‘ರೋರ್‌ ಆಫ್‌ ದ ಲಯನ್‌’: ಧೋನಿ-ಮ್ಯಾಚ್ ಫಿಕ್ಸಿಂಗ್ ಬಗ್ಗೆ ಹೇಳಿದ ಮಾತುಗಳಿವು

By Web Desk  |  First Published Mar 22, 2019, 10:34 AM IST

2 ಬಾರಿ ವಿಶ್ವಕಪ್‌, 3 ಬಾರಿ ಐಪಿಎಲ್‌ ಟ್ರೋಫಿ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿರುವ ಸಾಕ್ಷ್ಯಚಿತ್ರ ‘ರೋರ್‌ ಆಫ್‌ ದ ಲಯನ್‌’ನಲ್ಲಿ ಭಾರತೀಯ ಕ್ರಿಕೆಟನ್ನು ಅಲುಗಾಡಿಸಿದ್ದ ಪ್ರಕರಣದಿಂದ ತಮ್ಮ ಮೇಲಾದ ಪರಿಣಾಮಗಳ ಕುರಿತು ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.


ಚೆನ್ನೈ[ಮಾ.22]: ‘ಆಟಗಾರರು ಮಾಡಿದ ತಪ್ಪಾದರೂ ಏನು?’... 2013ರ ಫಿಕ್ಸಿಂಗ್‌ ಪ್ರಕರಣದ ಕುರಿತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂ.ಎಸ್‌.ಧೋನಿಯ ಪ್ರತಿಕ್ರಿಯೆ ಇದು.

2 ಬಾರಿ ವಿಶ್ವಕಪ್‌, 3 ಬಾರಿ ಐಪಿಎಲ್‌ ಟ್ರೋಫಿ ವಿಜೇತ ನಾಯಕ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿರುವ ಸಾಕ್ಷ್ಯಚಿತ್ರ ‘ರೋರ್‌ ಆಫ್‌ ದ ಲಯನ್‌’ನಲ್ಲಿ ಭಾರತೀಯ ಕ್ರಿಕೆಟನ್ನು ಅಲುಗಾಡಿಸಿದ್ದ ಪ್ರಕರಣದಿಂದ ತಮ್ಮ ಮೇಲಾದ ಪರಿಣಾಮಗಳ ಕುರಿತು ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.

Latest Videos

undefined

ಧೋನಿಯ ರೋರ್ ಆಫ್ ಲಯನ್ ಟ್ರೇಲರ್ ರಿಲೀಸ್

‘2013 ನನ್ನ ಜೀವನದ ಅತ್ಯಂತ ಕಠಿಣ ಸಮಯ. ಅಷ್ಟೊಂದು ಖಿನ್ನತೆಗೆ ಹಿಂದೆಂದೂ ನಾನು ಒಳಗಾಗಿರಲಿಲ್ಲ. 2007ರ ಏಕದಿನ ವಿಶ್ವಕಪ್‌ನ ಗುಂಪು ಹಂತದಲ್ಲೇ ಭಾರತ ಹೊರಬಿದ್ದಾಗ ಅತೀವ ಬೇಸರವಾಗಿತ್ತು. ಆದರೆ ನಾವು ಉತ್ತಮ ಕ್ರಿಕೆಟ್‌ ಆಡದ ಕಾರಣ, ಸೋತೆವು. ಆದರೆ 2013ರಲ್ಲಿ ಆಗಿದ್ದೇ ಬೇರೆ. ಜನ ಮ್ಯಾಚ್‌ ಫಿಕ್ಸಿಂಗ್‌, ಸ್ಪಾಟ್‌ ಫಿಕ್ಸಿಂಗ್‌ ಬಗ್ಗೆ ಮಾತನಾಡುತ್ತಿದ್ದರು. ದೇಶದಲ್ಲಿ ಅತಿಹೆಚ್ಚು ಚರ್ಚೆಯಾಗುತ್ತಿದ್ದ ವಿಷಯ ಅದು. ನಾನು ಆ ಸಮಯದಲ್ಲಿ ಭಾರತ ತಂಡದ ನಾಯಕನೂ ಆಗಿದ್ದೆ. ಹೋದಲೆಲ್ಲಾ ಐಪಿಎಲ್‌ ವಿಚಾರವಾಗಿಯೇ ಪ್ರಶ್ನೆಗಳು ಬರುತ್ತಿದ್ದವು. ವಿವಾದಗಳಿಗೆ ಉತ್ತರಿಸುತ್ತಾ, ಆಟದ ಕಡೆಗೂ ಗಮನ ನೀಡುವುದು ಬಹಳ ಕಷ್ಟವಾಗಿತ್ತು’ ಎಂದು ಸಾಕ್ಷ್ಯ ಚಿತ್ರದ ಮೊದಲ ಕಂತು ‘ನಾವು ಮಾಡಿದ ತಪ್ಪಾದರೂ ಏನು?’ರಲ್ಲಿ ಧೋನಿ ವಿವರಿಸಿದ್ದಾರೆ.

ಅಭ್ಯಾಸದ ವೇಳೆ ಕೊಹ್ಲಿ-ಧೋನಿ ಭೇಟಿ, CSK ಟ್ವೀಟ್!

ರೋರ್‌ ಆಫ್‌ ದ ಲಯನ್‌ ಸಾಕ್ಷ್ಯಚಿತ್ರದಲ್ಲಿ ಒಟ್ಟು 5 ಕಂತುಗಳಿವೆ. ಸಿಎಸ್‌ಕೆ ನಿಷೇಧದಿಂದ ಹೊರಬಂದು 2018ರಲ್ಲಿ ಚಾಂಪಿಯನ್‌ ಆಗಿದ್ದು ಹೇಗೆ ಎನ್ನುವುದನ್ನು ತೋರಿಸಲಾಗಿದೆ. ಧೋನಿ ಜತೆ ರೈನಾ, ಜಡೇಜಾ, ವಾಟ್ಸನ್‌, ಮೋಹಿತ್‌ ಶರ್ಮಾ, ಮಾಜಿ ಸಿಎಸ್‌ಕೆ ಆಟಗಾರರಾದ ಹೇಡನ್‌ ಹಾಗೂ ಹಸ್ಸಿ ಸಹ ಕಾಣಿಸಿಕೊಂಡಿದ್ದಾರೆ.

ಬೆಟ್ಟಿಂಗ್‌ ಪ್ರಕರಣದಿಂದ ಕಠಿಣ ಶಿಕ್ಷೆ ಎದುರಾಗಲಿದೆ ಎಂದು ನಿರೀಕ್ಷೆ ಮಾಡಿದ್ದೆವು ಎಂದು ಧೋನಿ ಹೇಳಿದ್ದಾರೆ. ‘ಶಿಕ್ಷೆಗೆ ತಂಡ ಅರ್ಹವಾಗಿತ್ತು. ಆದರೆ ಶಿಕ್ಷೆಯ ಪ್ರಮಾಣದ ಬಗ್ಗೆ ಬೇಸರವಾಯಿತು. ಗುರುನಾಥನ್‌ ಕೇವಲ ನಮ್ಮ ಮಾಲೀಕರ ಅಳಿಯ ಎಂದಷ್ಟೇ ನಮಗೆ ಗೊತ್ತಿತ್ತು. ಸಿಎಸ್‌ಕೆ ತಂಡ 2 ವರ್ಷ ನಿಷೇಧಕ್ಕೊಳಗಾಗಿದೆ ಎಂದು ತಿಳಿದಾಗ ಮಿಶ್ರ ಭಾವನೆ ಮೂಡಿತು. ಏಕೆಂದರೆ ಹಲವು ವಿಚಾರಗಳನ್ನು ಮನಸಿಗೆ ತೆಗೆದುಕೊಂಡಿರುತ್ತೇವೆ. ನಾಯಕನಾಗಿ, ತಂಡದ ಆಟಗಾರರು ಏನು ತಪ್ಪು ಮಾಡಿದರು ಎನಿಸಿತು’ ಎಂದು ಧೋನಿ ಬೇಸರ ವ್ಯಕ್ತಪಡಿಸಿದ್ದಾರೆ.

‘ಹೌದು ನಮ್ಮ ತಂಡದಿಂದ ತಪ್ಪಾಗಿತ್ತು. ಆದರೆ ಆಟಗಾರರು ಭಾಗಿಯಾಗಿದ್ದರೆ?. ನಾವೇನು ತಪ್ಪು ಮಾಡಿದ್ದೆವು, ನಾವೇಕೆ ಶಿಕ್ಷೆ ಅನುಭವಿಸಬೇಕಿತ್ತು’ ಎಂದು ಧೋನಿ ಪ್ರಶ್ನಿಸಿದ್ದಾರೆ.

ಫಿಕ್ಸಿಂಗ್‌ ಆರೋಪವನ್ನು ನೆನಪು ಮಾಡಿಕೊಂಡಿರುವ ಧೋನಿ, ‘ನನ್ನ ಹೆಸರು ಸಹ ಫಿಕ್ಸಿಂಗ್‌ನಲ್ಲಿ ತಳುಕು ಹಾಕಿಕೊಂಡಿತ್ತು. ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ತಂಡ ಫಿಕ್ಸಿಂಗ್‌ ನಡೆಸಿದೆ. ನಾನು ಫಿಕ್ಸಿಂಗ್‌ ನಡೆಸಿದ್ದೇನೆ ಎಂದು ತೋರಿಸಲು ಆರಂಭಿಸಿದರು. ಕ್ರಿಕೆಟ್‌ನಲ್ಲಿ ಫಿಕ್ಸಿಂಗ್‌ ಸಾಧ್ಯವೇ?. ಹೌದು ಸಾಧ್ಯ. ಯಾರು ಬೇಕಿದ್ದರೂ ಫಿಕ್ಸಿಂಗ್‌ ಮಾಡಬಹುದು. ಅಂಪೈರ್‌, ಬ್ಯಾಟ್ಸ್‌ಮನ್‌, ಬೌಲರ್‌. ಆದರೆ ಮ್ಯಾಚ್‌ ಫಿಕ್ಸಿಂಗ್‌ ನಡೆಸಲು ಬಹುತೇಕ ಆಟಗಾರರು ಸೇರಿಕೊಳ್ಳಬೇಕಾಗುತ್ತದೆ’ ಎಂದು ಸಿಎಸ್‌ಕೆ ನಾಯಕ ಹೇಳಿದ್ದಾರೆ.

ಧೋನಿ ಸದಾ ತಮ್ಮ ಕೆಲಸವನ್ನು ಸದ್ದಿಲ್ಲದೆ ಮಾಡಲು ಹೆಸರುವಾಸಿ. ಆದರೆ ಅವರ ಮೌನವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಯಿತು. ‘ಕ್ರಿಕೆಟ್‌ ನನಗೆ ಎಲ್ಲವನ್ನೂ ಕೊಟ್ಟಿದೆ. ನನ್ನಿಂದಾಗಬಹುದಾದ ಅತಿದೊಡ್ಡ ತಪ್ಪು ಎಂದರೆ ಅದು ಕೊಲೆಯಲ್ಲ ಬದಲಿಗೆ ಮ್ಯಾಚ್‌ ಫಿಕ್ಸಿಂಗ್‌. ಅಂತಹ ಕಠಿಣ ವಿಷಯವನ್ನು ಜೀವನದಲ್ಲಿ ನಾನು ಎದುರಿಸಲು ಸಾಧ್ಯವಿಲ್ಲ’ ಎಂದು ಧೋನಿ ಫಿಕ್ಸಿಂಗ್‌ ಆರೋಪವನ್ನು ತಳ್ಳಿಹಾಕಿದ್ದಾರೆ.

ಸಾಕ್ಷ್ಯ ಚಿತ್ರದ ಕೊನೆಯಲ್ಲಿ ಆಂತರಿಕ ಸಭೆಯಲ್ಲಿ ತಂಡ ಐಪಿಎಲ್‌ಗೆ ವಾಪಸಾಗುತ್ತಿರುವ ಕುರಿತು ಮಾತನಾಡುವಾಗ ಧೋನಿ ಕಣ್ಣಾಲಿಗಳು ಒದ್ದೆಯಾಗಿದ್ದನ್ನು ತೋರಿಸಲಾಗಿದೆ.

click me!