
ಕರಾಚಿ(ಮಾ.17): ಐಪಿಎಲ್ 11ನೇ ಆವೃತ್ತಿ ಹತ್ತಿರವಾಗುತ್ತಿದ್ದಂತೆ, ಕೋಲ್ಕತಾ ನೈಟ್'ರೈಡರ್ಸ್'ನ ಆತಂಕ ಹೆಚ್ಚುತ್ತಿದೆ. ಒಂದೆಡೆ ಅಗ್ರ ಆಟಗಾರರಾದ ಆ್ಯಂಡ್ರೆ ರಸೆಲ್, ಕ್ರಿಸ್ ಲಿನ್ ಗಾಯದ ಸಮಸ್ಯೆಗೆ ಸಿಲುಕಿದ್ದರೆ, ವೆಸ್ಟ್'ಇಂಡೀಸ್'ನ ಸ್ಪಿನ್ನರ್ ಸುನಿಲ್ ನರೇನ್ ಅನುಮಾನಾಸ್ಪದ ಬೌಲಿಂಗ್ ಆರೋಪಕ್ಕೆ ಗುರಿಯಾಗಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್ ಟಿ20ಯಲ್ಲಿ ಲಾಹೋರ್ ತಂಡದ ಪರ ಆಡುತ್ತಿರುವ ನರೇನ್, ಬುಧವಾರದ ಪಂದ್ಯದಲ್ಲಿ ಶಂಕಾಸ್ಪದ ಶೈಲಿಯಲ್ಲಿ ಬೌಲಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನರೇನ್'ಗೆ ಎಚ್ಚರಿಕೆ ನೀಡಿದ್ದು, ಬೌಲಿಂಗ್ ಮುಂದುವರಿಸಲು ಅನುಮತಿ ನೀಡಿದೆ. ಆದರೆ ಪಂದ್ಯದ ಅಧಿಕಾರಿಗಳಿಂದ ಶಂಕಾಸ್ಪದ ಬೌಲಿಂಗ್ ವರದಿಯಾದರೆ, ನರೇನ್ ಬೌಲಿಂಗ್'ನಿಂದ ಅಮಾನತುಗೊಳ್ಳಲಿದ್ದಾರೆ.
ಕಳೆದ ಆವೃತ್ತಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಮಿಂಚಿದ್ದ ನರೇನ್ ಅವರನ್ನು ಕೆಕೆಆರ್ ಪ್ರಾಂಚೈಸಿ ರೀಟೈನ್ ಮಾಡಿಕೊಂಡಿತ್ತು. ಈಗ ಪ್ರಮುಖ ಆಟಗಾರನೇ ಅನುಮಾನಾಸ್ಪದ ಬೌಲಿಂಗ್ ಆರೋಪಕ್ಕೆ ಗುರಿಯಾಗಿರುವುದು ಕೆಕೆಆರ್ ಪಾಳಯದಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಕೆರಿಬಿಯನ್ ಆಫ್'ಸ್ಪಿನ್ನರ್ ಅನುಮಾನಾಸ್ಪದ ಬೌಲಿಂಗ್ ಮಾಡುತ್ತಿರುವುದು ಇದೇ ಮೊದಲೇನಲ್ಲ. 2014ರ ಚಾಂಪಿಯನ್ಸ್ ಟ್ರೋಫಿ ಟಿ20 ಹಾಗೂ 2015ರ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಶಂಕಾಸ್ಪದ ಬೌಲಿಂಗ್ ಕಾರಣದಿಂದಾಗಿ ಹೊರಗುಳಿದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.