US Open 2023: ರೋಹನ್ ಬೋಪಣ್ಣ ರನ್ನರ್‌-ಅಪ್‌! 2ನೇ ಬಾರಿಗೆ ಕೈತಪ್ಪಿದ ಪ್ರಶಸ್ತಿ!

By Kannadaprabha News  |  First Published Sep 9, 2023, 10:25 AM IST

13 ವರ್ಷಗಳ ಬಳಿಕ ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಆಡಿದ ಬೋಪಣ್ಣಗೆ ಮತ್ತೊಮ್ಮೆ ಅದೃಷ್ಟ ಕೈಕೊಟ್ಟಿತು. 2010ರಲ್ಲಿ ಯುಎಸ್‌ ಓಪನ್‌ನಲ್ಲೇ ಅವರು ಪಾಕಿಸ್ತಾನದ ಐಸಾಮ್‌ ಉಲ್‌ ಹಕ್‌ ಖುರೇಷಿ ಜೊತೆ ಆಡಿ ಫೈನಲ್‌ನಲ್ಲಿ ಅಮೆರಿಕದ ಬಾಬ್‌ ಹಾಗೂ ಮೈಕ್‌ ಬ್ರಿಯಾನ್‌ ವಿರುದ್ಧ ಸೋತಿದ್ದರು.


ನ್ಯೂಯಾರ್ಕ್‌(ಸೆ.09): ಕನ್ನಡಿಗ ರೋಹನ್‌ ಬೋಪಣ್ಣ ಯುಎಸ್‌ ಓಪನ್‌ ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿ ವಂಚಿತರಾಗಿದ್ದಾರೆ. ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಫೈನಲ್‌ನಲ್ಲಿ ಅಮೆರಿಕದ ರಾಜೀವ್‌ ರಾಮ್‌ ಹಾಗೂ ಬ್ರಿಟನ್‌ನ ಜೋ ಸ್ಯಾಲ್ಸ್ಬರಿ ವಿರುದ್ಧ 6-2, 3-6, 4-6 ಸೆಟ್‌ಗಳಲ್ಲಿ ಸೋಲು ಕಂಡ ಬೋಪಣ್ಣ, ಪುರುಷರ ಡಬಲ್ಸ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡರು.

ಫೈನಲ್‌ಗೇರಿ, ಗ್ರ್ಯಾನ್‌ಸ್ಲಾಂನಲ್ಲಿ ಈ ಸಾಧನೆ ಮಾಡಿದ ಅತಿಹಿರಿಯ ಆಟಗಾರ ಎನ್ನುವ ದಾಖಲೆಗೆ ಪಾತ್ರರಾಗಿದ್ದ 43 ವರ್ಷದ ಬೋಪಣ್ಣ, ಫೈನಲ್‌ನಲ್ಲೂ ಆಕರ್ಷಕವಾಗಿ ಆಡಿದರು. ಆದರೂ 3ನೇ ಶ್ರೇಯಾಂಕಿತ ಜೋಡಿ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ.

Tap to resize

Latest Videos

2ನೇ ಬಾರಿಗೆ ಕೈತಪ್ಪಿದ ಪ್ರಶಸ್ತಿ!

13 ವರ್ಷಗಳ ಬಳಿಕ ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಆಡಿದ ಬೋಪಣ್ಣಗೆ ಮತ್ತೊಮ್ಮೆ ಅದೃಷ್ಟ ಕೈಕೊಟ್ಟಿತು. 2010ರಲ್ಲಿ ಯುಎಸ್‌ ಓಪನ್‌ನಲ್ಲೇ ಅವರು ಪಾಕಿಸ್ತಾನದ ಐಸಾಮ್‌ ಉಲ್‌ ಹಕ್‌ ಖುರೇಷಿ ಜೊತೆ ಆಡಿ ಫೈನಲ್‌ನಲ್ಲಿ ಅಮೆರಿಕದ ಬಾಬ್‌ ಹಾಗೂ ಮೈಕ್‌ ಬ್ರಿಯಾನ್‌ ವಿರುದ್ಧ ಸೋತಿದ್ದರು. ಆಸ್ಟ್ರೇಲಿಯನ್‌ ಓಪನ್‌ನಲ್ಲಿ 3ನೇ ಸುತ್ತು ದಾಟದ ಬೋಪಣ್ಣ, ಫ್ರೆಂಚ್‌ ಓಪನ್‌ನಲ್ಲಿ ಒಮ್ಮೆ, ವಿಂಬಲ್ಡನ್‌ನಲ್ಲಿ 3 ಬಾರಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ ಒಂದು ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ. ಕೆನಡಾದ ಗೇಬ್ರಿಯಾಲಾ ದಬ್ರೌಸ್ಕಿ ಜೊತೆ ಬೋಪಣ್ಣ 2017ರ ಫ್ರೆಂಚ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದರು. ಈ ವರ್ಷ ಆಸ್ಟ್ರೇಲಿಯನ್‌ ಓಪನ್‌ನ ಮಿಶ್ರ ಡಬಲ್ಸ್‌ ಫೈನಲ್‌ನಲ್ಲಿ ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ ಸೋತು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

US Open 2023: ಸೆಮಿಫೈನಲ್‌ಗೆ ಲಗ್ಗೆಯಿಟ್ಟಿ ಕಾರ್ಲೊಸ್ ಆಲ್ಕರಜ್

ಸಬಲೆಂಕಾ-ಗಾಫ್‌ ಫೈನಲ್‌ ಫೈಟ್‌

ನ್ಯೂಯಾರ್ಕ್‌: ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನ ಫೈನಲ್‌ ಫೈಟ್‌ಗೆ ವೇದಿಕೆ ಸಜ್ಜುಗೊಂಡಿದ್ದು, ಪ್ರಶಸ್ತಿಗಾಗಿ ನೂತನ ವಿಶ್ವ ನಂ.1 ಅರೈನಾ ಸಬಲೆಂಕಾ ಹಾಗೂ ಅಮೆರಿಕದ ಯುವ ತಾರೆ ಕೊಕೊ ಗಾಫ್‌ ಭಾನುವಾರ ಬೆಳಗ್ಗಿನ ಜಾವ(ಭಾರತೀಯ ಕಾಲಮಾನ) ಪರಸ್ಪರ ಸೆಣಸಾಡಲಿದ್ದಾರೆ.

ಈ ವರ್ಷದ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌, ಬೆಲಾರಸ್‌ನ ಸಬಲೆಂಕಾ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಅಮೆರಿಕದ ಮ್ಯಾಡಿಸನ್‌ ಕೀಸ್‌ ವಿರುದ್ಧ 0-6, 7-6(7/1),7-6(10-5) ಸೆಟ್‌ಗಳಲ್ಲಿ ರೋಚಕ ಜಯಗಳಿಸಿದರು. ಆರಂಭಿಕ ಸೆಟ್‌ನಲ್ಲಿ ಒಂದೂ ಗೇಮ್‌ ಗೆಲ್ಲದೆ ಸೋತು, 2ನೇ ಸೆಟ್‌ನಲ್ಲಿ 3-5ರಿಂದ ಹಿನ್ನಡೆ ಅನುಭವಿದ ಹೊರತಾಗಿಯೂ ಬಳಿಕ ಪುಟಿದೆದ್ದು ತೀವ್ರ ಹೋರಾಟ ಪ್ರದರ್ಶಿಸಿದ 2ನೇ ಶ್ರೇಯಾಂಕಿತೆ ಸಬಲೆಂಕಾ ಚೊಚ್ಚಲ ಬಾರಿ ಯುಎಸ್‌ ಓಪನ್‌ನಲ್ಲಿ ಫೈನಲ್‌ಗೇರಿದರು. ಇದರೊಂದಿಗೆ 2017ರ ಬಳಿಕ ಮತ್ತೊಮ್ಮೆ ಯುಎಸ್‌ ಓಪನ್‌ ಫೈನಲ್‌ಗೇರುವ ಮ್ಯಾಡಿಸನ್‌ ಕನಸು ಭಗ್ನಗೊಂಡಿತು.

ಧೋನಿ, ಕೊಹ್ಲಿ, ಸಚಿನ್‌ ಲೆಕ್ಕಕ್ಕಿಲ್ಲ, ಈ ಭಾರತೀಯ ಕ್ರಿಕೆಟಿಗನ ಬಳಿ ಇದೆ ₹22 ಸಾವಿರ ಕೋಟಿ ಮೌಲ್ಯದ ಚಿನ್ನಾಭರಣ!

ಮತ್ತೊಂದು ಸೆಮೀಸ್‌ನಲ್ಲಿ 6ನೇ ಶ್ರೇಯಾಂಕಿತೆ ಗಾಫ್‌, 2023ರ ಫ್ರೆಂಚ್‌ ಓಪನ್‌ ರನ್ನರ್‌-ಅಪ್‌ ಕ್ಯಾರೊಲಿನಾ ಮುಕೋವಾ ವಿರುದ್ಧ 6-4, 7-5 ಸೆಟ್‌ಗಳಲ್ಲಿ ಜಯಿಸಿದರು. ಸೆರೆನಾ ವಿಲಿಯಮ್ಸ್‌ ಬಳಿಕ ಯುಎಸ್ ಓಪನ್‌ ಫೈನಲ್‌ಗೇರಿದ ಅತಿಕಿರಿಯ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿರುವ 19 ವರ್ಷದ ಕೊಕೊ, ಚೊಚ್ಚಲ ಪ್ರಶಸ್ತಿ ಜಯಿಸುವ ನಿರೀಕ್ಷೆಯಲ್ಲಿದ್ದಾರೆ.

click me!