
ಇಸ್ಲಾಮಾಬಾದ್ (ಫೆ.28): ಟಿ20 ವಿಶ್ವಕಪ್‌ನ ಸೆಮಿಫೈನಲ್ ಪ್ರವೇಶಿಸಲು ವಿಫಲವಾದ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಬಿಸಿ ಮುಟ್ಟಿಸಿದೆ. ತಂಡದ ಪ್ರತಿಯೊಬ್ಬ ಆಟಗಾರನಿಗೂ ತಲಾ 5 ಮಿಲಿಯನ್ ಪಿಕೆಆರ್ (ಸುಮಾರು 16.28 ಲಕ್ಷ ಭಾರತೀಯ ರೂಪಾಯಿ) ದಂಡ ವಿಧಿಸಲಾಗಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ವರದಿಯ ಪ್ರಕಾರ, ಗ್ರೂಪ್ ಹಂತದಲ್ಲಿ ಭಾರತದ ವಿರುದ್ಧ ಅನುಭವಿಸಿದ ಸೋಲಿನ ಬೆನ್ನಲ್ಲೇ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿತ್ತು. ಸೂಪರ್ 8 ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ಪ್ರಯಾಸದ ಜಯ ಸಾಧಿಸಿದರೂ ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಐಸಿಸಿ ಟೂರ್ನಿಗಳಲ್ಲಿ ತಂಡವು ಪದೇ ಪದೇ ವೈಫಲ್ಯ ಅನುಭವಿಸುತ್ತಿರುವುದಕ್ಕೆ ಮಂಡಳಿಯ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ದೇಶದ ಕ್ರಿಕೆಟ್ ಶಕ್ತಿಯನ್ನು ಜಗತ್ತಿಗೆ ತೋರಿಸಲು ಎರಡು ವರ್ಷಕ್ಕೊಮ್ಮೆ ಅವಕಾಶ ಸಿಗುತ್ತದೆ, ಅದನ್ನು ನೀವು ವ್ಯರ್ಥ ಮಾಡಿದ್ದೀರಿ. ಟಿ20 ಈಗ ಒಂದು ಪದ್ಧತಿಯ ಆಟವಾಗಿದೆ, ಆದರೆ ನಮ್ಮ ಆಟಗಾರರು ಇತರ ತಂಡಗಳ ವೇಗಕ್ಕೆ ಹೊಂದಿಕೊಳ್ಳುತ್ತಿಲ್ಲ" ಎಂದು ಜಾವೇದ್ ಮಿಯಂದಾದ್ ಕಿಡಿಕಾರಿದ್ದಾರೆ.
"ಕೆಲವು ಆಟಗಾರರಿಗೆ ಅತಿಯಾದ ಅವಕಾಶಗಳನ್ನು ನೀಡಲಾಗಿದೆ, ಆದರೂ ಅವರು ದೊಡ್ಡ ಟೂರ್ನಿಗಳಲ್ಲಿ ಫೇಲ್ ಆಗುತ್ತಿದ್ದಾರೆ. ಈಗಲಾದರೂ ನಮ್ಮ ತಪ್ಪುಗಳಿಂದ ಕಲಿಯುವ ಸಮಯ ಬಂದಿದೆ" ಎಂದು ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಯೂಸುಫ್ ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ನಾಯಕ ಮೊಯಿನ್ ಖಾನ್ "ಉನ್ನತ ಶ್ರೇಯಾಂಕದ ತಂಡಗಳನ್ನು ಸೋಲಿಸುವ ಸಾಮರ್ಥ್ಯವಿಲ್ಲದಿದ್ದರೆ ನಾವು ಯಾವುದೇ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ನಮ್ಮ ಪ್ರಮುಖ ಆಟಗಾರರು ವಿಶ್ವಕಪ್‌ನಲ್ಲಿ ಮಿಂಚಲೇ ಇಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಾಜಿ ನಾಯಕ ಬಾಬರ್ ಅಜಮ್, ಪ್ರಸ್ತುತ ನಾಯಕ ಸಲ್ಮಾನ್ ಅಲಿ ಆಗಾ, ಶಾದಾಬ್ ಖಾನ್, ಶಾಹೀನ್ ಅಫ್ರಿದಿ ಮತ್ತು ಮೊಹಮ್ಮದ್ ನವಾಜ್ ಅವರಂತಹ ಹಿರಿಯ ಆಟಗಾರರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಸ್ವದೇಶಕ್ಕೆ ಮರಳಿದ ನಂತರ ನಾಯಕ ಸಲ್ಮಾನ್ ಅಲಿ ಆಗಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಮತ್ತೊಂದೆಡೆ, ಮಾಜಿ ಕೋಚ್ ಸಕ್ಲೈನ್ ಮುಷ್ತಾಕ್ ಅವರು ತಮ್ಮ ಅಳಿಯ ಶಾದಾಬ್ ಖಾನ್ ಅವರ ಕಳಪೆ ಪ್ರದರ್ಶನವನ್ನು ಸಮರ್ಥಿಸಿಕೊಳ್ಳಲು ಹೋಗಿ, ಮುಖ್ಯ ಕೋಚ್ ಮೈಕ್ ಹೆಸನ್ ಮೇಲೆ ಗೂಬೆ ಕೂರಿಸಿದ್ದಕ್ಕಾಗಿ ಭಾರಿ ಟೀಕೆಗೆ ಒಳಗಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.