ಮಾಜಿ ನಂಬರ್ 01 ಟೆನಿಸಿಗ ರೋಜರ್ ಫೆಡರರ್ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟಾ ಮುಂದುವರೆಸಿದ್ದು, ನಾಲ್ಕನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇನ್ನು 2ನೇ ಶ್ರೇಯಾಂಕಿತ ಆಟಗಾರ್ತಿ, ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಆಫಾತಕಾರಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ಪ್ಯಾರಿಸ್[ಜೂ.01]: 20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ರೋಜರ್ ಫೆಡರರ್, ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂನ 4ನೇ ಸುತ್ತಿಗೆ ಪ್ರವೇಶಿಸಿದ್ದಾರೆ. 47 ವರ್ಷಗಳಲ್ಲಿ ಟೂರ್ನಿಯಲ್ಲಿ 4ನೇ ಸುತ್ತಿಗೇರಿದ ಅತಿಹಿರಿಯ ಆಟಗಾರ ಎನ್ನುವ ದಾಖಲೆಯನ್ನು ಫೆಡರರ್ ಬರೆದಿದ್ದಾರೆ.
ತಮ್ಮ 400ನೇ ಗ್ರ್ಯಾಂಡ್‌ಸ್ಲಾಂ ಪಂದ್ಯದಲ್ಲಿ ಸ್ವಿಜರ್‌ಲೆಂಡ್‌ನ ಟೆನಿಸ್ ಮಾಂತ್ರಿಕ, ವಿಶ್ವ ನಂ.63 ನಾರ್ವೆಯ ಕ್ಯಾಸ್ಪರ್ ರುಡ್ ವಿರುದ್ಧ 6-3, 6-1, 7-6(10/8) ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 2015ರ ಬಳಿಕ ಮೊದಲ ಬಾರಿಗೆ ಫ್ರೆಂಚ್ ಓಪನ್‌ನಲ್ಲಿ ಆಡುತ್ತಿರುವ ಫೆಡರರ್, ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
3ನೇ ಸುತ್ತಿಗೆ ಲಗ್ಗೆಯಿಟ್ಟ ಫೆಡರರ್ ನಡಾಲ್
ಪ್ಲಿಸ್ಕೋವಾಗೆ ಆಘಾತ: 2ನೇ ಶ್ರೇಯಾಂಕಿತ ಆಟಗಾರ್ತಿ, ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಶುಕ್ರವಾರ 3ನೇ ಸುತ್ತಿನ ಪಂದ್ಯದಲ್ಲಿ ಕ್ರೊವೇಷಿಯಾದ ಪೆಟ್ರಾ ಮಾರ್ಟಿಕ್ ವಿರುದ್ಧ 3-6, 3-6 ನೇರ ಸೆಟ್‌ಗಳಲ್ಲಿ ಸೋಲುಂಡು ಆಘಾತ ಅನುಭವಿಸಿದರು. 31ನೇ ಶ್ರೇಯಾಂಕಿತೆ ಮಾರ್ಟಿಕ್, ಚೊಚ್ಚಲ ಬಾರಿಗೆ ಗ್ರ್ಯಾಂಡ್‌ಸ್ಲಾಂ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದ್ದು 4ನೇ ಸುತ್ತಿನಲ್ಲಿ ಎಸ್ಟೋನಿಯಾದ ಕಾಯಿಯಾ ಕನೆಪಿ ವಿರುದ್ಧ ಸೆಣಸಲಿದ್ದಾರೆ. ಈ ಋುತುವಿನಲ್ಲಿ ಮಾರ್ಟಿಕ್ ಮಣ್ಣಿನಂಕಣದಲ್ಲಿ 14 ಪಂದ್ಯಗಳನ್ನು ಜಯಿಸಿದ್ದಾರೆ.
ಇದೇ ವೇಳೆ 2016ರ ಚಾಂಪಿಯನ್ ಸ್ಪೇನ್‌ನ ಗಾರ್ಬೈನ್ ಮುಗುರುಜಾ, ಉಕ್ರೇನ್‌ನ ಎಲಿನಾ ಸ್ವಿಟೊಲಿನಾ ವಿರುದ್ಧ 6-3, 6-3 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿ 4ನೇ ಸುತ್ತಿಗೆ ಮುನ್ನಡೆದರು. ಸತತ 6ನೇ ವರ್ಷ ಫ್ರೆಂಚ್ ಓಪನ್ 4ನೇ ಸುತ್ತಿಗೇರಿದ ಸಾಧನೆ ಮಾಡಿದರು.
ಪ್ರಿ ಕ್ವಾರ್ಟರ್‌ಗೆ ಬೋಪಣ್ಣ ಜೋಡಿ
ಪುರುಷರ ಡಬಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ರೊಮೇನಿಯಾದ ಮಾರಿಯಸ್ ಕೊಪಿಲ್ ಜೋಡಿ ಬೆಂಜಮಿನ್ ಬೊನ್ಜಿ ಹಾಗೂ ಆ್ಯಂಟೋನಿ ಹೊವಾಂಗ್ ವಿರುದ್ಧ 6-4, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿ, ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಇದೇ ವೇಳೆ ಭಾರತದ ದಿವಿಜ್ ಶರಣ್ ಹಾಗೂ ಬ್ರೆಜಿಲ್‌ನ ಮಾರ್ಸೆಲೋ ಡೆಮಿಲೈನರ್ ಜೋಡಿ 2ನೇ ಸುತ್ತಿನ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರಬಿತ್ತು.