ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ತಂಡ ಈ ಆವೃತ್ತಿಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ಇದರ ಬೆನ್ನಲ್ಲೇ ಬಲ್ಸ್ ತಂಡದೊಳಗಿನ ಬಾಕಿ ಹಣ ಹಗರಣ ಇದೀಗ ಬೆಳಕಿಗೆ ಬಂದಿದೆ. ಕೋಟಿ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಫ್ರಾಂಚೈಸಿ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಬೆಂಗಳೂರು(ಆ.24): ವೃತ್ತಿಪರ ಕ್ರೀಡಾ ಲೀಗ್‌ನಲ್ಲಿ ತಂಡವೊಂದನ್ನು ನಡೆಸುವುದು ಸುಲಭದ ಮಾತಲ್ಲ. ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮೊದಲ ಆವೃತ್ತಿಯಿಂದಲೂ ಆಡುತ್ತಿರುವ, ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಆರ್ಥಿಕ ಸಂಕಷ್ಟದಲ್ಲಿದೆ. 6ನೇ ಆವೃತ್ತಿಯಲ್ಲಿ ತಂಡ ಪ್ರಶಸ್ತಿ ಗೆದ್ದರೂ ತಂಡದೊಳಗೆ ಹಲವು ಸಮಸ್ಯೆಗಳು ಭುಗಿಲೆದಿದ್ದು, ಅದನ್ನು ಇನ್ನೂ ಬಗೆಹರಿಸಿಕೊಳ್ಳಲು ಮಾಲೀಕರಿಗೆ ಸಾಧ್ಯವಾಗಿಲ್ಲ.
ಇದನ್ನೂ ಓದಿ: PKL7: ಬೆಂಗಳೂರು ಬುಲ್ಸ್ ನೆಗೆತಕ್ಕೆ ಅಪ್ಪಚ್ಚಿಯಾದ ತಮಿಳ್ ತಲೈವಾಸ್!
6ನೇ ಆವೃತ್ತಿಯ ನಿರ್ವಹಣೆಗೆ ವಿವಿಧ ಮಾರಾಟಗಾರರಿಂದ ಪಡೆದಿದ್ದ ಸೇವೆ, ಸಿಬ್ಬಂದಿಯ ವೇತನ, ಆಡಳಿತದಲ್ಲಿದ್ದ ಹಲವು ಮುಖ್ಯ ವ್ಯಕ್ತಿಗಳಿಗೆ ನೀಡಬೇಕಾದ ಹಣ ಎಲ್ಲಾ ಸೇರಿ .2.5 ಕೋಟಿಗೂ ಹೆಚ್ಚು ಬಾಕಿ ಉಳಿಸಿಕೊಂಡಿದೆ. ಹಳೆ ಬಾಕಿ ಚುಕ್ತಾ ಮಾಡದೆ 7ನೇ ಆವೃತ್ತಿಯಲ್ಲಿ ತಂಡ ಕಣಕ್ಕಿಳಿದಿದೆ. ತಂಡ ಉಳಿಸಿಕೊಂಡಿರುವ ಬಾಕಿ ಹಣದ ಸಂಪೂರ್ಣ ವಿವರ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.
ಇದನ್ನೂ ಓದಿ: ಪ್ರೊ ಕಬಡ್ಡಿ 2019: ಪಾಟ್ನಾಗೆ 6ನೇ ಸೋಲು!
ಆಗಿರುವುದೇನು?
ಬೆಂಗಳೂರು ಬುಲ್ಸ್ ತಂಡದ ಮಾಲೀಕರು ಯಾರು ಎನ್ನುವ ಮಾಹಿತಿ ಇದು ವರೆಗೂ ಬಹುತೇಕರಿಗೆ ತಿಳಿದಿಲ್ಲ. ತಂಡದ ನಿಜವಾದ ಮಾಲೀಕರು ಸ್ವಘೋಷಿತ ದೇವ ಮಾನವ ಕಲ್ಕಿ ಭಗವಾನ್ರ ಪುತ್ರ, ಉದ್ಯಮಿ ಎನ್.ವಿ.ಕೃಷ್ಣ. ಆದರೆ ಮೊದಲ ಆವೃತ್ತಿಯಿಂದಲೂ ತಂಡದ ನಿರ್ವಹಣೆ ಮಾಡಿಕೊಂಡು ಬಂದಿದ್ದು ಸಿಇಒ ಉದಯ್ ಸಿನ್ಹಾವಾಲಾ. ಪ್ರತಿ ವರ್ಷವೂ ಉದಯ್ ಹಾಗೂ ಅವರ ತಂಡವೇ, ಬುಲ್ಸ್‌ನ ತರಬೇತಿ ಶಿಬಿರದಿಂದ ಹಿಡಿದು ಆಟಗಾರರಿಗೆ ಅಗತ್ಯವಿದ್ದ ಎಲ್ಲಾ ಸೌಲಭ್ಯಗಳ ವ್ಯವಸ್ಥೆ ಮಾಡುತ್ತಿತ್ತು. 5ನೇ ಆವೃತ್ತಿಯ ಕೊನೆಯಲ್ಲಿ ಮಾಲೀಕರಿಗೆ ಆರ್ಥಿಕ ಸಂಕಷ್ಟಎದುರಾಗಿದೆ. ಇದು 6ನೇ ಆವೃತ್ತಿಯಲ್ಲೂ ಮುಂದುವರಿದಿದ್ದು, ತಂಡದ ನಿರ್ವಹಣೆಗೆ ಮಾಲೀಕರು ಹಣ ನೀಡಿಲ್ಲ.
ಉದಯ್ ಹಾಗೂ ಅವರ ತಂಡದ ಮೇಲಿದ್ದ ನಂಬಿಕೆಯಿಂದಲೇ ಮಾರಾಟಗಾರರು ಅಗತ್ಯ ಸೇವೆಗಳನ್ನು ಒದಗಿಸಿದ್ದಾರೆ. ಕಳೆದ ವರ್ಷ ಬೆಂಗಳೂರು ತಂಡದ ತವರು ಚರಣದ ಪಂದ್ಯಗಳು ಪುಣೆಗೆ ಸ್ಥಳಾಂತರಗೊಂಡಿತ್ತು. ಅಲ್ಲಿ ಕ್ರೀಡಾಂಗಣದ ಮ್ಯಾಟ್ ಅಳವಡಿಕೆ, ಪ್ರಚಾರ ಕಾರ್ಯ ಸೇರಿದಂತೆ ವಿವಿಧ ಸೇವೆಗಳನ್ನು ಪಡೆದು 8 ತಿಂಗಳಾದರೂ ಇನ್ನೂ ಹಣ ಬಾಕಿ ನೀಡಿಲ್ಲ.
ಹೊಸ ಆಡಳಿತ ರಚನೆ!
6 ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ ಸಿಇಒ ಉದಯ್ ಸೇರಿದಂತೆ ಅವರ ತಂಡವನ್ನು 6ನೇ ಆವೃತ್ತಿ ಬಳಿಕ ಬುಲ್ಸ್ ಮಾಲೀಕರು ಕಿತ್ತು ಹಾಕಿ, ಹೊಸ ಆಡಳಿತದೊಂದಿಗೆ 7ನೇ ಆವೃತ್ತಿಯಲ್ಲಿ ಕಣಕ್ಕಿಳಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಉಯದ್, ‘ಕಬಡ್ಡಿ ಬೆಳೆಯಬೇಕು ಎನ್ನುವ ಉದ್ದೇಶದಿಂದ ಆರ್ಥಿಕ ಸಂಕಷ್ಟದ ನಡುವೆಯೂ ತಂಡ ನಿರ್ವಹಣೆ ಮಾಡಿದೆವು. ಪ್ರತಿ ಸಂಸ್ಥೆಗೂ ಸಂಕಷ್ಟಎದುರಾಗುತ್ತದೆ. ಆದರೆ ಬುಲ್ಸ್ ಮಾಲೀಕರು ನಮ್ಮನ್ನು ನಡೆಸಿಕೊಂಡ ರೀತಿ ಸರಿಯಲ್ಲ. ನಮ್ಮ ಕಚೇರಿಯ ಸಹಾಯಕ (ಆಫೀಸ್ ಬಾಯ್) ತನ್ನ ಕಿಸೆಯಿಂದ .45 ಸಾವಿರ ಖರ್ಚು ಮಾಡಿದ್ದಾನೆ. ಆತನಿಗೂ ಬಾಕಿ ಪಾವತಿಸುತ್ತಿಲ್ಲ. ತಂಡದ ಫಿಸಿಯೋ, ವಕೀಲರು ಸೇರಿದಂತೆ ಅನೇಕರಿಗೆ ಕೊಡಬೇಕಾದ ಹಣ ಬಾಕಿ ಇದೆ. ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲರಿಗೂ ದೊಡ್ಡ ಮೊತ್ತದ ವೇತನ ಸಿಗುವುದಿಲ್ಲ. ಅಂಥವರಿಗೆ ಮೋಸವಾಗಬಾರದು’ ಎಂದರು.
ಈ ಸಂಬಂಧ ಬುಲ್ಸ್ ತಂಡದ ಸಹ ಮಾಲೀಕ ರಾಜು ಪಶುಪತಿ ಅವರಿಂದ ಪ್ರತಿಕ್ರಿಯೆ ಪಡೆಯಲು ‘ಕನ್ನಡಪ್ರಭ’ ನಡೆಸಿತು. ಆದರೆ ರಾಜು ಅವರು ಉತ್ತರಿಸಲಿಲ್ಲ.
ಒಂದು ಆವೃತ್ತಿಗೆ ಖರ್ಚೆಷ್ಟು, ಲಾಭವೆಷ್ಟು?
ಆಟಗಾರರ ವೇತನ, ಪಂಚತಾರಾ ಹೋಟೆಲ್ ಕೊಠಡಿ, ವಿಮಾನ ಟಿಕೆಟ್, ಆಟಗಾರರ ತರಬೇತಿ ಶಿಬಿರ, ಆಹಾರ, ಪೂರಕ ಆಹಾರ (ಫುಡ್ ಸಪ್ಲಿಮೆಂಟ್ಸ್), ಪ್ರೋಟಿನ್, ಫಿಸಿಯೋ, ವೈದ್ಯರು ಹೀಗೆ ಎಲ್ಲಾ ಸೇರಿ ಒಂದು ಆವೃತ್ತಿಗೆ 12 ಕೋಟಿ ವರೆಗೂ ಖರ್ಚಾಗುತ್ತದೆ. ಲೀಗ್ ಮಾಲೀಕತ್ವ ಹೊಂದಿರುವ ಸ್ಟಾರ್ ಹಾಗೂ ಮಶಾಲ್ ಸ್ಪೋಟ್ಸ್‌ರ್ ಪ್ರಸಾರ ಹಕ್ಕಿನಿಂದ ಬರುವ ಹಣದಲ್ಲಿ ಪ್ರತಿ ತಂಡಕ್ಕೆ 6 ಕೋಟಿ ನೀಡುತ್ತದೆ. ಇನ್ನುಳಿದ ಹಣವನ್ನು ಪ್ರಾಯೋಜಕತ್ವ ಒಪ್ಪಂದಗಳಿಂದ ತಂಡಗಳು ಪಡೆಯಬೇಕು. 6ನೇ ಆವೃತ್ತಿಯಲ್ಲಿ ಬುಲ್ಸ್ ಚಾಂಪಿಯನ್ ಆಗಿದ್ದಕ್ಕೆ 3 ಕೋಟಿ ಹೆಚ್ಚುವರಿ ಮೊತ್ತ ಸಿಕ್ಕಿದೆ. ಹೀಗಾಗಿ ಆರ್ಥಿಕ ಸಮಸ್ಯೆ ಎದುರಾಗುವ ಸಾಧ್ಯತೆ ತೀರಾ ಕಡಿಮೆ. ಹೀಗಿದ್ದು, 2.5 ಕೋಟಿ ಬಾಕಿ ಉಳಿಸಿಕೊಂಡಿರುವುದು ಅನುಮಾನ ಮೂಡಿಸುತ್ತಿದೆ ಎಂದು ತಂಡದಲ್ಲಿ 6 ವರ್ಷ ವ್ಯವಸ್ಥಾಪಕರಾಗಿದ್ದವರು ಹೇಳಿದ್ದಾರೆ.
ಪಾವತಿಸಬೇಕಿರುವ ಬಾಕಿ ವಿವರ
ಸಿಬ್ಬಂದಿ ವೇತನ 3.6 ಲಕ್ಷ
ಜಿಎಸ್‌ಟಿ 1.27 ಕೋಟಿ
ಪುಣೆ ಮಾರಾಟಗಾರರಿಗೆ ಬಾಕಿ 37.78 ಲಕ್ಷ
ವಿವಿಧ ಮಾರಾಟಗಾರರಿಗೆ ಬಾಕಿ 49.05 ಲಕ್ಷ
ವರದಿ: ಸ್ಪಂದನ್ ಕಣಿಯಾರ್