ಕಳಿಂಗ ಐಐಟಿಯಲ್ಲಿ ನಾಳೆಯಿಂದ ವಾಲಿಬಾಲ್ ವರ್ಲ್ಡ್‌ ಬೀಚ್ ಪ್ರೊ ಟೂರ್ನಿ!

Kannadaprabha News   | Kannada Prabha
Published : Mar 03, 2026, 11:46 AM IST
volleyball

ಸಾರಾಂಶ

ಕೆಐಐಟಿ ವಿಶ್ವವಿದ್ಯಾಲಯದಲ್ಲಿ ವಾಲಿಬಾಲ್ ವರ್ಲ್ಡ್ ಬೀಚ್ ಪ್ರೊ ಟೂರ್ನಿ ಮಾರ್ಚ್ 4ರಿಂದ 8 ರವರೆಗೆ ನಡೆಯಲಿದೆ. ಇದರೊಂದಿಗೆ ಟೂರ್ನಿಗೆ ಆತಿಥ್ಯ ವಹಿಸಿದ ಭಾರತದ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಕೆಐಐಟಿ ಪಾತ್ರವಾಗಲಿದೆ.

ಭುವನೇಶ್ವರ: ಕೆಐಐಟಿ ವಿಶ್ವವಿದ್ಯಾಲಯದಲ್ಲಿ ಪುರುಷ ಮತ್ತು ಮಹಿಳೆಯರ ಎಫ್‌ಐವಿಬಿ ವಾಲಿಬಾಲ್ ವರ್ಲ್ಡ್ ಬೀಚ್ ಪ್ರೊ ಟೂರ್ನಿ ಮಾರ್ಚ್ 4ರಿಂದ 8 ರವರೆಗೆ ನಡೆಯಲಿದ್ದು, ಇದರ ಆತಿಥ್ಯವನ್ನು ಇಲ್ಲಿನ ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಸ್ಟ್ರಿಯಲ್ ಟೆಕ್ನಾಲಜಿ(ಕೆಐಐಟಿ) ವಿಶ್ವವಿದ್ಯಾಲಯ ವಹಿಸಲಿದೆ.

ಇದರೊಂದಿಗೆ ಟೂರ್ನಿಗೆ ಆತಿಥ್ಯ ವಹಿಸಿದ ಭಾರತದ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಕೆಐಐಟಿ ಪಾತ್ರವಾಗಲಿದೆ. ಇಂತಹ ಪ್ರತಿಷ್ಠಿತ ಟೂರ್ನಿಯನ್ನು ಭಾರತದ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ. ಒಡಿಶಾದ ಭುವನೇಶ್ವರ ನಗರವು ಚೊಚ್ಚಲ ಬೀಚ್ ವಾಲಿಬಾಲ್‌ಗೆ ಈ ಮೂಲಕ ಸಾಕ್ಷಿಯಾಗಲಿದೆ. 52 ದೇಶಗಳ 82 ತಂಡಗಳು ಸ್ಪರ್ಧಿಸುತ್ತಿದ್ದು, ಒಲಿಂಪಿಕ್ ಚಿನ್ನದ ಪದಕ ವಿಜೇತರು ಸೇರಿ 306 ಆಟಗಾರರು ಭಾಗಿಯಾಗುತ್ತಿರುವುದು ವಿಶೇಷ.

ಎಲ್ಲಾ ರೀತಿಯ ಸಿದ್ಧತೆ:

ಐದು ದಿನಗಳ ಪಂದ್ಯಾವಳಿಯನ್ನು ಕೆಐಐಟಿಯ ಕ್ಯಾಂಪಸ್‌ನಲ್ಲಿರುವ ದ್ಯುತಿ ಚಂದ್ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಆಯೋಜಿಸಲಾಗುತ್ತಿದೆ. ಇದನ್ನು ಅಂತಾರಾಷ್ಟ್ರೀಯ ಮಟ್ಟದ ಬೀಚ್ ವಾಲಿಬಾಲ್ ಕ್ರೀಡಾಂಗಣವಾಗಿ ಪರಿವರ್ತಿಸಲಾಗಿದೆ. ಪಂದ್ಯಾವಳಿಯನ್ನು ಸುಗಮವಾಗಿ ನಡೆಸಲು ಸಾಕಷ್ಟು ವ್ಯವಸ್ಥೆಯನ್ನು ಮಾಡಲಾಗಿದೆ. ಕ್ರೀಡಾಪಟುಗಳ ಸುರಕ್ಷತೆ, ವಸತಿ ವ್ಯವಸ್ಥೆ, ತರಬೇತಿ ಸೇರಿದಂತೆ ಆತಿಥ್ಯಕ್ಕೆ ಸಂಬಂಧಿಸಿದ ಎಲ್ಲಾ ಉಪಕ್ರಮಗಳನ್ನು ಸಿದ್ಧಗೊಳಿಸಲಾಗಿದೆ. ಕೆಐಐಟಿ ಮತ್ತು ಕೆಐಎಸ್‌ಎಸ್ ಸಂಸ್ಥಾಪಕರಾದ ಡಾ.ಅಚ್ಯುತ ಸಮಂತ ಅವರು ಈ ವ್ಯವಸ್ಥೆಗಳ ಮೇಲ್ವಿಚಾರಣೆಯನ್ನು ಖುದ್ದಾಗಿ ನೋಡಿಕೊಳ್ಳುತ್ತಿದ್ದಾರೆ. ಟೂರ್ನಮೆಂಟ್‌ ಯಶಸ್ವಿಯಾಗಿ ನಡೆಯಲು ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ.

‘ನಾವು ಇಂತಹ ಕ್ರೀಡಾಕೂಟ ಆಯೋಜಿಸಿದ್ದಾಗಲೆಲ್ಲ ಪ್ರತಿಯೊಂದು ವ್ಯವಸ್ಥೆಯನ್ನು ಎಚ್ಚರಿಕೆ ಮತ್ತು ಜಾಗ್ರತೆಯಿಂದ ನೋಡಿಕೊಂಡಿದ್ದೇವೆ. ಇದು ನನ್ನ ವೈಯಕ್ತಿಕ ಜವಾಬ್ದಾರಿ. ಎಲ್ಲಾ ಕೆಲಸಗಳನ್ನು ನಮ್ಮ ತಂಡಗಳು ಶಿಸ್ತಿನಿಂದ ಮಾಡುತ್ತಿವೆ. ಒಡಿಶಾ ಮತ್ತು ದೇಶವೇ ಹೆಮ್ಮೆಪಡುವಂತಹ ಚಾಂಪಿಯನ್‌ಶಿಪ್ ಅನ್ನು ನಾವು ನಡೆಸುತ್ತೇವೆ ಎಂಬ ವಿಶ್ವಾಸ ನನಗಿದೆ" ಎಂದು ಡಾ. ಅಚ್ಯುತ ಸಮಂತ ಅವರು ಹೇಳಿದ್ದಾರೆ.

ಒಡಿಶಾದ ಪ್ರಾಮುಖ್ಯತೆ ತಿಳಿಸಲಿದೆ:

82 ಅಂತರರಾಷ್ಟ್ರೀಯ ತಂಡಗಳ 164 ಎಲೈಟ್‌ ಕ್ರೀಡಾಪಟುಗಳು ಈ ಟೂರ್ನಮೆಂಟ್‌ ನಲ್ಲಿ ಭಾಗವಹಿಸುತ್ತಿದ್ದಾರೆ. ಆಟಗಾರರಲ್ಲದೆ, ಅಂತಾರಾಷ್ಟ್ರೀಯ ರೆಫರಿಗಳು ಮತ್ತು ಹಿರಿಯ ಎಫ್‌ಐವಿಬಿ ಅಧಿಕಾರಿಗಳು ಆಗಮಿಸಲಿದ್ದಾರೆ. ಇವರೆಲ್ಲ ಟೂರ್ನಮೆಂಟ್‌ಗೆ ಜಾಗತಿಕ ಸ್ಥಾನಮಾನವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ. ವಾಲಿಬಾಲ್ ವರ್ಲ್ಡ್ (Volleyball World) ಟಿವಿ ಮೂಲಕ ಪಂದ್ಯಗಳನ್ನು ವಿಶ್ವಾದ್ಯಂತ ನೇರ ಪ್ರಸಾರದಲ್ಲಿ ವೀಕ್ಷಣೆ ಮಾಡಬಹುದು. ಈ ಕ್ರೀಡಾಕೂಟದ ಮೂಲಕ ಅಂತರರಾಷ್ಟ್ರೀಯ ಕ್ರೀಡಾ ನಕಾಶೆಯಲ್ಲಿ ಒಡಿಶಾದ ಪ್ರಾಮುಖ್ಯತೆ ತಿಳಿಯಲಿದೆ ಎಂದು ಭಾವಿಸಲಾಗಿದೆ.

ಹಲವು ಹಂತಗಳಲ್ಲಿ ಟೂರ್ನಿ:

ಟೂರ್ನಿ ಹಲವು ಹಂತಗಳಲ್ಲಿ ನಡೆಯಲಿದೆ. ಅರ್ಹತಾ ಪಂದ್ಯಾವಳಿಯೊಂದಿಗೆ ಪ್ರಾರಂಭವಾಗಿ, ನಂತರ ಪೂಲ್ ಆಟವನ್ನು ಒಳಗೊಂಡ ಮುಖ್ಯ ಡ್ರಾ ಇರುತ್ತದೆ. ಅಗ್ರ ತಂಡಗಳು 16ರ ಸುತ್ತು, ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ಗೆ ಪ್ರವೇಶೀಸಲಿವೆ. ಮಾರ್ಚ್ 8 ರಂದು ಕಂಚಿನ ಪದಕ ಪಂದ್ಯಗಳು, ಫೈನಲ್‌ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಶೀಘ್ರವೇ ಒಲಿಂಪಿಕ್ಸ್‌ನಲ್ಲಿ ಅವಕಾಶ: ಡಾ. ಸಮಂತ

ನಾವು ಕ್ರೀಡೆ ಮತ್ತು ಕ್ರೀಡಾಪಟುಗಳ ಪೋಷಣೆಗೆ ನಿರಂತರವಾಗಿ ಶ್ರಮಿಸುತ್ತಿದ್ದೇವೆ. ವಾಲಿಬಾಲ್ ಗ್ರಾಮೀಣ ಕ್ರೀಡೆ ಮತ್ತು ಒಲಿಂಪಿಕ್ ವಿಭಾಗ ಎರಡೂ ಆಗಿದೆ. ಕಳೆದ ಎಂಟು ವರ್ಷಗಳಿಂದ, ನಾವು ಅದರ ಅಭಿವೃದ್ಧಿಗೆ ಸದಾ ಒಂದಿಲ್ಲೊಂದು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಅಂತರರಾಷ್ಟ್ರೀಯ ಮಾನ್ಯತೆ ಜೊತೆಗೆ ತಳಮಟ್ಟದ ಭಾಗವಹಿಸುವಿಕೆಯನ್ನೂ ಪ್ರೋತ್ಸಾಹಿಸುತ್ತಿದ್ದೇವೆ. ಭಾರತೀಯ ಬೀಚ್ ವಾಲಿಬಾಲ್ ತಂಡಕ್ಕೆ ಶೀಘ್ರದಲ್ಲೇ ಒಲಿಂಪಿಕ್ಸ್‌ನಲ್ಲಿ ಅವಕಾಶ ಸಿಗಲಿದೆ. ಇದು ವಿಶ್ವದಲ್ಲಿ ನಮ್ಮ ಒಡಿಶಾದ ಪ್ರತಿಷ್ಠೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಮತ್ತು ಒಡಿಶಾದಲ್ಲಿ ಪ್ರವಾಸೋದ್ಯಮದ ಗಮನಾರ್ಹ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಕೆಐಐಟಿ, ಕೆಐಎಂಎಸ್, ಕೆಐಎಸ್ಎಸ್ ಸಂಸ್ಥಾಪಕರು ಹಾಗೂ ಮಾಜಿ ಸಂಸದರು ಡಾ.ಅಚ್ಯುತ ಸಮಂತ ಅವರು ಹೇಳಿದ್ದಾರೆ.

ಕೆಐಐಟಿ, ಕೆಐಎಸ್‌ಎಸ್‌ ಭೇಟಿ ವೇಳೆ ಘೋಷಣೆ

ಕಳೆದ ಡಿಸೆಂಬರ್‌ನಲ್ಲಿ ವಾಲಿಬಾಲ್ ಗ್ರ್ಯಾಂಡ್ ಪ್ರಿಕ್ಸ್‌ಗಾಗಿ ಕೆಐಐಟಿ ಮತ್ತು ಕೆಐಎಸ್‌ಎಸ್‌ಗೆ ಅಂತಾರಾಷ್ಟ್ರೀಯ ವಾಲಿಬಾಲ್‌ ಫೆಡರೇಷನ್‌(ಎಫ್‌ಐವಿಬಿ) ಅಧ್ಯಕ್ಷರಾದ ಫ್ಯಾಬಿಯೊ ಅಜೆವೆಡೊ ಅವರು ಭೇಟಿ ನೀಡಿದ್ದರು. ಈ ವೇಳೆ ಅವರು, ಬೀಚ್ ವಾಲಿಬಾಲ್ ನಡೆಸುವ ಬಗ್ಗೆ ಘೋಷಣೆ ಮಾಡಿದ್ದರು. ಕೆಐಐಟಿಯಲ್ಲಿ ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯ ಮತ್ತು ಒಡಿಶಾದ ಅನುಕೂಲಕರ ಕ್ರೀಡಾ ವಾತಾವರಣದಿಂದ ಅಜೆವೆಡೊ ಅವರು ಪ್ರಭಾವಿತರಾಗಿದ್ದರು. ಕೆಐಐಟಿ ಮತ್ತು ಕೆಐಎಸ್‌ಎಸ್ ಸಹಯೋಗದೊಂದಿಗೆ ಎಫ್‌ಐವಿಬಿ ಬೀಚ್ ವಾಲಿಬಾಲ್‌ಅನ್ನು 2027 ಹಾಗೂ 2028ರಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೋಹಿತ್ ಶರ್ಮಾ - ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಬಿಸಿಸಿಐ! ಮತ್ತೆ ಮೈದಾನಕ್ಕಿಳಿಯಲು ರೋ-ಕೋ ಜೋಡಿ ರೆಡಿ
2026ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ! ಮಹತ್ವದ ಅಪ್‌ಡೇಟ್ಸ್ ಹಂಚಿಕೊಂಡ ಬೆಂಗಳೂರು ಫ್ರಾಂಚೈಸಿ