ಖಾಸಗಿ ಕಾಲೇಜಿನ ಘಟಿಕೋತ್ಸವದಲ್ಲಿ ಮಾತನಾಡಿದ ರವಿಚಂದ್ರನ್ ಅಶ್ವಿನ್, ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ, ಕೇವಲ ಆಡಳಿತ ಭಾಷೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆ ಹಿಂದಿ ದಿವಸದಂದು ವೈರಲ್ ಆಗಿದ್ದು, ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಿದೆ.
ಚೆನ್ನೈ: ಇಂದು ಭಾರತದ ಹಲವು ಭಾಗಗಳಲ್ಲಿ ರಾಷ್ಟ್ರೀಯ ಹಿಂದಿ ದಿವಸವನ್ನು ಆಚರಣೆ ಮಾಡಲಾಗುತ್ತಿದೆ. ಈಗಲೂ ಹಲವು ಮಂದಿಗೆ ಹಿಂದಿ ನಮ್ಮ ಭಾರತದ ರಾಷ್ಟ್ರೀಯ ಭಾಷೆ ಎನ್ನುವ ಭ್ರಮೆಯಿದೆ. ಈ ಭ್ರಮೆಯನ್ನು ತೊಡೆದುಹಾಕುವ ಕೆಲಸ ಹಲವು ವರ್ಷಗಳಿಂದ ಹಲವು ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವು ಪ್ರಾದೇಶಿಕ ಮನಸ್ಸುಗಳು ಹಲವು ವರ್ಷಗಳಿಂದ ಮಾಡುತ್ತಲೇ ಬಂದಿವೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಕೂಡಾ ಈ ಬಗ್ಗೆ ಸ್ಪಷ್ಟವಾದ ಧ್ವನಿ ಎತ್ತಿದ್ದು, ನೆನಪಿಡಿ ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಅಲ್ಲ ಎನ್ನುವ ಖಡಕ್ ಸಂದೇಶ ರವಾನಿಸಿದ್ದಾರೆ.
ಸ್ಟಾರ್ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಖಾಸಗಿ ಕಾಲೇಜೊಂದರ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆಯಲ್ಲಿ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಅಶ್ವಿನ್ ಅವರು ಆಡಿದ ಈ ಮಾತುಗಳು ಹಿಂದಿ ದಿವಸ ಆಚರಿಸುವ ವೇಳೆಯಲ್ಲಿ ಸಾಕಷ್ಟು ವೈರಲ್ ಆಗಲಾರಂಭಿಸಿದೆ. ಭಾರತದ ಭಾಷೆಗಳ ಕುರಿತಂತೆ ಮಾತನಾಡುವ ವೇಳೆಯಲ್ಲಿ ಅಶ್ವಿನ್, ಇಂಗ್ಲೀಷ್ ಎಷ್ಟು ಜನರಿಗೆ ಗೊತ್ತಾಗುತ್ತೆ ಎಂದು ವಿದ್ಯಾರ್ಥಿಗಳನ್ನು ಕೇಳುತ್ತಾರೆ. ಆಗ ಕೆಲವು ವಿದ್ಯಾರ್ಥಿಗಳು ಕೈ ಎತ್ತುತ್ತಾರೆ. ಇದಾದ ಬಳಿಕ ಇಲ್ಲಿ ತಮಿಳು ಎಷ್ಟು ಜನರಿಗೆ ಬರುತ್ತೆ ಎಂದಾಗ ಹಲವು ವಿದ್ಯಾರ್ಥಿಗಳು ಕೈ ಎತ್ತುತ್ತಾರೆ. ಇನ್ನು ಹಿಂದಿ ಎಷ್ಟು ಮಂದಿಗೆ ಬರುತ್ತೆ ಎಂದಾಗ ಒಬ್ಬರೋ ಇಬ್ಬರೋ ಕೈ ಎತ್ತುತ್ತಾರೆ. ಆಗ ಅಶ್ವಿನ್ ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ, ಅದು ಕೇವಲ ಆಡಳಿತ ಭಾಷೆಯಷ್ಟೇ ಎಂದು ಹೇಳುತ್ತಾರೆ. ಈ ವಿಡಿಯೋವೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಮುಂದಿದೆ 6 ಬೆಟ್ಟದಷ್ಟು ಸವಾಲು!
'' Hindi is not a National Language, It's a official Language.''
- Ravichandran Ashwin pic.twitter.com/ixIiVErTCA
ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶ ರಾಜ್ಯಗಳು ಹಿಂದಿ ಭಾಷೆ ಹೇರಿಕೆಯನ್ನು ದಶಕಗಳಿಂದಲೂ ವಿರೋಧಿಸುತ್ತಲೇ ಬಂದಿವೆ. ಕೇಂದ್ರ ಸರ್ಕಾರ ಹಾಗೂ ಉತ್ತರ ಭಾರತೀಯರು, ದಕ್ಷಿಣದ ರಾಜ್ಯಗಳ ಮೇಲೆ ಸಮಯ ಸಿಕ್ಕಾಗಲೆಲ್ಲಾ ಹಿಂದಿ ಭಾಷೆಯನ್ನು ಹೇರಿಕೆ ಮಾಡಲು ಪ್ರಯತ್ನಿಸುತ್ತಲೇ ಇದೆ. ಹೀಗಿದ್ದೂ ದಕ್ಷಿಣ ಭಾರತೀಯರು ಹಿಂದಿ ಹೇರಿಕೆಯನ್ನು ಖಂಡಿಸುತ್ತಲೇ ಬಂದಿದ್ದಾರೆ. ಇದೀಗ ರವಿಚಂದ್ರನ್ ಅಶ್ವಿನ್ ಅವರ ಈ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ ಎನ್ನುವ ಮಾತು ಹಿಂದಿ ಹೇರಿಕೆ ಮಾಡಲು ಹವಣಿಸುವವರಿಗೆ ಚಾಟಿ ಏಟು ಕೊಟ್ಟಂತೆ ಆಗಿದೆ.
ಮೊದಲ ಸಲ ಐಸಿಸಿ ವಿಶ್ವ ಟೆಸ್ಟ್ ಫೈನಲ್‌ನಿಂದ ಟೀಂ ಇಂಡಿಯಾ ಔಟ್! ಫೈನಲ್ ರೇಸ್‌ನಿಂದ ಹೊರಬಿದ್ದಿದ್ದು ಹೇಗೆ?
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಅಶ್ವಿನ್: ಭಾರತದ ದಿಗ್ಗಜ ಆಫ್‌ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್, ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ, ಬ್ರಿಸ್ಬೇನ್ ಟೆಸ್ಟ್ ಪಂದ್ಯವು ಮುಕ್ತಾಯವಾಗುತ್ತಿದ್ದಂತೆಯೇ ಅಶ್ವಿನ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಭಾರತ ಪರ 106 ಟೆಸ್ಟ್ ಪಂದ್ಯಗಳನ್ನಾಡಿ 537 ವಿಕೆಟ್ ಕಬಳಿಸಿರುವ ಅಶ್ವಿನ್, 37 ಬಾರಿ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಬ್ಯಾಟಿಂಗ್‌ನಲ್ಲೂ 6 ಶತಕ ಸಿಡಿಸುವ ಮೂಲಕ ತಾವೊಬ್ಬ ಉಪಯುಕ್ತ ಆಲ್ರೌಂಡರ್ ಎನ್ನುವುದನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು.
ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಅತಿವೇಗದ 50, 100, 150, 200, 250, 300, 350, 400, 450, 500 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಅನಿಲ್ ಕುಂಬ್ಳೆ ಬಳಿಕ ಭಾರತ ಕ್ರಿಕೆಟ್ ಕಂಡ ದಿಗ್ಗಜ ಸ್ಪಿನ್ನರ್ ಆಗಿ ರವಿಚಂದ್ರನ್ ಅಶ್ವಿನ್ ಹೊರಹೊಮ್ಮಿದ್ದರು.