ಹಾಲಿ ಕೋಚ್ ರವಿಶಾಸ್ತ್ರಿಯೇ ಮತ್ತೊಂದು ಅವಧಿಗೆ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಮುಂದುವರೆಯುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ನಾಯಕ ಕೊಹ್ಲಿ ಕೂಡಾ ಶಾಸ್ತ್ರಿ ಬಗ್ಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದೆಲ್ಲದರ ಜತೆಗೆ ಮತ್ತೊಂದು ಪ್ರಮುಖ ಕಾರಣಕ್ಕೋಸ್ಕರ ಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗಿ ಮುಂದುವರೆಯಲಿದ್ದಾರೆ. ಅಷ್ಟಕ್ಕೂ ಏನದು ಕಾರಣ..? ನೀವೇ ನೋಡಿ...
ನವದೆಹಲಿ[ಆ.07]: ಭಾರತ ತಂಡದ ಪ್ರಧಾನ ಕೋಚ್ ಆಗಿ ರವಿಶಾಸ್ತ್ರಿ ಮುಂದುವರೆಯಬೇಕೋ, ಬೇಡವೋ ಎನ್ನುವ ವಾದಕ್ಕೆ ಬಹುತೇಕ ತೆರೆಬಿದ್ದಂತಿದೆ.
ಕೋಚ್ ಆಯ್ಕೆ ಮಾಡಲು ನಿಯೋಜಿತಗೊಂಡಿರುವ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸದಸ್ಯರೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದು, ವಿದೇಶಿ ಕೋಚ್ ನೇಮಕ ಮಾಡುವ ಬಗ್ಗೆ ಒಲವು ತೋರುತ್ತಿಲ್ಲ ಎಂದಿದ್ದಾರೆ. 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ನೇತೃತ್ವದ ಸಲಹಾ ಸಮಿತಿಯಲ್ಲಿ ಭಾರತದ ಮಾಜಿ ನಾಯಕ ಅನ್ಶುಮಾನ್ ಗಾಯಕ್ವಾಡ್, ನಾಯಕಿ ಶಾಂತಾ ರಂಗಸ್ವಾಮಿ ಇದ್ದಾರೆ.
‘ವಿದೇಶಿ ಕೋಚ್ ಆಯ್ಕೆ ಮಾಡಲು ನಾವು ಒಲವು ತೋರುತ್ತಿಲ್ಲ. ಒಂದೊಮ್ಮೆ ಗ್ಯಾರಿ ಕಸ್ರ್ಟನ್‌ರಂತಹ ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದರೆ ಪರಿಗಣಿಸುತ್ತಿದ್ದೆವು. ಆಗಲೂ ಭಾರತೀಯ ಕೋಚ್‌ಗೆ ಹೆಚ್ಚಿನ ಆದ್ಯತೆ ಸಿಗುತ್ತಿತ್ತು’ ಎಂದು ಸಲಹಾ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ.
ಕೋಚ್ ಆಯ್ಕೆ: ಕಪಿಲ್ ದೇವ್ ಸಮಿತಿಗೆ ಗ್ರೀನ್ ಸಿಗ್ನಲ್
ಶಾಸ್ತ್ರಿ ಪರ ಬ್ಯಾಟಿಂಗ್: ಭಾರತ ತಂಡದ ಕೋಚ್ ಆಗಿ ರವಿಶಾಸ್ತ್ರಿ ಉತ್ತಮ ಕೆಲಸ ಮಾಡಿದ್ದಾರೆ. ಹೀಗಿರುವಾಗ ಬದಲಾವಣೆ ಅವಶ್ಯಕತೆ ಏನಿದೆ ಎಂದು ಸಿಎಸಿ ಸದಸ್ಯರು, ಹಾಲಿ ಕೋಚ್ ಪರ ಬ್ಯಾಟ್ ಬೀಸಿದ್ದಾರೆ. ‘ಸದ್ಯದ ಮಟ್ಟಿಗೆ ಶಾಸ್ತ್ರಿಯೇ ಕೋಚ್ ಆಗಲು ಸೂಕ್ತ ಅಭ್ಯರ್ಥಿ ಎನಿಸುತ್ತಿದ್ದು, ಅವರ ಗುತ್ತಿಗೆಯನ್ನು ನವೀಕರಿಸುವ ಬಗ್ಗೆ ಚರ್ಚೆ ನಡೆದಿದೆ’ ಎಂದು ಹೇಳಿದ್ದಾರೆ.
ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಸಹ ಇತ್ತೀಚೆಗೆ ಶಾಸ್ತ್ರಿಯೇ ಕೋಚ್ ಆಗಿ ಮುಂದುವರಿಯವುದು ಉತ್ತಮ ಎಂದಿದ್ದರು. ತಂಡದಲ್ಲಿ ಕೆಲ ಮಹತ್ವದ ಪರಿವರ್ತನೆಗಳು ಆಗುತ್ತಿದ್ದು, ಆಟಗಾರರ ಬಗ್ಗೆ ಉತ್ತಮ ಜ್ಞಾನವಿರುವ ಶಾಸ್ತ್ರಿ ಕೋಚ್ ಆಗಿದ್ದರೆ ತಂಡಕ್ಕೆ ನೆರವಾಗಲಿದೆ ಎಂದು ಬಿಸಿಸಿಐ ಅಧಿಕಾರಿ ಅಭಿಪ್ರಾಯಪಟ್ಟಿದ್ದರು.
ಟೀಂ ಇಂಡಿಯಾ ನೂತನ ಕೋಚ್; ಯಾರ ಕಡೆ ಕೊಹ್ಲಿ ಒಲವು ?
‘ಈ ಹಂತದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಾರದು. ಶಾಸ್ತ್ರಿ ಹಾಗೂ ಕೊಹ್ಲಿ ನಡುವೆ ಉತ್ತಮ ಬಾಂಧವ್ಯವಿದ್ದು, ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿರುವವರನ್ನು ಬದಲಿಸುವುದು ಸರಿಯಲ್ಲ. ಕೋಚ್ ಬದಲಿಸಿದರೆ ತಂಡದ ವಾತಾವರಣ ಹಾಳಾಗುವ ಸಾಧ್ಯತೆ ಇದ್ದು, 2020ರ ಟಿ20 ವಿಶ್ವಕಪ್ ವರೆಗೂ ಶಾಸ್ತ್ರಿಯೇ ಮುಂದುವರಿಯಬೇಕು’ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.
ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುವ ಅಭ್ಯರ್ಥಿಗಳ ಸಂದರ್ಶನ ಯಾವಾಗ ನಡೆಸಬೇಕು ಎಂದು ಸಲಹಾ ಸಮಿತಿಗೆ ಬಿಸಿಸಿಐ ಇನ್ನೂ ಸೂಚನೆ ನೀಡಿಲ್ಲ. ಆದರೆ ಇತ್ತೀಚೆಗಷ್ಟೇ ವಿನೋದ್ ರಾಯ್, ಆಗಸ್ಟ್ 15ರ ವೇಳೆಗೆ ಸಂದರ್ಶನ ನಡೆಸುವ ನಿರೀಕ್ಷೆ ಇದೆ ಎಂದಿದ್ದರು.