Asia Cup 2023: ವಿರಾಟ್ ಕೊಹ್ಲಿ ಹಿಂದಿಕ್ಕಿ ನಾಯಕನಾಗಿ ವಿಶ್ವದಾಖಲೆ ಬರೆದ ಬಾಬರ್ ಅಜಂ..!

Published : Sep 08, 2023, 06:11 PM IST
Asia Cup 2023: ವಿರಾಟ್ ಕೊಹ್ಲಿ ಹಿಂದಿಕ್ಕಿ ನಾಯಕನಾಗಿ ವಿಶ್ವದಾಖಲೆ ಬರೆದ ಬಾಬರ್ ಅಜಂ..!

ಸಾರಾಂಶ

ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿ ಬಾಬರ್ ಅಜಂ ವಿಶ್ವದಾಖಲೆ ವಿರಾಟ್ ಕೊಹ್ಲಿ ದಾಖಲೆ ಧೂಳೀಪಟ ಮಾಡಿದ ಪಾಕಿಸ್ತಾನ ನಾಯಕ ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಶುಭಾರಂಭ ಮಾಡಿದ ಬಾಬರ್ ಅಜಂ

ಲಾಹೋರ್(ಸೆ.09): 2023ರ ಏಷ್ಯಾಕಪ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಇದೀಗ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ, ಟೀಂ ಇಂಡಿಯಾ ರನ್‌ ಮಷೀನ್ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಗಡಾಫಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಬಾಬರ್ ಅಜಂ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಹೌದು, ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಂ 22 ಎಸೆತಗಳನ್ನು ಎದುರಿಸಿ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಇದೇ ವೇಳೆ ಬಾಬರ್ ಅಜಂ, ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿ 2,000 ರನ್ ಬಾರಿಸುವಲ್ಲಿ ಯಶಸ್ವಿಯಾದರು. ನಾಯಕನಾಗಿ ಕೇವಲ 31 ಇನಿಂಗ್ಸ್‌ಗಳಲ್ಲಿ 2,000 ಬಾರಿಸುವ ಮೂಲಕ ಅತಿವೇಗವಾಗಿ ಏಕದಿನ ಕ್ರಿಕೆಟ್‌ನಲ್ಲಿ ಎರಡು ಸಾವಿರ ರನ್ ಬಾರಿಸಿದ ಬ್ಯಾಟರ್ ಎನ್ನುವ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಇದೀಗ ಬಾಬರ್ ಅಜಂ ಪಾಲಾಗಿದೆ. ಈ ಮೊದಲು ವಿರಾಟ್ ಕೊಹ್ಲಿ, ನಾಯಕನಾಗಿ ಏಕದಿನ ಕ್ರಿಕೆಟ್‌ನಲ್ಲಿ 36 ಇನಿಂಗ್ಸ್‌ಗಳನ್ನಾಡಿ 2 ಸಾವಿರ ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಆದರೆ ಇದೀಗ ಬಾಬರ್ ಅಜಂ, ಕೊಹ್ಲಿಗಿಂತಲೂ 5 ಇನಿಂಗ್ಸ್‌ ಕಡಿಮೆ ಆಡಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. 

ಇನ್ನುಳಿದಂತೆ ದಕ್ಷಿಣ ಆಫ್ರಿಕಾದ ಸೂಪರ್‌ ಸ್ಟಾರ್ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್‌ ನಾಯಕನಾಗಿ 41 ಏಕದಿನ ಇನಿಂಗ್ಸ್‌ಗಳನ್ನಾಡಿ 2000 ರನ್ ಬಾರಿಸುವ ಮೂಲಕ ಇದೀಗ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಇನ್ನು ಆಸ್ಟ್ರೇಲಿಯಾ ದಿಗ್ಗಜ ನಾಯಕ ಮೈಕಲ್ ಕ್ಲಾರ್ಕ್‌ 46 ಇನಿಂಗ್ಸ್‌ಗಳನ್ನಾಡಿ ಎರಡು ಸಾವಿರ ರನ್ ಪೂರೈಸಿದ್ದರು.

ಸೂಪರ್‌-4ನಲ್ಲಿ ಪಾಕಿಸ್ತಾನ ಶುಭಾರಂಭ!

ಲಾಹೋರ್‌: ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಯಶಸ್ವಿ ಓಟ ಮುಂದುವರಿಸಿದೆ. ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಪಾಕಿಸ್ತಾನ, ಸೂಪರ್‌-4 ಹಂತವನ್ನೂ ಗೆಲುವಿನೊಂದಿಗೆ ಆರಂಭಿಸಿದೆ. ಬುಧವಾರ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿತು.

ಮೊದಲು ಬಾಂಗ್ಲಾವನ್ನು 193 ರನ್‌ಗೆ ಕಟ್ಟಿಹಾಕಿದ ಪಾಕಿಸ್ತಾನ, ಆ ನಂತರ ಸಮಯ ತೆಗೆದುಕೊಂಡು ಯಾವುದೇ ಅಡೆತಡೆಗಳಾಗದಂತೆ ಎಚ್ಚರದಿಂದ ಬ್ಯಾಟ್‌ ಮಾಡಿ ಇನ್ನೂ 63 ಎಸೆತ ಬಾಕಿ ಇರುವಂತೆ ಗುರಿ ತಲುಪಿತು.

ಈ ಪಾಕಿಸ್ತಾನ ವೇಗಿ ಪತ್ನಿ ಬ್ಯೂಟಿಫುಲ್ ಮಾಡೆಲ್‌..! ಪಾಕ್‌ ಕ್ರಿಕೆಟಿಗನ ಮನಗೆದ್ದ ಗೊಂಬೆಯಂತ ಟಿಕ್‌ಟಾಕ್‌ ಚೆಲುವೆ

ಶೋರಿಫುಲ್‌ ಇಸ್ಲಾಂರ ಮಾರಕ ಆರಂಭಿಕ ಸ್ಪೆಲ್‌, ಪಾಕಿಸ್ತಾನಿ ಆರಂಭಿಕರನ್ನು ಪರೀಕ್ಷಿಸಿದರೂ ಹೆಚ್ಚು ಅನಾಹುತವಾಗಲು ಇಮಾಮ್‌-ಉಲ್‌-ಹಕ್‌ ಬಿಡಲಿಲ್ಲ. ಫಖರ್‌ ಜಮಾನ್‌ 20 ರನ್‌ ಗಳಿಸಿ ಔಟಾದ ಬಳಿಕ ನಾಯಕ ಬಾಬರ್‌ ಆಜಂ(17) ಜೊತೆ ಕೆಲ ಕಾಲ ಕ್ರೀಸ್‌ ಹಂಚಿಕೊಂಡ ಇಮಾಮ್‌, ಆ ಬಳಿಕ ಮೊಹಮದ್ ರಿಜ್ವಾನ್‌ ಜೊತೆ ಆಕರ್ಷಕ ಇನ್ನಿಂಗ್ಸ್‌ ಕಟ್ಟಿದರು.

ಈ ಇಬ್ಬರು ಬಾಂಗ್ಲಾ ಪುಟಿದೇಳದಂತೆ ಎಚ್ಚರ ವಹಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇನ್ನಿಂಗ್ಸ್‌ಗೆ ವೇಗ ತುಂಬುವ ಯತ್ನದಲ್ಲಿ ಇಮಾಮ್‌ (84 ಎಸೆತ 78 ರನ್‌, 5 ಬೌಂಡರಿ, 4 ಸಿಕ್ಸರ್‌) ವಿಕೆಟ್‌ ಕಳೆದುಕೊಂಡರೂ, ಅವರು ಪೆವಿಲಿಯನ್‌ಗೆ ವಾಪಸಾಗುವ ಹೊತ್ತಿಗೆ ಪಾಕಿಸ್ತಾನ ಜಯದ ಹೊಸ್ತಿಲು ತಲುಪಿತ್ತು. ತಾಳ್ಮೆಯುತ ಬ್ಯಾಟಿಂಗ್‌ ನಡೆಸಿದ ರಿಜ್ವಾನ್‌(79 ಎಸೆತದಲ್ಲಿ 63 ರನ್‌) ಅರ್ಹ ಅರ್ಧಶತಕ ದಾಖಲಿಸಿದರು.

Asia Cup 2023: ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌, ಇಂಡೋ-ಪಾಕ್‌ ಪಂದ್ಯಕ್ಕೆ ಮಳೆ ಬಂದ್ರೂ ಚಿಂತೆ ಬೇಡ..!

ಪಾಕ್‌ ವೇಗಿಗಳ ಮಾರಕ ದಾಳಿ: ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶವನ್ನು ಪಾಕಿಸ್ತಾನದ ವೇಗಿಗಳು ಬಲವಾಗಿ ಕಾಡಿದರು. 10 ಓವರ್‌ ಮುಗಿಯುವ ಮೊದಲೇ ಬಾಂಗ್ಲಾ 47ಕ್ಕೆ 4 ವಿಕೆಟ್‌ ಕಳೆದುಕೊಂಡಿತು. ನಾಯಕ ಶಕೀಬ್ ಅಲ್‌ ಹಸನ್‌(53) ಹಾಗೂ ಮುಷ್ಫಿಕುರ್‌ ರಹೀಂ(64)ರಿಂದ ಮಾತ್ರ ಹೋರಾಟ ಕಂಡು ಬಂತು. ಹ್ಯಾರಿಸ್‌ ರೌಫ್‌ ಆಕರ್ಷಕ ದಾಳಿ ಸಂಘಟಿಸಿ 4 ವಿಕೆಟ್‌ ಕಿತ್ತರೆ, ನಸೀಂ ಶಾ 3, ಶಾಹೀನ್‌ ಅಫ್ರಿದಿ 1 ವಿಕೆಟ್‌ ಕಿತ್ತರು. ಮತ್ತೊಂದು ವಿಕೆಟ್‌ ಫಹೀಂ ಅಶ್ರಫ್‌ ಪಾಲಾಯಿತು. ಬಾಂಗ್ಲಾ ಕೇವಲ 38.4 ಓವರಲ್ಲಿ ಆಲೌಟ್‌ ಆಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?