ಚಹಲ್ ಹಾದಿ ಹಿಡಿದ್ರಾ ಕನ್ನಡಿಗ; ಟೀಂ ಇಂಡಿಯಾ ಕ್ರಿಕೆಟಿಗನ ದಾಂಪತ್ಯ ಜೀವನದಲ್ಲಿ ಬಿರುಗಾಳಿ?

Published : Jan 10, 2025, 12:13 PM ISTUpdated : Jan 10, 2025, 12:24 PM IST
ಚಹಲ್ ಹಾದಿ ಹಿಡಿದ್ರಾ ಕನ್ನಡಿಗ; ಟೀಂ ಇಂಡಿಯಾ ಕ್ರಿಕೆಟಿಗನ ದಾಂಪತ್ಯ ಜೀವನದಲ್ಲಿ ಬಿರುಗಾಳಿ?

ಸಾರಾಂಶ

ಕ್ರಿಕೆಟಿಗ ಮನೀಶ್ ಪಾಂಡೆ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತ್ನಿ ಆಶ್ರಿತಾ ಶೆಟ್ಟಿ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಚಹಲ್ ದಂಪತಿಗಳಂತೆ ವಿಚ್ಛೇದನದ ಹಾದಿ ಹಿಡಿಯುವ ಸುದ್ದಿ ಹರಿದಾಡುತ್ತಿದೆ. ಕಳಪೆ ಫಾರ್ಮ್‌ನಿಂದಾಗಿ ಭಾರತ ಮತ್ತು ಕರ್ನಾಟಕ ತಂಡಗಳಿಂದಲೂ ಹೊರಬಿದ್ದಿರುವ ಪಾಂಡೆ, ಮುಂದಿನ ಐಪಿಎಲ್‌ನಲ್ಲಿ ಕೆಕೆಆರ್ ಪರ ಆಡಲಿದ್ದಾರೆ.

ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಂತೆ ತೋರುತ್ತಿದ್ದು, ಇತ್ತೀಚಿಗಿನ ವರ್ಷಗಳಲ್ಲಿ ಹಲವು ಕ್ರಿಕೆಟಿಗರು ವಿಚ್ಛೇದನಾ ಪಡೆದುಕೊಂಡಿದ್ದಾರೆ. ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ಹೀಗೆ ಈಗಾಗಲೇ ಹಲವು ಕ್ರಿಕೆಟಿಗರು ಡಿವೋರ್ಸ್ ಪಡೆದುಕೊಂಡಿದ್ದಾರೆ. ಇನ್ನು ಇದಕ್ಕೆ ಹೊಸ ಸೇರ್ಪಡೆಯೆನ್ನುವಂತೆ ಟೀಂ ಇಂಡಿಯಾ ಸ್ಟಾರ್ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಕೂಡಾ ಸದ್ಯದಲ್ಲೇ ಡಿವೋರ್ಸ್ ಪಡೆದುಕೊಳ್ಳಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇದೀಗ ಕರ್ನಾಟಕ ಮೂಲದ ಟೀಂ ಇಂಡಿಯಾ ಕ್ರಿಕೆಟರ್ ಮನೀಶ್ ಪಾಂಡ್ಯ ಅವರ ದಾಂಪತ್ಯ ಜೀವನದಲ್ಲೂ ಕೂಡಾ ಬಿರುಕು ಬಿಟ್ಟಿದ್ದು, ಯುಜುವೇಂದ್ರ ಚಹಲ್ ಅವರ ಹಾದಿಯನ್ನೇ ಹಿಡಿಯಲು ಮುಂದಾಗಿದ್ದಾರಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

ಹೌದು, ಕರ್ನಾಟಕ ಮೂಲದ ಟೀಂ ಇಂಡಿಯಾ ಕ್ರಿಕೆಟಿಗ ಮನೀಶ್ ಪಾಂಡೆ ಹಾಗೂ ಆಶ್ರಿತಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಇದು ಈ ಇಬ್ಬರು ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ ಎನ್ನುವ ಗುಸು ಗುಸು ಸುದ್ದಿಗೆ ಮತ್ತೆ ಬಲ ಬರುವಂತೆ ಆಗಿದೆ. ಯಾಕೆಂದರೆ ಮನೀಶ್ ಪಾಂಡೆ ಹಾಗೂ ಆಶ್ರಿತಾ ಶೆಟ್ಟಿ ಈ ಹಿಂದೆ ಹಲವು ಬಾರಿ ಸಾಕಷ್ಟು ಖುಷಿ ಖುಷಿಯಿಂದ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಈ ಜೋಡಿ ಈಗ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿಕೊಂಡಿರುವುದು ಅವರ ಅಭಿಮಾನಿಗಳನ್ನು ಅಚ್ಚರಿಗೀಡಾಗುವಂತೆ ಮಾಡಿದೆ.

ಚಹಲ್ ವಿಚ್ಛೇದನ ವದಂತಿಗಳ ನಡುವೆ ಧನಶ್ರೀ ವರ್ಮಾ ಕಣ್ಣೀರು ಹಾಕುವ ವಿಡಿಯೋ ವೈರಲ್!

ಮನೀಶ್ ಪಾಂಡೆ, ಮಾಡೆಲ್ ಕಂ ನಟಿ ಆಶ್ರಿತಾ ಶೆಟ್ಟಿ ಅವರನ್ನು ಡಿಸೆಂಬರ್ 02, 2019ರಲ್ಲಿ ಮುಂಬೈನಲ್ಲಿ ಮದುವೆಯಾಗಿದ್ದರು. ವಿವಾಹವಾದ ಆರಂಭಿಕ ವರ್ಷಗಳಲ್ಲಿ ಮನೀಶ್ ಪಾಂಡೆ ಹಾಗೂ ಆಶ್ರಿತಾ ಶೆಟ್ಟಿ ಜತೆಜತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ಈ ಜೋಡಿ ಒಟ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

ಕಳೆದ ಜೂನ್ ತಿಂಗಳಿನಲ್ಲಿಯೇ ಆಶ್ರಿತಾ ಶೆಟ್ಟಿ, ಸೋಷಿಯಲ್ ಮೀಡಿಯಾದಲ್ಲಿ ಮನೀಶ್ ಪಾಂಡೆ ಜತೆಗಿರುವ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಅದೇ ರೀತಿ ಮನೀಶ್ ಪಾಂಡೆ ಕೂಡಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆಶ್ರಿತಾ ಶೆಟ್ಟಿ ಜತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ದಾಗಿ ವರದಿಯಾಗಿದೆ. ಈ ಎಲ್ಲಾ ಬೆಳವಣಿಗೆಗಳು, ಈ ತಾರಾ ಜೋಡಿ ವಿಚ್ಛೇದನಾ ಪಡೆದುಕೊಳ್ಳಲು ಮುಂದಾಗಿವೆಯೇ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ಆದರೆ ಈ ಬಗ್ಗೆ ಮನೀಶ್ ಪಾಂಡೆಯಾಗಲಿ ಅಥವಾ ಅಶ್ರಿತಾ ಶೆಟ್ಟಿಯಾಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ತಿಳಿಸಿಲ್ಲ.

ಇನ್ನು ಮನೀಶ್ ಪಾಂಡೆ 2021ರಲ್ಲಿ ಕೊನೆಯ ಬಾರಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ಶ್ರೀಲಂಕಾ ವಿರುದ್ದ ಕೊನೆಯ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ ಕಳಪೆ ಫಾರ್ಮ್ ಹಾಗೂ ಟೀಂ ಇಂಡಿಯಾ ಕೂಡಿಕೊಳ್ಳಲು ಹಲವು ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದರಿಂದ ಮನೀಶ್ ಪಾಂಡೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೇ ಇದೀಗ 35 ವರ್ಷದ ಕ್ರಿಕೆಟಿಗ ಕರ್ನಾಟಕ ಕ್ರಿಕೆಟ್ ತಂಡದಿಂದಲೂ ಹೊರಬಿದ್ದಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಟೂರ್ನಿಗೆ ಮನೀಶ್ ಪಾಂಡೆ ಅವರನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಆಯ್ಕೆ ಸಮಿತಿ ಕೈಬಿಟ್ಟಿದೆ. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶದಿಂದ ಮನೀಶ್ ಪಾಂಡೆ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ. ವಿಜಯ್ ಹಜಾರೆ ಟೂರ್ನಿಗೂ ಮುನ್ನ ನಡೆದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮನೀಶ್ ಪಾಂಡೆ ಕರ್ನಾಟಕ ಪರ ನೀರಸ ಪ್ರದರ್ಶನ ತೋರಿದ್ದರು. ಆದರೆ ಮನೀಶ್ ಪಾಂಡೆ, ಎರಡನೇ ಸುತ್ತಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

ಇನ್ನುಳಿದಂತೆ ಮನೀಶ್ ಪಾಂಡೆ ಮುಂಬರುವ 2025ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಹಿಂದೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಕೆಕೆಆರ್ ಫ್ರಾಂಚೈಸಿಯು 75 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಅಂದಹಾಗೆ 2014ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ಎದುರು 50 ಎಸೆತಗಳಲ್ಲಿ ಸ್ಪೋಟಕ 94 ರನ್ ಸಿಡಿಸುವ ಮೂಲಕ ಕೆಕೆಆರ್ ತಂಡವು ಚಾಂಪಿಯನ್ ಆಗುವಲ್ಲಿ ಮನೀಶ್ ಪಾಂಡೆ ಪ್ರಮುಖ ಪಾತ್ರ ವಹಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌