ಜ.13ರಿಂದ ಆರಂಭವಾಗುವ ಖೋ ಖೋ ವಿಶ್ವಕಪ್‌ಗೆ ಭಾರತ ತಂಡಗಳನ್ನು ಪ್ರಕಟಿಸಲಾಗಿದೆ. ಕರ್ನಾಟಕದ ಎಂ.ಕೆ. ಗೌತಮ್ ಮತ್ತು ಚೈತ್ರಾ ಆಯ್ಕೆಯಾಗಿದ್ದಾರೆ. ಪುರುಷರ ತಂಡ ನೇಪಾಳ ವಿರುದ್ಧ, ಮಹಿಳಾ ತಂಡ ದಕ್ಷಿಣ ಕೊರಿಯಾ ವಿರುದ್ಧ ಮೊದಲ ಪಂದ್ಯ ಆಡಲಿದೆ.
ನವದೆಹಲಿ: ಜ.13ರಿಂದ ಆರಂಭಗೊಳ್ಳಲಿರುವ ಚೊಚ್ಚಲ ಆವೃತ್ತಿಯ ಖೋ ಖೋ ವಿಶ್ವಕಪ್‌ಗೆ ಗುರುವಾರ ಭಾರತ ತಂಡಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಕರ್ನಾಟಕದ ಇಬ್ಬರು ಪ್ರತಿಭಾವಂತ ಖೋ ಖೋ ಪಟುಗಳಿಗೂ ಸ್ಥಾನ ಲಭಿಸಿದ್ದು, ದೇಶಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಡಲು ಸಜ್ಜಾಗಿದ್ದಾರೆ.
ಪ್ರತೀಕ್ ವಾಯ್ಕರ್ ಮುನ್ನಡೆಸಲಿರುವ ಪುರುಷರ ತಂಡದಲ್ಲಿ ಬೆಂಗಳೂರು ಎಂ.ಕೆ.ಗೌತಮ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪ್ರಿಯಾಂಕ ನಾಯಕಿಯಾಗಿರುವ ಮಹಿಳಾ ತಂಡಕ್ಕೆ ಮೈಸೂರಿನ ಚೈತ್ರಾ ಕೂಡಾ ಆಯ್ಕೆಯಾಗಿದ್ದಾರೆ. ಪುರುಷರ ತಂಡ ಜ.13ರಂದು ನೇಪಾಳ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದ್ದಾರೆ. ಮಹಿಳಾ ತಂಡ ಜ.14ರಂದು ದಕ್ಷಿಣ ಕೊರಿಯಾ ವಿರುದ್ಧ ಮೊದಲ ಪಂದ್ಯವಾಡಲಿದೆ. ಪುರುಷರ ವಿಭಾಗದಲ್ಲಿ 20, ಮಹಿಳಾ ವಿಭಾಗದಲ್ಲಿ 19 ತಂಡಗಳು ಪಾಲ್ಗೊಳ್ಳಲಿವೆ. ಜ.19ರಂದು ಫೈನಲ್ ನಡೆಯಲಿದೆ.
ಚಹಲ್ ಹಾದಿ ಹಿಡಿದ್ರಾ ಕನ್ನಡಿಗ; ಟೀಂ ಇಂಡಿಯಾ ಕ್ರಿಕೆಟಿಗನ ದಾಂಪತ್ಯ ಜೀವನದಲ್ಲಿ ಬಿರುಗಾಳಿ?
‘ಭಾರತ್ ಕಿ ಟೀಮ್: ಈ ಬಾರಿ ಭಾರತದ ಖೋ ಖೋ ಪಟುಗಳು ಧರಿಸುವ ಜೆರ್ಸಿಯಲ್ಲಿ ‘ಭಾರತ್’ ಲೋಗೋ ಹಾಗೂ ಭಾರತ್ ಕಿ ಟೀಮ್ ಎಂಬ ಥೀಮ್ ಇರಲಿದೆ ಎಂದು ಭಾರತ ಖೋ ಖೋ ಸಂಸ್ಥೆ ಅಧ್ಯಕ್ಷ ಸುಧಾನ್ಶು ಮಿತ್ತಲ್ ಹೇಳಿದ್ದಾರೆ.
ಬೆಂಗಳೂರಿನ ಗೌತಮ್‌ಗೆ ವಿಶ್ವಕಪ್ ಗೆಲ್ಲುವುದೇ ಗುರಿ
ಈಗಾಗಲೇ ಕರ್ನಾಟಕ, ಭಾರತ ಹಾಗೂ ಅಲ್ಟಿಮೇಟ್ ಲೀಗ್‌ನಲ್ಲಿ ವಿವಿಧ ಫ್ರಾಂಚೈಸಿಗಳ ಪರ ಮಿಂಚಿರುವ ಬೆಂಗಳೂರಿನ ಗೌತಮ್ ಈಗ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವ ವಿಶ್ವಾಸದಲ್ಲಿದ್ದಾರೆ. ‘ಖೋ ಖೋ ವಿಶ್ವಕಪ್ ಹಲವು ವರ್ಷಗಳ ಕನಸು. ಈ ಬಾರಿ ನಮ್ಮ ಕನಸು ಈಡೇರಿದೆ. ಇನ್ನು ದೇಶಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವ ಗುರಿಯಿದೆ. ನೇಪಾಳ, ಇಂಗ್ಲೆಂಡ್, ಇರಾನ್, ಬಾಂಗ್ಲಾ ತಂಡಗಳು ಬಲಿಷ್ಠವಾಗಿದ್ದರೂ, ನಮಗೆ ಟ್ರೋಫಿ ಗೆಲ್ಲುವ ಭರವಸೆಯಿದೆ’ ಎಂದು ಗೌತಮ್ ‘ಕನ್ನಡಪ್ರಭ’ ಜೊತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಾಮರಾಜಪೇಟೆಯ ಅಟೋ ಚಾಲಕ ಕಪನಿಗೌಡ-ರೇಖಾವತಿ ದಂಪತಿ ಪುತ್ರ ಗೌತಮ್, ಈಗಾಗಲೇ 2 ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
'ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ'; ಹಿಂದಿ ಹೇರಲು ಹೊರಟವರಿಗೆ ಅಶ್ವಿನ್ ಚಾಟಿ ಏಟು
ಭಾರತಕ್ಕೆ ಆಯ್ಕೆಯಾದ ಚೈತ್ರಾಗೆ ಡಬಲ್ ಖುಷಿ
ಮೈಸೂರಿನ ಟಿ.ನರಸೀಪುರದ ಕುರುಬೂರು ಎಂಬಲ್ಲಿನ 22 ವರ್ಷದ ಚೈತ್ರಾ ಇದೇ ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೊದಲ ಅವಕಾಶದಲ್ಲೇ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡ ಚೈತ್ರಾಗೆ ಈಗ ಡಬಲ್ ಖುಷಿ. ‘ಭಾರತಕ್ಕಾಗಿ ಆಡುವ ಅವಕಾಶ ಹಲವು ಬಾರಿ ಕೈತಪ್ಪಿದೆ. ಆದರೆ ಪ್ರಯತ್ನ ಬಿಟ್ಟಿರಲಿಲ್ಲ. ಈಗ ವಿಶ್ವಕಪ್‌ಗೇ ಆಯ್ಕೆಯಾಗಿದ್ದೇನೆ. ಹಲವು ವರ್ಷಗಳ ಶ್ರಮ ಸಾರ್ಥಕ’ ಎಂದು ಕನ್ನಡಪ್ರಭ ಜೊತೆ ಚೈತ್ರಾ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಗದ್ದೆ ಕೆಲಸ ಮಾಡುವ ಬಸವಣ್ಣ-ನಾಗರತ್ನ ದಂಪತಿಯ ಪುತ್ರಿ ಚೈತ್ರಾ 2011ರಿಂದಲೂ ಖೋ ಖೋ ಆಡುತ್ತಿದ್ದು, ಸದ್ಯ ಪಾಂಡವಪುರದಲ್ಲಿ ಬಿ.ಪೆಡ್ ವ್ಯಾಸಂಗ ಮಾಡುತ್ತಿದ್ದಾರೆ.