ಇಂದಿನಿಂದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಆರಂಭ
ರಾಫಾ, ಫೆಡರರ್ ಇಲ್ಲದೇ ನಡೆಯುತ್ತಿರುವ ಟೂರ್ನಿ
ದಾಖಲೆಯ 23ನೇ ಗ್ರ್ಯಾನ್ ಸ್ಲಾಂ ಮೇಲೆ ಕಣ್ಣಿಟ್ಟಿರುವ ನೋವಾಕ್ ಜೋಕೋವಿಚ್
ಪ್ಯಾರಿಸ್(ಮೇ.28): ದಿಗ್ಗಜರಾದ ರಾಫೆಲ್ ನಡಾಲ್, ರೋಜರ್ ಫೆಡರರ್ ಅನುಪಸ್ಥಿತಿಯಲ್ಲಿ ನಡೆಯಲಿರುವ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ ಭಾನುವಾರ ಆರಂಭಗೊಳ್ಳಲಿದೆ. 2016, 2021ರ ಚಾಂಪಿಯನ್ ಸರ್ಬಿಯಾದ ನೋವಾಕ್ ಜೋಕೋವಿಚ್ ದಾಖಲೆಯ 23ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿದ್ದು, 2007ರ ಬಳಿಕ ಸತತ 2 ಬಾರಿ ಫ್ರೆಂಚ್ ಓಪನ್ ಗೆದ್ದ ದಾಖಲೆ ಬರೆಯಲು ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಕಾತರಿಸುತ್ತಿದ್ದಾರೆ. ಅಗ್ರ ಶ್ರೇಯಾಂಕಿತ, ಹಾಲಿ ಯುಎಸ್ ಓಪನ್ ಚಾಂಪಿಯನ್ ಸ್ಪೇನ್‌ನ ಕಾರ್ಲೊಸ್ ಆಲ್ಕರಾಜ್ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಟೂರ್ನಿಯ 14 ಬಾರಿ ಚಾಂಪಿಯನ್ ನಡಾಲ್ ಗಾಯದಿಂದಾಗಿ ಈ ಬಾರಿ ಆಡುತ್ತಿಲ್ಲ. 20 ಗ್ರ್ಯಾನ್‌ಸ್ಲಾಂ ಗೆದ್ದಿರುವ ಫೆಡರರ್ ಕಳೆದ ವರ್ಷ ನಿವೃತ್ತಿಯಾಗಿದ್ದಾರೆ. ಹೀಗಾಗಿ ನಡಾಲ್ರ 22 ಗ್ರ್ಯಾನ್ಸ್ಲಾಂಗಳ ದಾಖಲೆ ಮುರಿಯಲು ಜೋಕೋಗೆ ಉತ್ತಮ ಅವಕಾಶವಿದೆ. ಇನ್ನು, 2ನೇ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್, ಕಳೆದ ಆವೃತ್ತಿ ರನ್ನರ್-ಅಪ್ ಕ್ಯಾಸ್ಪೆರ್ ರುಡ್, ಆ್ಯಂಡ್ರೆ ರುಬ್ಲೆವ್, ಹೋಲ್ಗರ್ ರ್ಯುನ್, ಸ್ಟೆಫಾನೊಸ್ ಸಿಟ್ಸಿಪಾಸ್ ಪುರುಷರ ಸಿಂಗಲ್ಸ್ನಲ್ಲಿ ಕಣಕ್ಕಿಳಿಯಲಿರುವ ಪ್ರಮುಖರು.
undefined
'ಒಂದು ವೇಳೆ ನಾನೇ ಆಯ್ಕೆಗಾರನಾಗಿದ್ದರೇ..': ವಿರಾಟ್ ಟಿ20 ಬದುಕಿನ ಬಗ್ಗೆ ತುಟಿಬಿಚ್ಚಿದ ಸನ್ನಿ..!
ಮಹಿಳಾ ಸಿಂಗಲ್ಸ್ನಲ್ಲಿ ಸ್ವಿಯಾಟೆಕ್ ಜೊತೆಗೆ ಹಾಲಿ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಅರೈನಾ ಸಬಲೆಂಕಾ, ಹಾಲಿ ವಿಂಬಲ್ಡನ್ ಚಾಂಪಿಯನ್ ಎಲೆನಾ ರಬೈಕೆನಾ ಸೇರಿದಂತೆ ಪ್ರಮುಖರು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ಪ್ರಣಯ್ ಮಲೇಷ್ಯಾ ಮಾಸ್ಟರ್ಸ್ ಫೈನಲ್ಗೆ
ಕೌಲಾಲಂಪುರ: ಭಾರತದ ತಾರಾ ಶಟ್ಲರ್ ಎಚ್.ಎಸ್.ಪ್ರಣಯ್ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಆದರೆ 2 ಬಾರಿ ಚಾಂಪಿಯನ್ ಪಿ.ವಿ.ಸಿಂಧು ಸೆಮಿಫೈನಲ್ನಲ್ಲಿ ಅಭಿಯಾನ ಕೊನೆಗೊಳಿಸಿದ್ದಾರೆ.
ಶನಿವಾರ ಪುರುಷರ ಸಿಂಗಲ್ಸ್ ಸೆಮೀಸ್ ಪಂದ್ಯದಲ್ಲಿ ತಮ್ಮ ಎದುರಾಳಿ, ಇಂಡೋನೇಷ್ಯಾದ ಕ್ರಿಸ್ಟಿಯನ್ ಅಡಿನಟಾ ಗಾಯಗೊಂಡ ಕಾರಣ ವಿಶ್ವ ನಂ.9 ಪ್ರಣಯ್ ಫೈನಲ್ಗೆ ಅರ್ಹತೆ ಪಡೆದರು. 2019ರ ಕಿರಿಯರ ವಿಶ್ವ ಚಾಂಪಿಯನ್ಶಿಪ್ ವಿಜೇತ ಕ್ರಿಸ್ಟಿಯನ್ ವಿರುದ್ಧ ಮೊದಲ ಗೇಮ್ನಲ್ಲಿ ಪ್ರಣಯ್ 19-17ರಲ್ಲಿ ಮುನ್ನಡೆಯಲ್ಲಿದ್ದರು. ಫೈನಲ್ನಲ್ಲಿ ಪ್ರಣಯ್ ಚೀನಾದ ವೆಂಗ್ ಹೊಂಗ್‌ರನ್ನು ಎದುರಿಸಲಿದ್ದಾರೆ. ಇನ್ನು, ಮಹಿಳಾ ಸಿಂಗಲ್ಸ್ ಸೆಮೀಸ್ನಲ್ಲಿ ಸಿಂಧು ಇಂಡೋನೇಷ್ಯಾದ ಗ್ರೆಗೋರಿಯಾ ಮಾರಿಸ್ಕಾ ವಿರುದ್ಧ 14-21, 17-21ರಲ್ಲಿ ಸೋತರು. ಮಾರಿಸ್ಕಾ ವಿರುದ್ಧ ಸಿಂಧುಗೆ ಇದು ಸತತ 2ನೇ ಸೋಲು.
ಗ್ರ್ಯಾನ್ ಪ್ರಿ: ಸ್ಟೀಪಲ್ಚೇಸ್ ಕಂಚು ಜಯಿಸಿದ ಪಾರುಲ್
ಲಾಸ್ ಏಂಜಲೀಸ್: ಭಾರತದ ತಾರಾ ಅಥ್ಲೀಟ್ ಪಾರುಲ್ ಚೌಧರಿ ಲಾಸ್ ಏಂಜಲೀಸ್ ಗ್ರ್ಯಾನ್‌ಪ್ರಿ ಕೂಟದ ಮಹಿಳೆಯರ 3000 ಮೀ. ಸ್ಟೀಪಲ್ಚೇಸ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಜೊತೆಗೆ ಏಷ್ಯಾದ 10ನೇ ವೇಗದ ಸ್ಟೀಪಲ್ಚೇಸ್ ಪಟು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಶುಕ್ರವಾರ ಪಾರುಲ್ 9 ನಿಮಿಷ 29.51 ಸೆಕೆಂಡ್ಗಳಲ್ಲಿ ಗುರಿ ತಲುಪಿ 3ನೇ ಸ್ಥಾನಿಯಾದರು. ಇದು ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನ. ಅಲ್ಲದೇ ಈವರೆಗೆ 3000ಮೀ. ಸ್ಟೀಪಲ್ಚೇಸ್ನಲ್ಲಿ 9:30 ನಿಮಿಷದೊಳಗೆ ಕ್ರಮಿಸಿದ ಭಾರತದ 3ನೇ ಅಥ್ಲೀಟ್ ಎನಿಸಿಕೊಂಡರು.