INDvWI 3ನೇ ಟಿ20: ಭಾರತಕ್ಕೆ 147 ರನ್ ಟಾರ್ಗೆಟ್ ನೀಡಿದ ವಿಂಡೀಸ್!

By Web DeskFirst Published Aug 6, 2019, 10:54 PM IST
Highlights

ಇಂಡೋ-ವಿಂಡೀಸ್ 3ನೇಹಾಗೂ ಅಂತಿಮ ಟಿ20 ಪಂದ್ಯಕ್ಕೆ ಆರಂಭದಲ್ಲಿ ಮಳೆ ಅಡ್ಡಿ ಪಡಿಸಿದರೆ, ಬಳಿಕ ವೆಸ್ಟ್ ಇಂಡೀಸ್ ಬ್ಯಾಟ್ಸಮನ್‌ಗಳಿಗೆ ಭಾರತೀಯ ಬೌಲರ್‌ಗಳು ಕಾಡಿದರು. ಕಿರನ್ ಪೊಲಾರ್ಡ್ ಹೋರಾಟದಿಂದ ವೆಸ್ಟ್ ಇಂಡೀಸ್ 146 ರನ್ ಸಿಡಿಸಿದೆ. ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.
 

ಗಯಾನ(ಆ.06): ಭಾರತ ವಿರುದ್ಧದ ಟಿ20 ಸರಣಿ ಸೋತಿರುವ ವೆಸ್ಟ್ ಇಂಡೀಸ್ ಅಂತಿಮ ಪಂದ್ಯದ ಗೆಲುವಿಗಾಗಿ ಕಠಿಣ ಹೋರಾಟ ನೀಡುತ್ತಿದೆ. 3ನೇ ಟಿ20 ಪಂದ್ಯದಲ್ಲಿ ವಿಂಡೀಸ್ 6 ವಿಕೆಟ್ ನಷ್ಟಕ್ಕೆ 146 ರನ್ ಸಿಡಿಸಿದೆ. ಈ  ಮೂಲಕ ಭಾರತಕ್ಕೆ 147 ರನ್ ಟಾರ್ಗೆಟ್ ನೀಡಿದೆ. ಈಗಾಗಲೇ 2 ಪಂದ್ಯ ಸೋತಿರುವ ವೆಸ್ಟ್ ಇಂಡೀಸ್ ಅಂತಿಮ ಪಂದ್ಯ ಗೆದ್ದು ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಲು ಹೆಣಗಾಡುತ್ತಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್, ನಿರೀಕ್ಷಿತ ಆರಂಭ ಪಡೆಯಲಿಲ್ಲ. ಎವಿನ್ ಲಿವಿಸ್ ಹಾಗೂ ಸುನಿಲ್ ನರೈನ್ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ನರೈನ್ 2 ಹಾಗೂ ಲಿವಿಸ್ 10 ರನ್ ಸಿಡಿಸಿ ನಿರ್ಗಮಿಸಿದರು. 13 ರನ್‌ಗೆ 2 ವಿಕೆಟ್ ಕಳೆದುಕೊಂಡ ವಿಂಡೀಸ್, ಮತ್ತೊಂದು ರನ್ ಪೇರಿಸುವಷ್ಟರಲ್ಲೇ ಶಿಮ್ರೊನ್ ಹೆಟ್ಮೆಯರ್ ವಿಕೆಟ್ ಕಳೆದುಕೊಂಡಿತು. ಹೆಟ್ಮೆಯರ್ 1 ರನ್ ಸಿಡಿಸಿ ಔಟಾದರು.

ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಏಕಾಂಗಿ ಹೋರಾಟ ನೀಡುತ್ತಿರುವ ಕೀರನ್ ಪೊಲಾರ್ಡ್ ಅಂತಿಮ ಪಂದ್ಯದಲ್ಲೂ ಆಸರೆಯಾದರು. ನಿಕೋಲಸ್ ಪೂರನ್ 17 ರನ್ ಸಿಡಿಸಿ ಔಟಾದರು. ಇತ್ತ ಹಾಫ್ ಸೆಂಚುರಿ ಸಿಡಿಸಿದ ಕೀರನ್ ಪೊಲಾರ್ಡ್ ವಿಂಡೀಸ್ ಮೊತ್ತವನ್ನು 100ರ ಗಡಿ ದಾಟಿಸಿದರು. ಪೊಲಾರ್ಡ್ 58 ರನ್ ಸಿಡಿಸಿ ಔಟಾದರು.

ದೀಪಕ್ ಚಹಾರ್ ಹಾಗೂ ನವದೀಪ್ ಸೈನಿ ಬೌಲಿಂಗ್ ದಾಳಿಗೆ ವೆಸ್ಟ್ ಇಂಡೀಸ್ ತತ್ತರಿಸಿತು. ವಿಕೆಟ್ ಉಳಿಸಿಕೊಳ್ಳುವತ್ತ ಹೆಚ್ಚಿನ ಗಮನ ನೀಡಿದ ವಿಂಡೀಸ್ ರನ್ ಕಲೆಹಾಕುವಲ್ಲಿ ವಿಫಲವಾಯಿತು. ನಾಯಕ ಕಾರ್ಲೋಸ್ ಬ್ರಾಥ್ವೈಟ್ 10 ರನ್ ಸಿಡಿಸಿ ರಾಹುಲ್ ಚಹಾರ್‌ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ರಾಹುಲ್ ಚಹಾರ್ ಮೊದಲ ಅಂತಾರಾಷ್ಟ್ರೀಯ ವಿಕೆಟ್ ಸಂಭ್ರಮ ಆಚರಿಸಿದರು. 

ರೊವ್ಮಾನ್ ಪೊವೆಲ್ ಅಜೇಯ 32 ರನ್ ಹಾಗೂ ಫಾಬಿಯನ್ ಅಲೆನ್ ಸಿಡಿಸಿದ 8 ರನ್ ನೆರವಿನಿಂದ ವೆಸ್ಟ್ ಇಂಡೀಸ್ 6 ವಿಕೆಟ್ ನಷ್ಟಕ್ಕೆ146 ರನ್ ಸಿಡಿಸಿತು. ಭಾರತದ ಪರ ದೀಪಕ್ ಚಾಹರ್ 3, ನವದೀಪ್ ಸೈನಿ 2 ಹಾಗೂ  ರಾಹುಲ್ ಚಹಾರ್ 1 ವಿಕೆಟ್ ಪಡೆದರು. 

click me!