ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಹೊಸ ದಾಖಲೆನಿ ನಿರ್ಮಾಣವಾಗಿದೆ. ಕೆ.ಗೌತಮ್ ಅಬ್ಬರಕ್ಕೆ ಎರಡೆರಡು ದಾಖಲೆ ನಿರ್ಮಾಣವಾಗಿದೆ. ಕೇವಲ 39 ಎಸೆತಗಲ್ಲಿ ಶತಕ ಹಾಗೂ 8 ವಿಕೆಟ್ ಕಬಳಿಸೋ ಮೂಲಕ ಈ ಹಿಂದಿನ ಎಲ್ಲಾ ದಾಖಲೆ ಮುರಿದಿದ್ದಾರೆ.
ಬೆಂಗಳೂರು(ಆ.24): ಕೆ.ಗೌತಮ್ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಕಂಡು ಕೇಳರಿಯದ ಸಾಧನೆಗೈದಿದ್ದಾರೆ. ಶುಕ್ರವಾರ ಶಿವಮೊಗ್ಗ ಲಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ನ ಗೌತಮ್ 56 ಎಸೆತಗಳಲ್ಲಿ ಅಜೇಯ 134 ರನ್ ಸಿಡಿಸಿದ್ದಲ್ಲದೇ 4 ಓವರ್‌ಗಳಲ್ಲಿ 15 ರನ್‌ಗೆ 8 ವಿಕೆಟ್ ಕಬಳಿಸಿದರು. ಕೆಪಿಎಲ್ಗೆ ಅಧಿಕೃತ ಟಿ20 ಪಂದ್ಯ ಎನ್ನುವ ಮಾನ್ಯತೆ ಇಲ್ಲ. ಇಲ್ಲವಾಗಿದ್ದರೆ ಗೌತಮ್ ಸಾಧನೆ, ಟಿ20 ಇತಿಹಾಸದಲ್ಲೇ ಶ್ರೇಷ್ಠ ಸಾಧನೆ ಎಂದು ದಾಖಲಾಗುತಿತ್ತು.
ಇದನ್ನೂ ಓದಿ: KPL ಟೂರ್ನಿಯ ವೇಳಾಪಟ್ಟಿ ಇಲ್ಲಿದೆ
39 ಎಸೆತಗಳಲ್ಲಿ ಶತಕ ಬಾರಿಸಿದ ಗೌತಮ್, ಕೆಪಿಎಲ್ನಲ್ಲಿ ಅತಿವೇಗದ ಶತಕದ ದಾಖಲೆ ಬರೆದರು. 2016ರಲ್ಲಿ ಮಯಾಂಕ್ ಅಗರ್‌ವಾಲ್ 45 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಗೌತಮ್ ಮುರಿದರು. ಅಲ್ಲದೇ 134 ರನ್, ಕೆಪಿಎಲ್ನಲ್ಲಿ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತವೂ ಹೌದು. ವಿಶೇಷ ಎಂದರೆ ಶಿವಮೊಗ್ಗ ಲಯನ್ಸ್ 133 ರನ್‌ಗಳಿಗೆ ಆಲೌಟ್ ಆಯಿತು. 17 ಓವರಲ್ಲಿ 203 ರನ್ ಗಳಿಸಿದ್ದ ಬಳ್ಳಾರಿ 70 ರನ್‌ಗಳ ಗೆಲುವು ಸಾಧಿಸಿತು. ತಂಡಕ್ಕಿದು 4ನೇ ಗೆಲುವಾಗಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಇದನ್ನೂ ಓದಿ: ಪ್ರತಿ ಸಿಕ್ಸರ್ - ಬೌಂಡರಿಗೆ ತಲಾ 100, 50 ಸಸಿ ಕೊಡುಗೆ!
ಮಳೆಯಿಂದಾಗಿ ಪಂದ್ಯವನ್ನು ತಲಾ 17 ಓವರ್‌ಗೆ ಇಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಬಳ್ಳಾರಿ, ಆರಂಭಿಕ ಆಘಾತ ಅನುಭವಿಸಿತು. ನಾಯಕ ಸಿ.ಎಂ.ಗೌತಮ್ (13) ಬೇಗನೆ ನಿರ್ಗಮಿಸಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಗೌತಮ್, ಶಿವಮೊಗ್ಗ ಬೌಲರ್‌ಗಳನ್ನು ಚೆಂಡಾಡಿದರು. ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, ಬರೋಬ್ಬರಿ 13 ಸಿಕ್ಸರ್ಗಳಿದ್ದವು.
ಬಳಿಕ ಹೊಸ ಚೆಂಡಿನೊಂದಿಗೆ ಬೌಲ್ ಮಾಡಿದ ಗೌತಮ್, ಶಿವಮೊಗ್ಗ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡಿದರು. 8 ವಿಕೆಟ್ ಕಿತ್ತಿದ್ದಲ್ಲದೆ 2 ಕ್ಯಾಚ್ ಸಹ ಹಿಡಿದರು.
ಸ್ಕೋರ್: ಬಳ್ಳಾರಿ 17 ಓವರಲ್ಲಿ 203/3, ಶಿವಮೊಗ್ಗ 133/10