
ನವದೆಹಲಿ(ಮೇ.28): ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ದೇಶದ ಅಗ್ರಕುಸ್ತಿಪಟುಗಳು ಭಾನುವಾರ ನೂತನ ಸಂಸತ್ ಭವನದ ಎದುರು ‘ಮಹಾ ಪಂಚಾಯತ್’ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನದ ಉದ್ಘಾಟಿಸುವ ಸಮಯದಲ್ಲೇ ಕುಸ್ತಿಪಟುಗಳು ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸುತ್ತಿದ್ದು, ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ.
ವರ್ಷಗಳ ಹಿಂದೆ ಕೃಷಿ ಕಾಯ್ದೆಗಳನ್ನು ವಿರೋಧಿಸಿ ವಿವಿಧ ರಾಜ್ಯಗಳ ರೈತರು ದೆಹಲಿಯಲ್ಲಿ ‘ಮಹಾ ಪಂಚಾಯತ್’ ಎಂಬ ಬೃಹತ್ ಹೋರಾಟ ಸಂಘಟಿಸಿದ್ದರು. ಇದೀಗ ಕುಸ್ತಿಪಟುಗಳು ಕೂಡಾ ಇದೇ ಹೆಸರಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ವಿವಿಧ ರಾಜ್ಯಗಳಿಂದ ಕುಸ್ತಿಪಟುಗಳ ಬೆಂಬಲಿಗರು ಈಗಾಗಲೇ ದೆಹಲಿಗೆ ಆಗಮಿಸಿದ್ದು, ರೈತ, ವಿದ್ಯಾರ್ಥಿ, ಮಹಿಳಾ ಸಂಘಟನೆಗಳು ಹೋರಾಟದಲ್ಲಿ ಕೈಜೋಡಿಸುವ ಸಾಧ್ಯತೆ ಇದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಸ್ತಿಪಟು ವಿನೇಶ್ ಫೋಗಾಟ್, ‘ಮಹಾಪಂಚಾಯತ್ಗೆ ಅನುಮತಿ ಕೊಡುತ್ತಿಲ್ಲ. ನಮ್ಮನ್ನು ಪೊಲೀಸರು ತಡೆದರೆ ಅಲ್ಲೇ ಪ್ರತಿಭಟಿಸುತ್ತೇವೆ. ಶಾಂತ ರೀತಿಯಲ್ಲೇ ಹೋರಾಟ ನಡೆಸುತ್ತೇವೆ. ಆದರೆ ನಮ್ಮ ಹೋರಾಟವನ್ನು ಹಳಿ ತಪ್ಪಿಸಲು ಹಲವರು ಪ್ರಯತ್ನಿಸುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇಂದಿನಿಂದ ಫ್ರೆಂಚ್ ಓಪನ್ ಟೆನಿಸ್: 23ನೇ ಗ್ರ್ಯಾನ್‌ಸ್ಲಾಂ ಗೆಲ್ತಾರಾ ಜೋಕೋ?
ಬ್ರಿಜ್‌ಗೆ ಕಾಣದ ಕೈಗಳಿಂದ ರಕ್ಷಣೆ
ಇನ್ನು, ಭಾನುವಾರ ಬ್ರಿಜ್‌ಭೂಷಣ್ ಸಿಂಗ್ ನೂತನ ಸಂಸತ್ ಭವನದ ಉದ್ಘಾಟನೆಗೆ ತೆರಳಿದರೆ ಅವರ ಹಿಂದೆ ಯಾರಿದ್ದಾರೆ ಎನ್ನುವುದು ಸ್ಪಷ್ಟವಾಗಲಿದೆ ಎಂದು ವಿನೇಶ್ ಹೇಳಿದ್ದಾರೆ. ‘ಬ್ರಿಜ್ ಉದ್ಘಾಟನೆಗೆ ಆಗಮಿಸಿದೆ ದೇಶ ಯಾವ ಕಡೆಗೆ ಸಾಗುತ್ತಿದೆ ಎಂಬುದು ಗೊತ್ತಾಗಲಿದೆ. ಬ್ರಿಜ್ರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವವರು ನಮ್ಮ ವಿರುದ್ಧವಾಗಿದ್ದಾರೆ. ಸರ್ಕಾರದ ಮಟ್ಟದಲ್ಲಿ ಏನಾಗುತ್ತಿದೆ ಎಂಬುದು ಗೊತ್ತಿಲ್ಲ. ಆದರೆ ಕೆಲವರು ಬ್ರಿಜ್ರನ್ನು ರಕ್ಷಿಸುತ್ತಿದ್ದಾರೆ. ಇದು ದೇಶದ ಮಹಿಳೆಯರ ಪಾಲಿಗೆ ಅಪಾಯ’ ಎಂದಿದ್ದಾರೆ.
ಮಹಿಳಾ ಹಾಕಿ: ಆಸೀಸ್ ವಿರುದ್ಧ ಭಾರತಕ್ಕೆ ಗೆಲುವು
ಅಡಿಲೇಡ್: ಏಷ್ಯನ್ ಗೇಮ್ಸ್ ಸಿದ್ಧತೆಗಾಗಿ ಆಸ್ಪ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಮಹಿಳಾ ಹಾಕಿ ತಂಡ ಗೆಲುವಿನೊಂದಿಗೆ ಸರಣಿಗೆ ಗುಡ್‌ಬೈ ಹೇಳಿದೆ. ಶನಿವಾರ ಆಸೀಸ್ ‘ಎ’ ತಂಡದ ವಿರುದ್ಧ ಭಾರತ 2-1 ಗೋಲುಗಳಿಂದ ಜಯಗಳಿಸಿತು. ನವ್ನೀತ್ ಕೌರ್(10ನೇ ನಿಮಿಷ), ದೀಪ್ ಗ್ರೇಸ್(25ನೇ ನಿಮಿಷ) ಗೋಲು ಬಾರಿಸಿ, ಭಾರತವನ್ನು ಗೆಲ್ಲಿಸಿದರು. ಆಸ್ಪ್ರೇಲಿಯಾ ತಂಡದ ವಿರುದ್ಧ 3 ಪಂದ್ಯಗಳ ಸರಣಿಯನ್ನು 0-2 ಅಂತರದಲ್ಲಿ ಕಳೆದುಕೊಂಡಿದ್ದ ಭಾರತ, ಆಸೀಸ್ ‘ಎ’ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ 2-3 ಅಂತರದಲ್ಲಿ ಸೋಲನುಭವಿಸಿತ್ತು.
ಪ್ರೊ ಲೀಗ್ ಹಾಕಿ: ಬ್ರಿಟನ್ ವಿರುದ್ಧ ಭಾರತಕ್ಕೆ ಸೋಲು
ಲಂಡನ್: ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಸತತ 2ನೇ ಸೋಲನುಭವಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿದೆ. ಶುಕ್ರವಾರ ಬೆಲ್ಜಿಯಂ ವಿರುದ್ಧ ಸೋತಿದ್ದ ಭಾರತ ಶನಿವಾರ ಬ್ರಿಟನ್ ವಿರುದ್ಧ 2-4 ಗೋಲುಗಳಿಂದ ಶರಣಾಯಿತು. ಭಾರತದ ಪರ ಹರ್ಮನ್ಪ್ರೀತ್ ಸಿಂಗ್ 13 ಮತ್ತು 42ನೇ ನಿಮಿಷಗಳಲ್ಲಿ ದೊರೆತ ಪೆನಾಲ್ಟಿಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದರೂ ತಂಡದ ಗೆಲುವಿಗೆ ಸಾಕಾಗಲಿಲ್ಲ. ಇದರೊಂದಿಗೆ ಬ್ರಿಟನ್(22 ಅಂಕ) ಅಗ್ರಸ್ಥಾನಕ್ಕೇರಿದರೆ, ಭಾರತ(19 ಅಂಕ) 2ನೇ ಸ್ಥಾನಕ್ಕೆ ಜಾರಿತು. ಮುಂದಿನ ಪಂದ್ಯದಲ್ಲಿ ಭಾರತ ಜೂ.2ಕ್ಕೆ ಬೆಲ್ಜಿಯಂ ವಿರುದ್ಧ ಆಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.