
ಮುಂಬೈ/ಕೋಲ್ಕತಾ: 10ನೇ ಆವೃತ್ತಿಯ ಟಿ20 ವಿಶ್ವಕಪ್‌ನ ಗುಂಪು ಹಂತ ಹಾಗೂ ಸೂಪರ್-8 ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಸೆಮಿಫೈನಲ್ ಹಣಾಹಣಿಗೆ ಅಖಾಡ ಸಿದ್ಧವಾಗಿದೆ. ಬುಧವಾರ ಹಾಗೂ ಗುರುವಾರ 2 ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.
20 ತಂಡಗಳಿದ್ದ ಟೂರ್ನಿಯಲ್ಲಿ 16 ತಂಡಗಳು ಹೊರಬಿದ್ದಿವೆ. ಮಾಜಿ ಚಾಂಪಿಯನ್‌ಗಳಾದ ಭಾರತ, ಇಂಗ್ಲೆಂಡ್, ಮಾಜಿ ರನ್ನರ್-ಅಪ್‌ಗಳಾದ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡಗಳು ಸೆಮೀಸ್‌ನಲ್ಲಿ ಆಡಲಿವೆ. ಮಾ.4ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದ.ಆಫ್ರಿಕಾ ಹಾಗೂ ಕಿವೀಸ್ ಮುಖಾಮುಖಿಯಾಗಲಿವೆ. ಮಾ.5ರಂದು ಮುಂಬೈನ ವಾಂಖೇಡೆಯಲ್ಲಿ ಭಾರತಕ್ಕೆ ಇಂಗ್ಲೆಂಡ್ ಸವಾಲು ಎದುರಾಗಲಿದೆ. 2 ದಿನಗಳ ಬಿಡುವಿನ ಬಳಿಕ ಮಾ.8ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
2 ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ನಡೆಯುವ ನಗರಗಳಲ್ಲಿ ಸದ್ಯಕ್ಕೆ ಯಾವುದೇ ಮಳೆ ಮುನ್ಸೂಚನೆ ಇಲ್ಲ. ಒಂದು ವೇಳೆ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೂ ಮೀಸಲು ದಿನದಂದು ಪಂದ್ಯ ಮುಂದುವರಿಯಲಿವೆ. ನಿಗದಿತ ದಿನದಂದು ಮಳೆಯಿಂದ ಪಂದ್ಯ ಪೂರ್ಣಗೊಳ್ಳದಿದ್ದರೆ, ಮರುದಿನ ಅಲ್ಲಿಂದಲೇ ಪಂದ್ಯ ಆರಂಭಿಸಲಾಗುತ್ತದೆ.
ಈ ಬಾರಿ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಮಾತ್ರ ಅಜೇಯವಾಗಿದೆ. ತಂಡ ಗುಂಪು ಹಂತದಲ್ಲಿ 4 ಹಾಗೂ ಸೂಪರ್-8 ಹಂತದಲ್ಲಿ ಎಲ್ಲಾ 3 ಪಂದ್ಯಗಳಲ್ಲೂ ಗೆದ್ದಿದೆ. ಭಾರತ ಗುಂಪು ಹಂತದಲ್ಲಿ 4 ಪಂದ್ಯದಲ್ಲಿ ಗೆದ್ದಿದ್ದರೂ, ಸೂಪರ್-8 ಹಂತದಲ್ಲಿ ದ.ಆಫ್ರಿಕಾ ವಿರುದ್ಧ ಸೋತಿತ್ತು. ಇನ್ನು, ಇಂಗ್ಲೆಂಡ್, ಕಿವೀಸ್ ತಂಡಗಳು ಗುಂಪು ಹಂತದಲ್ಲೇ ತಲಾ ಒಂದೊಂದು ಪಂದ್ಯದಲ್ಲಿ ಸೋಲನುಭವಿಸಿದ್ದವು.
ಐಸಿಸಿ ಟೂರ್ನಿಗಳಲ್ಲಿ ಒಟ್ಟಾರೆ ಭಾರತಕ್ಕೆ ಇದು 20ನೇ ಸೆಮಿಫೈನಲ್. ಏಕದಿನ ವಿಶ್ವಕಪ್‌ನಲ್ಲಿ 8, ಚಾಂಪಿಯನ್ಸ್ ಟ್ರೋಫಿಯಲ್ಲಿ 8 ಸೆಮಿಫೈನಲ್ ಆಡಿರುವ ಭಾರತ, ಟಿ20 ವಿಶ್ವಕಪ್‌ನಲ್ಲಿ 6ನೇ ಸೆಮೀಸ್‌ಗೆ ಸಿದ್ಧವಾಗಿದೆ. ಇನ್ನು, ಐಸಿಸಿ ಟೂರ್ನಿಗಳಲ್ಲಿ ಗರಿಷ್ಠ ಸೆಮಿಫೈನಲ್ ಆಡಿದ ಅಥವಾ ಆಡಲಿರುವ ತಂಡಗಳ ಪೈಕಿ ಆಸ್ಟ್ರೇಲಿಯಾ(18), ನ್ಯೂಜಿಲೆಂಡ್(18), ಇಂಗ್ಲೆಂಡ್(16), ಪಾಕಿಸ್ತಾನ(16) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.
06ನೇ ಬಾರಿ: ಟಿ20 ವಿಶ್ವಕಪ್‌ನಲ್ಲಿ ಭಾರತ, ಇಂಗ್ಲೆಂಡ್‌ಗೆ ಇದು ತಲಾ 6ನೇ ಸೆಮಿಫೈನಲ್. ಕಿವೀಸ್‌ಗೆ 5ನೇ, ದ.ಆಫ್ರಿಕಾಗೆ 4ನೇ ಸೆಮಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.