ಖೇಲ್ ರತ್ನ ಪ್ರಶಸ್ತಿಗೆ ಸಾತ್ವಿಕ್‌ಸಾಯಿರಾಜ್, ಚಿರಾಗ್ ಶೆಟ್ಟಿ ಆಯ್ಕೆ

By Kannadaprabha NewsFirst Published Dec 14, 2023, 1:31 PM IST
Highlights

2023ರಲ್ಲಿ ಅಮೋಘ ಪ್ರದರ್ಶನ ತೋರಿರುವ ಈ ಜೋಡಿಯನ್ನು 12 ಸದಸ್ಯರ ಸಮಿತಿಯು ಆಯ್ಕೆ ಮಾಡಿದೆ. ಕ್ರಿಕೆಟಿಗ ಮೊಹಮದ್ ಶಮಿ ಜೊತೆ ಇನ್ನೂ 18 ಕ್ರೀಡಾಪಟುಗಳ ಹೆಸರು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ನವದೆಹಲಿ(ಡಿ.14): ತಾರಾ ಬ್ಯಾಡ್ಮಿಂಟನ್ ಆಟಗಾರರಾದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಧ್ಯಾನ್‌ಚಂದ್ ಖೇಲ್ ರತ್ನಕ್ಕೆ ಆಯ್ಕೆಯಾಗಿದ್ದಾರೆ. 2023ರಲ್ಲಿ ಅಮೋಘ ಪ್ರದರ್ಶನ ತೋರಿರುವ ಈ ಜೋಡಿಯನ್ನು 12 ಸದಸ್ಯರ ಸಮಿತಿಯು ಆಯ್ಕೆ ಮಾಡಿದೆ. ಕ್ರಿಕೆಟಿಗ ಮೊಹಮದ್ ಶಮಿ ಜೊತೆ ಇನ್ನೂ 18 ಕ್ರೀಡಾಪಟುಗಳ ಹೆಸರು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಖೇಲ್ ರತ್ನ: ಸಾತ್ವಿಕ್ ಸಾಯಿರಾಜ್, ಚಿರಾಗ್ ಶೆಟ್ಟಿ (ಬ್ಯಾಡ್ಮಿಂಟನ್).

ಅರ್ಜುನ ಪ್ರಶಸ್ತಿ: ಶಮಿ (ಕ್ರಿಕೆಟ್), ಅಜಯ್ ರೆಡ್ಡಿ (ಅಂಧರ ಕ್ರಿಕೆಟ್), ಓಜಸ್ ದಿಯೋತಲೆ, ಅದಿತಿ ಸ್ವಾಮಿ (ಆರ್ಚರಿ), ಶೀತಲ್ ದೇವಿ (ಪ್ಯಾರಾ ಆರ್ಚರಿ), ಪಾರುಲ್ ಚೌಧರಿ, ಶ್ರೀಶಂಕರ್ ಮುರಳಿ (ಅಥ್ಲೆಟಿಕ್ಸ್), ಹುಸ್ಮುದ್ದಿನ್ (ಬಾಕ್ಸಿಂಗ್), ಆರ್.ವೈಶಾಲಿ (ಚೆಸ್), ದಿವ್ಯಕೃತಿ ಸಿಂಗ್, ಅನುಶ್ ಅಗರ್ವಾಲಾ (ಈಕ್ವೆಸ್ಟ್ರಿಯನ್), ದೀಕ್ಷಾ ಡಾಗರ್ (ಗಾಲ್ಫ್), ಕೃಷನ್ ಪಾಠಕ್, ಸುಶೀಲಾ ಚಾನು (ಹಾಕಿ), ಪಿಂಕಿ (ಲಾನ್ ಬಾಲ್), ಐಶ್ವರಿ ಪ್ರತಾಪ್ ತೋಮರ್ (ಶೂಟಿಂಗ್), ಅಂತಿಮ್ ಪಂಘಲ್ (ಕುಸ್ತಿ), ಐಹಿಕಾ ಮುಖರ್ಜಿ (ಟೇಬಲ್ ಟೆನಿಸ್), ರೋಶಿಬೀನಾ (ವುಶು).

ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿ: ಕವಿತಾ (ಕಬಡ್ಡಿ), ಮಂಜುಶಾ ಕನ್ವರ್ (ಬ್ಯಾಡ್ಮಿಂಟನ್), ವಿನೀಶ್ ಶರ್ಮಾ (ಹಾಕಿ). 

ದ್ರೋಣಾಚಾರ್ಯ ಪ್ರಶಸ್ತಿ (ಶ್ರೇಷ್ಠ ಕೋಚ್): ಗಣೇಶ್ ಪ್ರಭಾಕರನ್ (ಮಲ್ಲಕಂಬ), ಮಹಾವೀರ್ ಸೈನಿ (ಪ್ಯಾರಾ ಅಥ್ಲೆಟಿಕ್ಸ್), ಲಲಿತ್ ಕುಮಾರ್ (ಕುಸ್ತಿ), ಆರ್.ಬಿ.ರಮೇಶ್ (ಚೆಸ್), ಶಿವೇಂದ್ರ ಸಿಂಗ್ (ಹಾಕಿ).

ಪ್ಯಾರಾ ಖೇಲೋ ಗೇಮ್ಸ್‌: ರಾಜ್ಯದ ಸಕೀನಾಗೆ ಚಿನ್ನ

ನವದೆಹಲಿ: ಉದ್ಘಾಟನಾ ಆವೃತ್ತಿಯ ಪ್ಯಾರಾ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ ಮತ್ತೊಂದು ಚಿನ್ನದ ಪದಕ ದೊರೆತಿದೆ. ಮಹಿಳೆಯರ ಪವರ್ ಲಿಫ್ಟಿಂಗ್‌ನಲ್ಲಿ ಸಕೀನಾ ಕಾಟೂನ್ ಚಿನ್ನ ಜಯಿಸಿದ್ದಾರೆ. 50 ಕೆ.ಜಿ. ವಿಭಾಗದಲ್ಲಿ ಸಕೀನಾ ಒಟ್ಟು 96 ಕೆ.ಜಿ. ತೂಕ ಎತ್ತಿ ಮೊದಲ ಸ್ಥಾನ ಪಡೆದರು. ಇನ್ನು ಅಥ್ಲೆಟಿಕ್ಸ್‌ನ ಮಹಿಳೆಯರ ಟಿ 12/13 ವಿಭಾಗದ ಜಾವೆಲಿನ್ ಎಸೆತದಲ್ಲಿ ಗಂಗವ್ವ ಬೆಳ್ಳಿ, ಪುರುಷರ ಎಫ್ 42 ಶಾಟ್‌ಪುಟ್‌ನಲ್ಲಿ ಕಿಶನ್ ಕಂಚು ಪಡೆದರು. ಕರ್ನಾಟಕ ಒಟ್ಟು 5 ಚಿನ್ನ, ತಲಾ ೮ ಬೆಳ್ಳಿ, ಕಂಚಿ ನೊಂದಿಗೆ ಒಟ್ಟು 21 ಪದಕ ಪಡೆದು ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ನಾನೊಬ್ಬ ಹೆಮ್ಮೆಯ ಮುಸ್ಲಿಂ, ನಾನು ಎಲ್ಲಿ ಬೇಕಿದ್ರೂ ಸಜ್ದಾ ಮಾಡ್ತೇನೆ, ಯಾರೂ ತಡೆಯೋರು?: ಶಮಿ ಖಡಕ್ ಮಾತು

ಹಾಲ್ ಆಫ್ ಫೇಮ್‌ಗೆ ಪೇಸ್, ಅಮೃತ್‌ರಾಜ್

ನವದೆಹಲಿ: ಮಾಜಿ ವಿಶ್ವ ಡಬಲ್ಸ್ ನಂ.1 ಲಿಯಾಂಡರ್ ಪೇಸ್, ಖ್ಯಾತ ವೀಕ್ಷಕ ವಿವರಣೆಗಾರ, ಮಾಜಿ ಟೆನಿಸಿಗ ವಿಜಯ್ ಅಮೃತ್‌ರಾಜ್ ಅಂತಾರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಗೌರವಕ್ಕೆ ಪಾತ್ರರಾಗುತ್ತಿರುವ ಏಷ್ಯಾದ ಮೊದಲ ಪುರುಷರು ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಪೇಸ್‌ರನ್ನು ಆಟಗಾರರ ವಿಭಾಗದಲ್ಲಿ ಆಯ್ಕೆ ಮಾಡಲಾಗಿದ್ದು, ಅಮೃತ್‌ರಾಜ್ ಟೆನಿಸ್‌ಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ. 

ಶನಿವಾರ ಅಮೆರಿಕದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 2024ನೇ ಸಾಲಿನ ಗೌರವಾನ್ವಿತರನ್ನು ಹಾಲ್ ಆಫ್ ಫೇಮ್ ಪಟ್ಟಿಗೆ ಸೇರಿಸಲಾಗುತ್ತದೆ. ಹಾಲ್ ಆಫ್ ಫೇಮ್ ಹಿರಿಮೆ ಪಡೆದ 28ನೇ ರಾಷ್ಟ್ರ ಭಾರತ.

ಭಾರತ vs ಜರ್ಮನಿ ಸೆಮಿಫೈನಲ್‌ ಇಂದು

ಕೌಲಾಲಂಪುರ: ಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿರುವ ಭಾರತ, 4ನೇ ಬಾರಿಗೆ ಕಿರಿಯರ ಹಾಕಿ ವಿಶ್ವಕಪ್‌ ಫೈನಲ್‌ ಪ್ರವೇಶಿಸಲು ಎದುರು ನೋಡುತ್ತಿದೆ. ತಂಡದ ಫೈನಲ್‌ ಹಾದಿಯಲ್ಲಿ ಜರ್ಮನಿ ಎದುರಿದ್ದು, ಗುರುವಾರ ಸೆಮಿಫೈನಲ್‌ನಲ್ಲಿ ಜಯಭೇರಿ ಬಾರಿಸುವುದು ಭಾರತದ ಮುಂದಿರುವ ಗುರಿ.

ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.4 ನೆದರ್‌ಲೆಂಡ್ಸ್‌ ವಿರುದ್ಧ ಅಮೋಘ ಪ್ರದರ್ಶನ ತೋರಿದ ಭಾರತ, 0-2ರಿಂದ ಹಿಂದಿದ್ದ ಹೊರತಾಗಿಯೂ 4-3ರಲ್ಲಿ ಗೆದ್ದು ಮುನ್ನಡೆದಿತ್ತು. ಪಂದ್ಯ ಮುಕ್ತಾಯಗೊಳ್ಳಲು ಕೇವಲ 3 ನಿಮಿಷ ಬಾಕಿ ಇದ್ದಾಗ ನಾಯಕ ಉತ್ತಮ್‌ ಸಿಂಗ್‌ ಗೋಲು ಬಾರಿಸಿ ತಂಡವನ್ನು ಗೆಲ್ಲಿಸಿದ್ದರು. ಗೋಲ್‌ ಕೀಪರ್‌ ಕರ್ನಾಟಕದ ಮೋಹಿತ್ ಎಚ್‌.ಎಸ್‌. ಪ್ರಚಂಡ ಲಯ ಪ್ರದರ್ಶಿಸುತ್ತಿದ್ದು, ಅವರ ಮೇಲೆ ತಂಡ ಮತ್ತೆ ಅವಲಂಬಿತಗೊಂಡಿದೆ.

Pro Kabaddi League: ಬೆಂಗಳೂರು ಬುಲ್ಸ್‌ಗೆ ಸತತ ಎರಡನೇ ಜಯ..!

ಜರ್ಮನಿ ತನ್ನ ಪ್ರಬಲ ರಕ್ಷಣಾತ್ಮ ಆಟ ಹಾಗೂ ಎದುರಾಳಿಯ ರಕ್ಷಣಾ ಕೋಟೆಯನ್ನು ಕೌಂಟರ್‌ ಅಟ್ಯಾಕ್‌ ಮೂಲಕ ಭೇದಿಸಲು ಹೆಸರುವಾಸಿಯಾಗಿದ್ದು, ಭಾರತಕ್ಕೆ ಕಠಿಣ ಪೈಪೋಟಿ ಎದುರಾಗುವುದು ನಿಶ್ಚಿತ. ಈ ವರ್ಷ ಜರ್ಮಿನಿ ವಿರುದ್ಧ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಭಾರತ ಸೋಲುಂಡಿದೆ. ಇತ್ತೀಚೆಗೆ ಸುಲ್ತಾನ್‌ ಆಫ್‌ ಜೋಹರ್‌ ಕಪ್‌ನ ಸೆಮೀಸ್‌ನಲ್ಲಿ 3-6ರಿಂದ ಪರಾಭವಗೊಂಡಿತ್ತು. ಮತ್ತೊಂದು ಸೆಮೀಸ್‌ನಲ್ಲಿ ಸ್ಪೇನ್‌ ಹಾಗೂ ಫ್ರಾನ್ಸ್‌ ಸೆಣಸಲಿವೆ.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ,

ನೇರ ಪ್ರಸಾರ: ಜಿಯೋ ಸಿನಿಮಾ
 

click me!