ವಿಶ್ವ ನಂ.1 ಶಿ ಯುಖಿಗೆ ಶಾಕ್ ಕೊಟ್ಟ ಕನ್ನಡಿಗ ಆಯುಷ್ ಶೆಟ್ಟಿ: BWF ವಿಶ್ವ ಚಾಂಪಿಯನ್‌ಶಿಪ್ 2ನೇ ಸುತ್ತಿಗೆ ಎಂಟ್ರಿ

Kannadaprabha News   | Kannada Prabha
Published : Aug 18, 2026, 09:15 AM IST
Ayush Shetty

ಸಾರಾಂಶ

ಕರ್ನಾಟಕದ ಯುವ ಆಟಗಾರ ಆಯುಷ್ ಶೆಟ್ಟಿ, ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ ನಂ.1 ಆಟಗಾರ ಶಿ ಯುಖಿ ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇದರೊಂದಿಗೆ ಪಿ.ವಿ. ಸಿಂಧು ಮತ್ತು ಇತರ ಭಾರತೀಯ ಡಬಲ್ಸ್ ಜೋಡಿಗಳು ಸಹ ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ಜಯ ಸಾಧಿಸಿವೆ.

ನವದೆಹಲಿ: ಭಾರತದ ಪ್ರತಿಭಾವಂತ ಶಟ್ಲರ್‌, ಕರ್ನಾಟಕದ ಯುವ ತಾರೆ ಆಯುಷ್‌ ಶೆಟ್ಟಿ ಈಗ ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲೂ ಮಿಂಚು ಹರಿಸಿದ್ದಾರೆ. ಅವರು ವಿಶ್ವ ನಂ.1 ಆಟಗಾರ, ಹಾಲಿ ವಿಶ್ವ ಚಾಂಪಿಯನ್‌ ಶಿ ಯುಖಿ ವಿರುದ್ಧ ಗೆಲುವು ಸಾಧಿಸಿದ್ದು, ಟೂರ್ನಿಯಲ್ಲಿ 2ನೇ ಸುತ್ತು ಪ್ರವೇಶಿಸಿದ್ದಾರೆ.

1965ರ ಬಳಿಕ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ ಫೈನಲ್‌ಗೇರಿದ ಮೊದಲಿಗ ಎನಿಸಿಕೊಂಡಿದ್ದ ಆಯುಷ್‌, ಈ ಬಾರಿ ಟೂರ್ನಿಯ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸೋಮವಾರ ಚೀನಾದ ಶಿ ವಿರುದ್ಧ 21-14, 13-21, 21-19 ಗೇಮ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. ಈ ಮೂಲಕ ತಮ್ಮ ವೃತ್ತಿಬದುಕಿನ ಶ್ರೇಷ್ಠ ಜಯ ದಾಖಲಿಸಿದರು.

ಇದೇ ವೇಳೆ ಮಾಜಿ ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು ಅವರು ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಐರ್ಲೆಂಡ್‌ನ ಸೋಫಿಯಾ ನೋಬೆಲ್‌ ವಿರುದ್ಧ 21-7, 21-11ರಲ್ಲಿ ಸುಲಭ ಜಯ ಗಳಿಸಿದರು. ಪುರುಷರ ಡಬಲ್ಸ್‌ನಲ್ಲಿ ಎಂ.ಆರ್‌.ಅರ್ಜುನ್‌ ಹಾಗೂ ಎಚ್‌.ಅಮ್ಸಾಕರುಣನ್‌, ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌, ಸಿಮ್ರಾನ್‌ ಸಿಂಘಿ-ಕವಿಪ್ರಿಯ ಸೆಲ್ವಂ ಜೋಡಿಗಳು ಶುಭಾರಂಭ ಮಾಡಿದವು.

ಪುರುಷ ಹಾಕಿ ವಿಶ್ವಕಪ್‌: ಮತ್ತೆ ಇಂಗ್ಲೆಂಡ್‌ಗೆ ಶರಣಾದ ಭಾರತ

ಆಮ್ಸ್‌ಟೆಲ್ವೀನ್: ಇಂಗ್ಲೆಂಡ್‌ ವಿರುದ್ಧ ಪುರುಷರ ಹಾಕಿ ವಿಶ್ವಕಪ್‌ನಲ್ಲಿ 32 ವರ್ಷಗಳ ಬಳಿಕ ಗೆಲ್ಲುವ ಭಾರತ ತಂಡಕ ಕನಸು ಭಗ್ನಗೊಂಡಿದೆ. ಆಂಗ್ಲರ ವಿರುದ್ಧ 1994ರ ಬಳಿಕ ಮೊದಲ ಗೆಲುವಿಗಾಗಿ ಕಾಯುತ್ತಿದ್ದ ತಂಡಕ್ಕೆ ಈ ಬಾರಿ ಮತ್ತೆ ಸೋಲು ಎದುರಾಯಿತು. ಸೋಮವಾರ ಭಾರತ 2-4 ಗೋಲುಗಳಿಂದ ಶರಣಾಯಿತು.

ಟೂರ್ನಿಯಲ್ಲಿ ಸತತ 2 ಪಂದ್ಯ ಗೆದ್ದ ಇಂಗ್ಲೆಂಡ್‌ 6 ಅಂಕದೊಂದಿಗೆ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ 2ನೇ ಸುತ್ತು ಪ್ರವೇಶಿಸಿತು. 2 ಪಂದ್ಯಗಳಲ್ಲಿ 3 ಅಂಕ ಸಂಪಾದಿಸಿರುವ ಭಾರತ ತಂಡ ಬುಧವಾರ ಪಾಕಿಸ್ತಾನ ವಿರುದ್ಧ ಗೆದ್ದರೆ ಅಥವಾ ಡ್ರಾ ಸಾಧಿಸಿದರೆ ಮಾತ್ರ 2ನೇ ಸುತ್ತಿಗೇರಲಿದೆ.

ಪಂದ್ಯದ 24ನೇ ನಿಮಿಷದ ವೇಳೆಗೆ ಭಾರತ 2-1ರಲ್ಲಿ ಮುನ್ನಡೆ ಸಾಧಿಸಿತ್ತು. ಹರ್ಮನ್‌ಪ್ರೀತ್‌ ಸಿಂಗ್‌, ದಿಲ್‌ಪ್ರೀತ್‌ ಸಿಂಗ್ ಗೋಲು ಬಾರಿಸಿದರು. ಆದರೆ 38ರಿಂದ 54ನೇ ನಿಮಿಷದ ಮಧ್ಯೆ 3 ಗೋಲು ಗಳಿಸಿದ ಇಂಗ್ಲೆಂಡ್‌ ಗೆಲುವು ತನ್ನದಾಗಿಸಿಕೊಂಡಿತು.

ಆ.20, 23ಕ್ಕೆ ಬೆಂಗಳೂರಲ್ಲಿ ಭಾರತ vs ಯೆಮನ್‌ ಜೂ. ತಂಡದ ನಡುವೆ ಫುಟ್ಬಾಲ್

ನವದೆಹಲಿ: ಭಾರತದ ಅಂಡರ್‌-20 ಫುಟ್ಬಾಲ್‌ ತಂಡವು ಬೆಂಗಳೂರಿನ ಯಲಹಂಕದಲ್ಲಿರುವ ಸೆಂಟರ್ ಫಾರ್‌ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ನಲ್ಲಿ ಆ.20, 23ರಂದು ಯೆಮನ್‌ ವಿರುದ್ಧ ಎರಡು ಸ್ನೇಹಾರ್ಥ ಪಂದ್ಯಗಳನ್ನು ಆಡಲಿದೆ. 2027ರ ಎಎಫ್‌ಸಿ ಅಂಡರ್‌-20 ಏಷ್ಯನ್‌ ಕಪ್‌ ಅರ್ಹತಾ ಟೂರ್ನಿಯ ಸಿದ್ಧತೆ ಭಾಗವಾಗಿ ಈ ಪಂದ್ಯಗಳು ನಡೆಯಲಿವೆ. ಎಎಫ್‌ಸಿ ಅರ್ಹತಾ ಟೂರ್ನಿಗಾಗಿ ಭಾರತ 26ರಂದು ತಾಷ್ಕೆಂಟ್‌ಗೆ ಪ್ರಯಾಣಿಸಲಿದೆ. ಆಗಸ್ಟ್ 31ರಂದು ಸಿರಿಯಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಾಲೆ ಟೆಸ್ಟ್‌ನಲ್ಲಿ ಭಾರತದ ದರ್ಬಾರ್: ಲಂಕಾ 284ಕ್ಕೆ ಆಲೌಟ್, ಟೀಂ ಇಂಡಿಯಾಗೆ 178 ರನ್‌ಗಳ ಭರ್ಜರಿ ಲೀಡ್
ಕ್ರಿಶ್ಚಿಯಾನೋ ರೊನಾಲ್ಡೋ-ಜಾರ್ಜಿನಾ ವಿವಾಹವಾದ ತಮ್ಮದೇ ಸ್ವಂತ ಅಲ್ಟ್ರಾ ಲಕ್ಶುರಿ ವಿಲ್ಲಾದ ಮೌಲ್ಯವೆಷ್ಟು ಗೊತ್ತಾ?