ಬಾಂಗರ್‌ಗೆ ಕೊಕ್‌, ರಾಥೋಡ್‌ ಹೊಸ ಬ್ಯಾಟಿಂಗ್‌ ಕೋಚ್‌!

By Kannadaprabha NewsFirst Published Aug 23, 2019, 11:56 AM IST
Highlights

ಟೀಂ ಇಂಡಿಯಾ ಸಹಾಯಕ ಕೋಚ್ ಹುದ್ದೆಗೆ ನಡೆದ ಸಂದರ್ಶನದಲ್ಲಿ ಬ್ಯಾಟಿಂಗ್ ಕೋಚ್ ಹುದ್ದೆಯಿಂದ ಸಂಜಯ್ ಬಾಂಗರ್‌ಗೆ ಗೇಟ್‌ಪಾಸ್ ನೀಡಲಾಗಿದೆ. ಹೊಸ ಕೋಚ್ ಪಟ್ಟ ರೆಡಿಯಾಗಿದೆ. ಇನ್ನುಳಿದಂತೆ ಫೀಲ್ಡಿಂಗ್-ಬೌಲಿಂಗ್ ಕೋಚ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಮುಂಬೈ[ಆ.23]: ಮಾಜಿ ಕ್ರಿಕೆಟಿಗ ವಿಕ್ರಮ ರಾಥೋಡ್‌ ಭಾರತ ಕ್ರಿಕೆಟ್‌ ತಂಡದ ನೂತನ ಬ್ಯಾಟಿಂಗ್‌ ಕೋಚ್‌ ಆಗಿ ಆಯ್ಕೆಯಾಗಲಿದ್ದಾರೆ. ಸಂಜಯ್‌ ಬಾಂಗರ್‌ಗೆ ಬಿಸಿಸಿಐ ಆಯ್ಕೆ ಸಮಿತಿ ಕೊಕ್‌ ನೀಡಿದೆ. ಇದೇ ವೇಳೆ ಬೌಲಿಂಗ್‌ ಕೋಚ್‌ ಆಗಿ ಭರತ್‌ ಅರುಣ್‌, ಫೀಲ್ಡಿಂಗ್‌ ಕೋಚ್‌ ಆಗಿ ಆರ್‌.ಶ್ರೀಧರ್‌ ಮುಂದುವರಿಯಲಿದ್ದಾರೆ.

ಸಲಹಾ ಸಮಿತಿ ಮುಂದೆ ಹೊಸ ಬೇಡಿಕೆಯಿಟ್ಟ ರವಿಶಾಸ್ತ್ರಿ..!

ಎಂ.ಎಸ್‌.ಕೆ.ಪ್ರಸಾದ್‌ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಸಹಾಯಕ ಸಿಬ್ಬಂದಿ ಪ್ರತಿ ವಿಭಾಗದಲ್ಲಿ ಮೂರು ಹೆಸರನ್ನು ಶಿಫಾರಸು ಮಾಡಿದೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಅಭ್ಯರ್ಥಿಯು ಸ್ವಹಿತಾಸಕ್ತಿ ವ್ಯಾಪ್ತಿಗೆ ಒಳಪಡುತ್ತಾರಾ ಎನ್ನುವುದನ್ನು ಪರಿಶೀಲಿಸಿದ ಬಳಿಕ ಬಿಸಿಸಿಐ ಅಧಿಕೃತವಾಗಿ ನೇಮಕ ಮಾಡಲಿದೆ. 

ರವಿಶಾಸ್ತ್ರಿ ಕೋಚ್ ಪುನರಾಯ್ಕೆಗೆ ಕಾರಣವೇನು?

50 ವರ್ಷದ ರಾಥೋಡ್‌ 1996ರಲ್ಲಿ ಭಾರತ ಪರ 6 ಟೆಸ್ಟ್‌, 7 ಏಕದಿನ ಪಂದ್ಯಗಳನ್ನು ಆಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಯಶಸ್ಸು ಕಾಣದಿದ್ದರೂ, ದೇಸಿ ಕ್ರಿಕೆಟ್‌ನಲ್ಲಿ ಹಲವು ವರ್ಷಗಳ ಕಾಲ ಪಂಜಾಬ್‌ನ ತಾರಾ ಆಟಗಾರರಾಗಿದ್ದರು. 2016ರ ವರೆಗೂ ಅವರು ಬಿಸಿಸಿಐ ಆಯ್ಕೆ ಸಮಿತಿಯಲ್ಲಿದ್ದರು. ಬ್ಯಾಟಿಂಗ್‌ ಕೋಚ್‌ ಪಟ್ಟಿಯಲ್ಲಿ ಬಾಂಗರ್‌ 2ನೇ ಸ್ಥಾನ ಪಡೆದರೆ, ಇಂಗ್ಲೆಂಡ್‌ನ ಮಾಜಿ ಆಟಗಾರ ಮಾರ್ಕ್ ರಾಮ್‌ಪ್ರಕಾಶ್‌ 3ನೇ ಸ್ಥಾನ ಪಡೆದರು.

ನಿರೀಕ್ಷೆಯಂತೆ ಭರತ್‌ ಅರುಣ್‌ ಟೀಂ ಇಂಡಿಯಾ ಬೌಲಿಂಗ್‌ ಕೋಚ್‌ ಹುದ್ದೆ ಉಳಿಸಿಕೊಂಡರು. ಅಗ್ರ 3 ಅಭ್ಯರ್ಥಿಗಳ ಪಟ್ಟಿಯಲ್ಲಿ ಅರುಣ್‌ ಮೊದಲ ಸ್ಥಾನ ಪಡೆದರೆ, ಪರಾಮ್‌ ಮಾಂಬ್ರೆ 2ನೇ ಸ್ಥಾನ ಪಡೆದರು. ವೆಂಕಟೇಶ್‌ ಪ್ರಸಾದ್‌ 3ನೇ ಸ್ಥಾನ ಗಳಿಸಿದರು.

ಟಾಪ್‌ 3ನಲ್ಲಿಲ್ಲ ರೋಡ್ಸ್‌!: ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಒಬ್ಬರಾದ ದ.ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್‌ ಭಾರತದ ಫೀಲ್ಡಿಂಗ್‌ ಕೋಚ್‌ ಆಗಲು ಬಯಸಿದ್ದರು. ಆದರೆ ಬಿಸಿಸಿಐ ಶ್ರೀಧರ್‌ರನ್ನೇ ಮುಂದುವರಿಸಲು ನಿರ್ಧರಿಸಿದೆ. ರೋಡ್ಸ್‌ ಅಂತಿಮ 3 ಅಭ್ಯರ್ಥಿಗಳ ಪಟ್ಟಿಯಲ್ಲೂ ಇಲ್ಲ. ಅಭಯ್‌ ಶರ್ಮಾಗೆ 2ನೇ, ಟಿ.ದಿಲೀಪ್‌ಗೆ 3ನೇ ಸ್ಥಾನ ದೊರೆತಿದೆ.

BCCI ಸಂದರ್ಶನಕ್ಕೆ ಜಾಂಟಿ ರೋಡ್ಸ್ ಹಾಜರ್

ಇದೇ ವೇಳೆ ವಿಂಡೀಸ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಜತೆ ಅನುಚಿತವಾಗಿ ವರ್ತಿಸಿದ್ದಕ್ಕೆ ತಂಡದ ಆಡಳಿತ ವ್ಯವಸ್ಥಾಪಕ ಸುನಿಲ್‌ ಸುಬ್ರಮಣಿಯಂ ತಲೆದಂಡವಾಗಿದೆ. ಅವರ ಸ್ಥಾನಕ್ಕೆ ಗಿರೀಶ್‌ ದೊಂಗ್ರೆ ನೇಮಕಗೊಂಡಿದ್ದಾರೆ.
 

click me!