
ಗಾಲೆ: ಭರ್ಜರಿ ಬ್ಯಾಟಿಂಗ್ ಬಳಿಕ ಬೌಲಿಂಗ್‌ನಲ್ಲೂ ಅಮೋಘ ಪ್ರದರ್ಶನ ತೋರಿದ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಗಾಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 462 ರನ್‌ಗೆ ಆಲೌಟಾಯಿತು. ಇದಕ್ಕೆ ಉತ್ತರವಾಗಿ ಲಂಕಾ 284 ರನ್‌ಗೆ ಸರ್ವಪತನ ಕಂಡಿದ್ದು, 178 ರನ್‌ಗಳ ಭಾರೀ ಹಿನ್ನಡೆಯಲ್ಲಿದೆ.
2ನೇ ದಿನದಂತ್ಯಕ್ಕೆ ಭಾರತ 9 ವಿಕೆಟ್ ನಷ್ಟದಲ್ಲಿ 460 ರನ್ ಗಳಿಸಿತ್ತು. ಈ ಮೊತ್ತಕ್ಕೆ ಸೋಮವಾರ ಕೇವಲ 2 ರನ್ ಸೇರಿಸಿದ ತಂಡ, 462 ರನ್‌ಗೆ ಆಲೌಟಾಯಿತು. ಅಸಿತಾ ಫೆರ್ನಾಂಡೊ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ಔಟಾಗುವುದರೊಂದಿಗೆ ಭಾರತದ ಇನ್ನಿಂಗ್ಸ್‌ಗೆ ತೆರೆ ಬಿತ್ತು.
ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಆತಿಥೇಯ ತಂಡಕ್ಕೆ ಭಾರೀ ಆಘಾತ ಎದುರಾಯಿತು. 2ನೇ ಎಸೆತದಲ್ಲೇ ನಿಶಾನ್ ಮಧುಶ್ಕ ಅವರನ್ನು ಮೊಹಮ್ಮದ್ ಸಿರಾಜ್ ಪೆವಿಲಿಯನ್‌ಗೆ ಅಟ್ಟಿ ತಂಡಕ್ಕೆ ಮೇಲುಗೈ ಒದಗಿಸಿದರು. ಆ ಬಳಿಕವೂ ತಂಡಕ್ಕೆ ಉತ್ತಮ ಜೊತೆಯಾಟ ಸಿಗಲಿಲ್ಲ. 59ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ತಂಡ, 90 ಆಗುವಷ್ಟರಲ್ಲಿ 5ನೇ ವಿಕೆಟ್ ನಷ್ಟಕ್ಕೊಳಗಾಯಿತು. ಲಹಿರು ಉದರ(27), ದಿನೇಶ್ ಚಾಂಡಿಮಾಲ್(4) ಅವರನ್ನು ಮಾನವ್ ಸುತಾರ್ ಔಟ್ ಮಾಡಿದರು. ಇನ್ನೇನು ತಂಡವನ್ನು ಬೇಗನೇ ಆಲೌಟ್ ಮಾಡಿ, ಫಾಲೋ-ಆನ್ ಹೇರಬಹುದು ಅಂದುಕೊಂಡಿದ್ದ ಭಾರತಕ್ಕೆ ಸೋನಲ್ ದಿನುಶಾ ಹಾಗೂ ನಿರೋಶನ್ ಡಿಕ್ವೆಲ್ಲಾ ಶಾಕ್ ನೀಡಿದರು, ಈ ಜೋಡಿ 6ನೇ ವಿಕೆಟ್‌ಗೆ 146 ರನ್ ಜೊತೆಯಾಟವಾಡಿ, ಭಾರತ ಮತ್ತೆ ಬ್ಯಾಟ್ ಮಾಡುವಂತೆ ಮಾಡಿತು. ಆದರೆ ತಂಡದ ಮೊತ್ತ 236 ಆಗಿದ್ದಾಗ ಡಿಕ್ವೆಲ್ಲಾ(80 ರನ್) ವಿಕೆಟ್ ಕಿತ್ತ ಪ್ರಸಿದ್ಧ್ ಕೃಷ್ಣ, ಭಾರತ ಮತ್ತೆ ಮೇಲುಗೈ ಸಾಧಿಸುವಂತೆ ಮಾಡಿದರು. ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ದಿನುಶಾ 100 ರನ್ ಗಳಿಸಿದ್ದಾಗ ಜಡೇಜಾ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಕೊನೆ 3 ವಿಕೆಟ್ ಉರುಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಮಾನವ್ 4 ವಿಕೆಟ್ ಪಡೆದರೆ, ಜಡೇಜಾಗೆ 3 ವಿಕೆಟ್ ಲಭಿಸಿತು. ಸಿರಾಜ್, ಕುಲ್ದೀಪ್, ಪ್ರಸಿದ್ಧ್ ತಲಾ 1 ವಿಕೆಟ್ ಪಡೆದರು.
ಸ್ಕೋರ್: ಭಾರತ ಮೊದಲ ಇನ್ನಿಂಗ್ಸ್ 462/10 (ಕುಲ್ದೀಪ್ ಔಟಾಗದೆ 13, ಅಸಿತಾ 2-63), ಶ್ರೀಲಂಕಾ ಮೊದಲ ಇನ್ನಿಂಗ್ಸ್ 284/10 (ದಿನುಶಾ 100, ನಿರೋಶನ್ 80, ಮಾನವ್ 4-76, ಜಡೇಜಾ 3-57, ಸಿರಾಜ್ 1-29)
ಪಂದ್ಯದ 3ನೇ ದಿನವೂ ಮಳೆ ಅಡ್ಡಿಪಡಿಸಿತು. ಆದರೆ ಹೆಚ್ಚಿನ ಓವರ್ ನಷ್ಟಕ್ಕೊಳಗಾಗಲಿಲ್ಲ. ಸೋಮವಾರ ಒಟ್ಟು 80 ಓವರ್ ಆಟ ನಡೆಯಿತು. ಪಂದ್ಯ ಇನ್ನೂ 2 ದಿನ ನಡೆಯಲಿದ್ದು, ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಆದರೆ ಭಾರತ ಈಗಾಗಲೇ 178 ರನ್ ಮುನ್ನಡೆ ಪಡೆದಿರುವುದರಿಂದಾಗಿ ಮಳೆ ಕಾಟದ ನಡುವೆಯೂ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ.
ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್ ಕಿತ್ತ ಎಡಗೈ ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಜಡೇಜಾ(351) 3ನೇ ಸ್ಥಾನದಲ್ಲಿದ್ದಾರೆ. ರಂಗನಾ ಹೆರಾಥ್ 433, ವೆಟೋರಿ 362 ವಿಕೆಟ್ ಕಿತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.