ಸಹೋದರಿಯರ ಗೌರವ ಪ್ರಶಸ್ತಿಗಿಂತ ದೊಡ್ಡದು: ಭಜರಂಗ್‌ ಪೂನಿಯಾ

By Kannadaprabha NewsFirst Published Dec 25, 2023, 9:46 AM IST
Highlights

ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಗೌರವಕ್ಕಿಂತ ಯಾವುದೇ ಪ್ರಶಸ್ತಿಯೂ ದೊಡ್ಡದಲ್ಲ. ಈಗ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನ್ಯಾಯ ಸಿಕ್ಕ ಬಳಿಕವಷ್ಟೇ ನನ್ನ ನಿರ್ಧಾರ ಹಿಂಪಡೆಯುವ ಬಗ್ಗೆ ಯೋಚಿಸುತ್ತೇನೆ. ಸದ್ಯ ಪ್ರಕರಣ ನ್ಯಾಯಾಲದಲ್ಲಿದೆ. ನ್ಯಾಯ ಸಿಗುವ ಭರವಸೆ ಇದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ನವದೆಹಲಿ(ಡಿ.25): ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ)ಗೆ ಸಂಸದ ಬ್ರಿಜ್‌ಭೂಷಣ್‌ ಸಿಂಗ್‌ ಆಪ್ತರ ನೇಮಕ ವಿರೋಧಿಸಿ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸುವುದಾಗಿ ಹೇಳಿದ್ದ ತಾರಾ ಕುಸ್ತಿಪಟು ಭಜರಂಗ್‌ ಪೂನಿಯಾ, ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಗೌರವಕ್ಕಿಂತ ಯಾವುದೇ ಪ್ರಶಸ್ತಿಯೂ ದೊಡ್ಡದಲ್ಲ. ಈಗ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನ್ಯಾಯ ಸಿಕ್ಕ ಬಳಿಕವಷ್ಟೇ ನನ್ನ ನಿರ್ಧಾರ ಹಿಂಪಡೆಯುವ ಬಗ್ಗೆ ಯೋಚಿಸುತ್ತೇನೆ. ಸದ್ಯ ಪ್ರಕರಣ ನ್ಯಾಯಾಲದಲ್ಲಿದೆ. ನ್ಯಾಯ ಸಿಗುವ ಭರವಸೆ ಇದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ಮನೆ ಹಾದಿಯಲ್ಲಿ ಪದ್ಮಶ್ರೀ ಇಟ್ಟ ಪೂನಿಯಾ!

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ)ಗೆ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ಆಪ್ತರ ಆಯ್ಕೆ ವಿರೋಧಿಸಿ ಒಲಿಂಪಿಕ್‌ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್‌ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಮತ್ತೊಬ್ಬ ಅಗ್ರ ಕುಸ್ತಿಪಟು ಭಜರಂಗ್‌ ಪೂನಿಯಾ 2019ರಲ್ಲಿ ತಮಗೆ ದೊರೆತಿದ್ದ ಪದ್ಮಶ್ರೀ ಪುರಸ್ಕಾರವನ್ನೇ ಮರಳಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಶುಕ್ರವಾರ ಪದ್ಮಶ್ರೀ ಹಿಂತಿರುಗಿಸಲು ಮುಂದಾಗಿದ್ದ ಪೂನಿಯಾ ಅವರನ್ನು ದೆಹಲಿಯ ಕರ್ತವ್ಯಪಥದಲ್ಲಿ ಪೊಲೀಸರು ತಡೆದಿದ್ದರು. ಇದರಿಂದ ಕ್ರುದ್ಧರಾದ ಪೂನಿಯಾ ಕರ್ತವ್ಯಪಥದ ಫುಟ್‌ಪಾತ್‌ನಲ್ಲಿ ಪದ್ಮಶ್ರೀ ಪದಕ ಇಟ್ಟು ತೆರಳಿದ್ದರು. ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ಇದಕ್ಕೂ ಮುನ್ನ ಭಜರಂಗ್‌, ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಸಿಗದಿರುವಾಗ ಪದ್ಮಶ್ರೀ ಇಟ್ಟುಕೊಂಡು ನಾನೇನು ಮಾಡಲಿ ಎಂದು ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ಕಿವುಡರ ಒಲಿಂಪಿಕ್‌ ವಿಜೇತ ವಿರೇಂದರ್‌ ಪದ್ಮಶ್ರೀ ವಾಪಸ್‌!

ಮನವೊಲಿಸುತ್ತೇವೆ- ಕ್ರೀಡಾ ಇಲಾಖೆ:

ಪದ್ಮಶ್ರೀ ವಾಪಸ್‌ ನೀಡುವ ಭಜರಂಗ್‌ ನಿರ್ಧಾರ ಅವರ ವೈಯಕ್ತಿಕ ಎಂದು ಕೇಂದ್ರ ಕ್ರೀಡಾ ಇಲಾಖೆ ಪ್ರತಿಕ್ರಿಯಿಸಿದೆ. ಆದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಬಜರಂಗ್‌ರನ್ನು ಮನವೊಲಿಸುತ್ತೇವೆ. ಕುಸ್ತಿ ಸಂಸ್ಥೆ ಚುನಾವಣೆ ಪಾರದರ್ಶಕವಾಗಿ ನಡೆದಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2019ರಲ್ಲಿ ಪದ್ಮಶ್ರೀ ಪಡೆದಿದ್ದ ಭಜರಂಗ್‌

ದೇಶದ 4ನೇ ಅತ್ಯುನ್ನತ ನಾಗರಿಕ ಪುರಸ್ಕಾರವಾಗಿರುವ ಪದ್ಮಶ್ರೀಯನ್ನು ಭಜರಂಗ್‌ 2019ರಲ್ಲಿ ಅಂದಿನ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಂದ ಸ್ವೀಕರಿಸಿದ್ದರು. ಅವರು ಅರ್ಜುನ, ಖೇಲ್‌ ರತ್ನ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಶೀಘ್ರವೇ ಬೆಂಗ್ಳೂರು ಸ್ಪೋರ್ಟ್ಸ್‌ ಹಬ್‌ ಆಗಲಿದೆ: ಕ್ರೀಡಾ ಸಚಿವ ಅನುರಾಗ್‌ ಠಾಕೂರ್

ಪದ್ಮಶ್ರೀ ಇಟ್ಟುಕೊಂಡು ನಾನೇನು ಮಾಡಲಿ?

ದೇಶ ಮಹಿಳಾ ಕುಸ್ತಿಪಟುಗಳು ದೌರ್ಜನ್ಯಕ್ಕೆ ಒಳಗಾಗುತ್ತಿರುವಾಗ ಪದ್ಮಶ್ರೀ ಪ್ರಶಸ್ತಿ ವಿಜೇತ ಎಂಬ ಹೆಸರಿನೊಂದಿಗೆ ಬದುಕಲು ನನ್ನಿಂದ ಸಾಧ್ಯವಿಲ್ಲ. ಇದನ್ನು ಇಟ್ಟುಕೊಂಡು ನಾನೇನು ಮಾಡಲಿ? ಕ್ರೀಡೆ ಮಹಿಳೆಯರ ಬದುಕನ್ನೇ ಬದಲಿಸಿದೆ. ಆದರೆ ಸದ್ಯದ ಪರಿಸ್ಥಿತಿ ಮಹಿಳೆಯರು ಕ್ರೀಡೆ ತೊರೆಯುವಂತೆ ಮಾಡುತ್ತಿದೆ.

-ಭಜರಂಗ್‌ ಪೂನಿಯಾ, ಅಗ್ರ ಕುಸ್ತಿಪಟು
 

click me!