
ನವದೆಹಲಿ (ಜ.18): ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು ಬುಧವಾರ ಭಾರತದ ರಾಷ್ಟ್ರೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರದ್ದು 'ಸರ್ವಾಧಿಕಾರ' ಎಂದು ಆರೋಪಿಸಿ ಜಂತರ್ ಮಂತರ್‌ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದರು. ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿನೇಶ್ ಫೋಗಟ್ ಆರೋಪಿಸಿದ್ದಾರೆ. ಕೋಚ್ ಬಗ್ಗೆಯೂ ಆರೋಪ ಮಾಡಿದ ಅವರು, ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾರೆ. ಈ ಕುರಿತಾಗಿ ನಾನು ಧ್ವನಿ ಎತ್ತಿದ್ದೇನೆ ಎಂದು ಹೇಳಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ಮಹಿಳಾ ಕುಸ್ತಿಪಟುಗಳಿಗೂ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಕುಸ್ತಿಪಟುಗಳು ಈ ಹೋರಾಟವನ್ನು ಕೊನೆಯವರೆಗೂ ನಡೆಸುತ್ತೇವೆ ಮತ್ತು ಬ್ರಿಜ್ ಭೂಷಣ್ ಅವರನ್ನು ಹುದ್ದೆಯಿಂದ ತೆಗೆದುಹಾಕುವವರೆಗೂ ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ.
ಭಾರತದ ಕುಸ್ತಿಪಟುಗಳ ಒಕ್ಕೂಟದ ಕೆಲವು ನೀತಿಗಳನ್ನು ವಿರೋಧಿಸುತ್ತಿದ್ದೇವೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಭಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಮಾತನಾಡಿದರು. ರೆಸ್ಲಿಂಗ್ ಫೆಡರೇಶನ್ ಅಧ್ಯಕ್ಷರು ಅಶ್ಲೀಲ ಪದಗಳನ್ನು ಬಳಸಿ ಕ್ರೀಡಾಪಟುಗಳನ್ನು ನಿಂದಿಸಿದ್ದಾರೆ ಎಂದು ಬಜರಂಗ್ ಪುನಿಯಾ ಆರೋಪಿಸಿದ್ದಾರೆ. 'ನಾವು ಇಲ್ಲಿ ಆಡಲು ಬಂದಿದ್ದೇವೆ. ಅವರು ನಿರ್ದಿಷ್ಟವಾಗಿ ಕ್ರೀಡಾಪಟು ಮತ್ತು ರಾಜ್ಯವನ್ನು ಗುರಿಯಾಗಿಸಿಕೊಂಡಿದ್ದಾರೆ. ಗಾಯಗೊಂಡರೆ ಯಾರೂ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ' ಎಂದು ವಿನೇಶ್ ಫೋಗಟ್ ಹೇಳಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಆಡದೇ ಇರುವ ಬಗ್ಗೆಯೂ ಮಾತನಾಡಿದ್ದಾರೆ. ಅಲ್ಲದೆ, ನನ್ನನ್ನು ನಕಲಿ ವ್ಯಕ್ತಿ ಎಂದು ಅವರು ನಿಂದಿಸಿದ್ದಾರೆ ಎಂದು ವಿನೇಶ್ ಅಳಲು ತೋಡಿಕೊಂಡಿದ್ದಾರೆ. ಫೆಡರೇಶನ್ ನನಗೆ ಮಾನಸಿಕ ಹಿಂಸೆ ನೀಡಿದೆ. ಇದಾದ ನಂತರ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದೆ ಎಂದಿದ್ದಾರೆ.
ಬಹುತೇಕ ಎಲ್ಲಾ ಕುಸ್ತಿಪಟುಗಳು ಇಂದು ಧರಣಿಗೆ ಬಂದಿದ್ದೇವೆ. ನಮಗೆ ನೀಡುತ್ತಿರುವ ಹಿಂಸೆಯನ್ನು ಮುಂದುವರಿಸಲು ನಾವು ಬಿಡೋದಿಲ್ಲ. ಆಗುತ್ತಿರುವ ಮಾನಸಿಕ ಕಿರುಕುಳ ನಡೆಯಲು ಬಿಡುವುದಿಲ್ಲ. ಒಕ್ಕೂಟದಿಂದ ನಮಗೆ ಮಾನಸಿಕ ಹಿಂಸೆಯಾಗುತ್ತಿದೆ ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ. ನಿಯಮಗಳನ್ನು ಮಾಡಿರರುವುದು ಫೆಡರೇಷನ್. ಆದರೆ, ಫೆಡರೇಷನ್ ದಿನಕ್ಕೊಂದು ಹೊಸ ನಿಮಗಳನ್ನು ಮಾಡುತ್ತಿದೆ. ಇದಕ್ಕೆಲ್ಲ ಅಧ್ಯಕ್ಷರ ಕುಮ್ಮಕ್ಕು ಇದೆ. ನಿರಂತರವಾಗಿ ಅಧ್ಯಕ್ಷ ಬ್ರಿಜ್ ಭೂಷಣ್ ನಮಗೆ ನಿಂದನೆ ಮಾಡುತ್ತಿದ್ದಾರೆ. ರೆಸ್ಲರ್‌ಗಳ ಕೆನ್ನೆಗೆ ಹೊಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
Commonwealth Games 2022: ಭಜರಂಗ್ ಪೂನಿಯಾಗೆ ಸ್ವರ್ಣ, ಜನ್ಮದಿನದಂದೇ ಬೆಳ್ಳಿ ಗೆದ್ದ ಅನ್ಶು ಮಲೀಕ್!
ಕುಸ್ತಿಪಟುಗಳ ಅಸಮಾಧಾನದ ನಂತರ, ಬ್ರಿಜ್ ಭೂಷಣ್ ಸಿಂಗ್ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅನ್ನು ನಡೆಸುತ್ತಿರುವ ರೀತಿಗೆ ಕುಸ್ತಿ ಆಟಗಾರರು ಬೇಸರಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಬ್ರಿಜ್ ಭೂಷಣ್ ಸಿಂಗ್ ಅವರು ಯುಪಿಯ ಕೈಸರ್‌ಗಂಜ್ ಕ್ಷೇತ್ರದಿಂದ ಬಿಜೆಪಿ ಸಂಸದರೂ ಆಗಿದ್ದಾರೆ.
ರೋಮ್ ಕುಸ್ತಿ: ಚಿನ್ನ ಗೆದ್ದು ಮತ್ತೆ ನಂ.1 ಸ್ಥಾನಕ್ಕೇರಿದ ಭಜರಂಗ್ ಪೂನಿಯಾ
ಅದೇ ಸಮಯದಲ್ಲಿ, ನಾನು ಯಾವುದೇ ಆಟಗಾರನಿಗೆ ಕಿರುಕುಳ ನೀಡಿಲ್ಲ ಎಂದು ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ. ಸಾಕಷ್ಟು ಅಧ್ಯಯನದ ನಂತರ, ಫೆಡರೇಶನ್ ನಿಯಮಗಳನ್ನು ಮಾಡಿದೆ. ಆಟಗಾರರಿಗೆ ಈ ಕುರಿತಾದ ಮಾಹಿತಿಯನ್ನೂ ನೀಡಲಾಗಿತ್ತು. ಪ್ರತಿಭಟನೆಯ ವಿಷಯ ತಿಳಿದ ತಕ್ಷಣ ದೆಹಲಿಗೆ ಬಂದಿದ್ದೇನೆ. ಲೈಂಗಿಕ ದೌರ್ಜನ್ಯದ ಆರೋಪದ ಕುರಿತಾಗಿ ಮಾತನಾಡಿದ ಅವರು, ನಾನು ಯಾರಿಗೆ ಕಿರುಕುಳ ನೀಡಿದ್ದೇನೆ. ಆಟಗಾರರ ಶೋಷಣೆ ಆರೋಪ ತಪ್ಪು. ಆರೋಪ ಮಾಡಿರುವವರು ಮುಂದೆ ಬರಬೇಕು. ಕೆಲವು ಕುಸ್ತಿಪಟುಗಳು ವಿಚಾರಣೆಗೆ ಬಂದಿರಲಿಲ್ಲ. ಏನಾದರೂ ಸಮಸ್ಯೆ ಇದ್ದರೆ 10 ವರ್ಷಗಳಿಂದ ಏನು ಮಾಡುತ್ತಿದ್ದೀರಿ. ನಾವು ಒಲಿಂಪಿಕ್ಸ್‌ಗೆ ನಿಯಮಗಳನ್ನು ಸ್ಪಷ್ಟವಾಗಿ ರೂಪಿಸಿದ್ದೇವೆ ಎಂದು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.