಡಿ ವಿದ್ಯಾರ್ಥಿ ಸೌಮ್ಯ ಎಂಬ ಅಭ್ಯರ್ಥಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ಹಲವು ಅಭ್ಯರ್ಥಿಗಳನ್ನೂ ಕರೆಸಿ ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು ಭೂಗೋಳಶಾಸ್ತ್ರ ಮಾತ್ರವಲ್ಲದೆ ಆರೋಪಗಳು ಕೇಳಿಬಂದಿರುವ ಬೇರೆ ಬೇರೆ ವಿಷಯಗಳ ಪರೀಕ್ಷೆಯಲ್ಲೂ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

PREV
click me!

Recommended Stories

ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?
ಸೋಶಿಯಲ್ ಮೀಡಿಯಾದಿಂದ ದೂರವಿದ್ದು 10 ಸರ್ಕಾರಿ ನೌಕರಿ ಪಡೆದು ಸ್ಫೂರ್ತಿಯಾದ ಸಾಧಕ!