Wrestlers Protest 'ಹಾಡುಹಗಲೇ ಪ್ರಜಾಪ್ರಭುತ್ವದ ಕಗ್ಗೊಲೆ': ಕುಸ್ತಿಪಟುಗಳನ್ನು ಬಂಧಿಸಿದ ಡೆಲ್ಲಿ ಪೊಲೀಸರು..!

Published : May 28, 2023, 05:47 PM IST
Wrestlers Protest 'ಹಾಡುಹಗಲೇ ಪ್ರಜಾಪ್ರಭುತ್ವದ ಕಗ್ಗೊಲೆ': ಕುಸ್ತಿಪಟುಗಳನ್ನು ಬಂಧಿಸಿದ ಡೆಲ್ಲಿ ಪೊಲೀಸರು..!

ಸಾರಾಂಶ

ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕುವ ಕುಸ್ತಿಪಟುಗಳ ಯತ್ನ ವಿಫಲ ಜಂತರ್ ಮಂತರ್‌ನಲ್ಲೇ ಕುಸ್ತಿಪಟುಗಳನ್ನು ವಶಕ್ಕೆ ಪಡೆದ ಡೆಲ್ಲಿ ಪೊಲೀಸರು ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಿನೇಶ್ ಫೋಗಾಟ್ ಆಕ್ರೋಶ

ನವದೆಹಲಿ(ಮೇ.28): ರಾಷ್ಟ್ರರಾಜಧಾನಿಯಲ್ಲಿ ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನವನ್ನು ಉದ್ಘಾಟನಿಸಿದರೆ, ಮತ್ತೊಂದೆಡೆ ಜಂತರ್‌-ಮಂತರ್‌ನಲ್ಲಿ ಒಂದು ರೀತಿಯಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ದೇಶಕ್ಕೆ ಪದಕ ಜಯಿಸಿದ ಭಜರಂಗ್ ಫೂನಿಯಾ, ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಸೇರಿದಂತೆ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತಂತೆ ಹಲವು ಕುಸ್ತಿಪಟುಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಭಾರತೀಯ ಜನತಾ ಪಕ್ಷ(ಬಿಜೆಪಿ) ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ಮೇಲೆ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ಒಲಿಂಪಿಕ್ ಪದಕ ವಿಜೇತರು ಸೇರಿದಂತೆ ಹಲವಾರು ಕುಸ್ತಿಪಟುಗಳು ನಿರಂತರವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.  ಇದೀಗ ನೂತನ ಸಂಸತ್‌ ಭವನದ ಎದುರು ‘ಮಹಾ ಪಂಚಾಯತ್‌’ ಹೆಸ​ರಿ​ನಲ್ಲಿ ಬೃಹತ್‌ ಪ್ರತಿ​ಭ​ಟನೆ ನಡೆ​ಸಲು ಸಿದ್ದತೆ ನಡೆಸಿದ್ದರು  ಪ್ರಧಾನಿ ನರೇಂದ್ರ ಮೋದಿ ಸಂಸತ್‌ ಭವನದ ಉದ್ಘಾ​ಟಿ​ಸುವ ಸಮ​ಯ​ದಲ್ಲೇ ಕುಸ್ತಿ​ಪ​ಟು​ಗಳು ಸಂಸತ್‌ ಭವನಕ್ಕೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದರು. ಆದರೆ ಇದಕ್ಕೆ ಡೆಲ್ಲಿ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ.

ಈ ಮೊದಲು ವರ್ಷ​ಗಳ ಹಿಂದೆ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ​ಗ​ಳನ್ನು ವಿರೋ​ಧಿಸಿ ವಿವಿಧ ರಾಜ್ಯ​ಗಳ ರೈತರು ದೆಹ​ಲಿ​ಯಲ್ಲಿ ‘ಮಹಾ ಪಂಚಾ​ಯತ್‌’ ಎಂಬ ಬೃಹತ್‌ ಹೋರಾಟ ಸಂಘ​ಟಿ​ಸಿ​ದ್ದರು. ಆ ಹೋರಾಟ ಯಶಸ್ವಿಯಾಗಿತ್ತು. ಅದೇ ರೀತಿ ಇದೀಗ ಕುಸ್ತಿ​ಪ​ಟು​ಗಳು ಕೂಡಾ ಇದೇ ಹೆಸ​ರಲ್ಲಿ ಹೋರಾ​ಟಕ್ಕೆ ಮುಂದಾ​ಗಿದ್ದರು. ಇದ​ಕ್ಕಾಗಿ ವಿವಿಧ ರಾಜ್ಯ​ಗಳಿಂದ ಕುಸ್ತಿ​ಪ​ಟು​ಗಳ ಬೆಂಬ​ಲಿ​ಗರು ಈಗಾ​ಗಲೇ ದೆಹ​ಲಿಗೆ ಆಗ​ಮಿ​ಸಿದ್ದು, ರೈತ, ವಿದ್ಯಾರ್ಥಿ, ಮಹಿಳಾ ಸಂಘ​ಟ​ನೆ​ಗ​ಳು ಹೋರಾ​ಟದಲ್ಲಿ ಕೈಜೋಡಿ​ಸಿದ್ದವು. 

ಇನ್ನು ಈ ಬಗ್ಗೆ ಪ್ರತಿಭಟನೆಗೂ ಮುನ್ನ ದಿನ ಪ್ರತಿ​ಕ್ರಿ​ಯಿ​ಸಿ​ದ್ದ ಕುಸ್ತಿ​ಪಟು ವಿನೇಶ್‌ ಫೋಗಾಟ್‌, ‘ಮ​ಹಾ​ಪಂಚಾ​ಯ​ತ್‌ಗೆ ಅನು​ಮತಿ ಕೊಡು​ತ್ತಿಲ್ಲ. ನಮ್ಮನ್ನು ಪೊಲೀ​ಸರು ತಡೆ​ದರೆ ಅಲ್ಲೇ ಪ್ರತಿ​ಭ​ಟಿ​ಸು​ತ್ತೇವೆ. ಶಾಂತ ರೀತಿ​ಯಲ್ಲೇ ಹೋರಾಟ ನಡೆ​ಸು​ತ್ತೇವೆ. ಆದರೆ ನಮ್ಮ ಹೋರಾ​ಟ​ವನ್ನು ಹಳಿ ತಪ್ಪಿ​ಸಲು ಹಲ​ವರು ಪ್ರಯ​ತ್ನಿ​ಸು​ತ್ತಿ​ದ್ದಾ​ರೆ’ ಎಂದು ಆತಂಕ ವ್ಯಕ್ತ​ಪ​ಡಿ​ಸಿದ್ದರು.

Wrestlers Protest ಸಂಸತ್‌ ಭವ​ನಕ್ಕಿಂದು ಕುಸ್ತಿ​ಪ​ಟು​ಗ​ಳ ಮುತ್ತಿ​ಗೆ!

ಇನ್ನು ಇದೀಗ ಪೊಲೀಸರ ವರ್ತನೆಯ ಬಗ್ಗೆ ಕಿಡಿಕಾರಿರುವ ವಿನೇಶ್ ಫೋಗಾಟ್, "ಹಾಡುಹಗಲೇ ಜಂತರ್‌-ಮಂತರ್‌ನಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಒಂದು ಕಡೆ ಪ್ರಧಾನಮಂತ್ರಿಗಳು ನೂತನ ಸಂಸತ್ ಭವನವನ್ನು ಉದ್ಘಾಟಿಸುತ್ತಿದ್ದಾರೆ, ಇನ್ನೊಂದೆಡೆ ನಮ್ಮವರನ್ನೇ ಬಂಧಿಸಲಾಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಎಲ್ಲಾ ಕುಸ್ತಿಪಟುಗಳನ್ನು , ಹೋರಾಟನಿರತರನ್ನು ವಶಕ್ಕೆ ಪಡೆದ ಬಳಿಕ ಪೊಲೀಸರು ಇದೀಗ ತಾವು ಜಂತರ್-ಮಂತರ್‌ನಲ್ಲಿ ವಾಸ್ತವ್ಯ ಹೂಡಲು ಮಾಡಿಕೊಂಡಿದ್ದ ಸಾಮಾನುಗಳನ್ನು ಕಿತ್ತೊಗೆಯುತ್ತಿದ್ದಾರೆ. ಇದು ಯಾವ ರೀತಿಯ ಗೂಂಡಾಗಿರಿ ಎಂದು ರಿಯೊ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಕುಸ್ತಿಪಟುಗಳು ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲಿದ್ದಾರೆ ಎನ್ನುವ ಸುಳಿವು ಸಿಗುತ್ತಿದ್ದಂತೆಯೇ, ನೂತನ ಪಾರ್ಲಿಮೆಂಟ್ ಸುತ್ತಾಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ದೆಹಲಿಯ ಬಾರ್ಡರ್‌ಗಳಾದ ಸಿಂಘು, ಟಿಕ್ರಿ ಹಾಗೂ ಘಾಜಿಪುರ್ ಬಾರ್ಡರ್‌ಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ದೆಹಲಿಯ ಗಡಿ ಭಾಗಗಳ ಸೂಕ್ಷ್ಮ ಪ್ರದೇಶಗಳಲ್ಲಿ ಪೆಟ್ರೋಲಿಂಗ್ ವಾಹನಗಳು ಹದ್ದಿನಗಣ್ಣಿಟ್ಟಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಹ್ಲಿಗೆ ಗಿಫ್ಟ್ ನೀಡಲು 15 ಲಕ್ಷ ರೂ ಮೌಲ್ಯದ ಚಿನ್ನದ ಐಫೋನ್ ಕವರ್ ತಂದ ಅಭಿಮಾನಿ
ಬೆಂಗಳೂರಿಗೆ ವಿದಾಯ ಹೇಳಿದ ಆರ್‌ಸಿಬಿ, ತವರಿನ ಪಂದ್ಯಗಳಿಗೆ ಛತ್ತೀಸ್‌ಗಢದ ರಾಯ್ಪುರ ಆತಿಥ್ಯ ಖಚಿತಪಡಿಸಿದ ಫ್ರಾಂಚೈಸಿ!