ಶ್ರೀ ಕಂಠೀರವ ಕ್ರೀಡಾಂಣದಲ್ಲಿ ಫುಟ್ಬಾಲ್ ಟೂರ್ನಿ ನಡೆಸಬಾರದು ಅನ್ನೋ ಹೋರಾಟ ತೀವ್ರಗೊಳ್ಳುತ್ತಿದೆ. ಇಂದು ಬೆಂಗಳೂರಲ್ಲಿ ಪ್ರತಿಭಟನೆಗೆ ಕೆಎಎ ನಿರ್ಧರಿಸಿದೆ. ಟೌನ್‌ಹಾಲ್‌ನಿಂದ ಮೆರವಣಿಗೆ ಮೂಲಕ ಸಾಗುವ ಪ್ರತಿಭಟನೆ ಅಂತಿಮವಾಗಿ ಕಂಠೀರವ ಕ್ರೀಡಾಂಗಣ ಪ್ರವೇಶಿಸಲಿದೆ
ಬೆಂಗಳೂರು(ಸೆ.06): ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಕ್ರೀಡೆಗೆ ಅವಕಾಶ ನೀಡಬಾರದು ಎಂದು ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಶುಕ್ರವಾರ (ಸೆ.6) ಪ್ರತಿಭಟನೆಗೆ ಮುಂದಾಗಿದೆ. ನಗರದ ಟೌನ್‌ಹಾಲ್ ನಿಂದ ಬೆಳಗ್ಗೆ 11ಕ್ಕೆ ಹೊರಡಲಿರುವ ಮೆರವಣಿಗೆ ಕಂಠೀರವ ಕ್ರೀಡಾಂಗಣದಲ್ಲಿ ಮುಕ್ತಾಯವಾಗಲಿದೆ. ಪ್ರತಿಭಟನೆಯಲ್ಲಿ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಪದಾಧಿಕಾರಿಗಳು, ಕೋಚ್‌ಗಳು, ಅಂ.ರಾ. ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಕಾರ‍್ಯದರ್ಶಿ ಎ. ರಾಜವೇಲು ಹೇಳಿದರು.
ಇದನ್ನೂ ಓದಿ: ಕಂಠೀರವದಲ್ಲಿ ಫುಟ್ಬಾಲ್‌ಗೆ ಇನ್ನಿಲ್ಲದ ಕಸರತ್ತು!
undefined
ಮೆರವಣಿಗೆ ಕ್ರೀಡಾಂಗಣದಲ್ಲಿ ಕೊನೆಯಾಗಲಿದ್ದು, ಅಲ್ಲಿಯೇ ಉಪಸ್ಥಿತರಿರಲಿರುವ ಕ್ರೀಡಾ ಇಲಾಖೆ ಅಧಿಕಾರಿಗೆ ಮನವಿ ಪತ್ರ ನೀಡಲಾಗುವುದು. ಪ್ರತಿಭಟನೆ ಶಾಂತಿಯುತವಾಗಿರಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದು ಅವರು ಹೇಳಿದರು. ಒಂದೊಮ್ಮೆ ನಮ್ಮ ಮನವಿಗೆ ಸರ್ಕಾರ ಹಾಗೂ ಕ್ರೀಡಾ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಇದ್ದರೇ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧರಿದ್ದೇವೆ ಎಂದು ರಾಜವೇಲು ಎಚ್ಚರಿಸಿದರು.
ಇದನ್ನೂ ಓದಿ: ಕಂಠೀರವ ಕ್ರೀಡಾಂಗಣ ಬಂದ್?
ಸರ್ಕಾರ ಸೂಚಿಸಿದಂತೆ ನಡೆಯುತ್ತೇವೆ: ಇಲಾಖೆ
ಕಂಠೀರವ ಕ್ರೀಡಾಂಗಣದಲ್ಲಿ ಎಲ್ಲಾ ಕ್ರೀಡೆಗಳಿಗೂ ಅವಕಾಶವಿದ್ದು, ಸರ್ಕಾರ ಹೇಗೆ ಹೇಳುತ್ತದೋ ಹಾಗೆ ಮಾಡಲು ಕ್ರೀಡಾ ಇಲಾಖೆ ನಿರ್ಧರಿಸಿದೆ. ‘ಕಂಠೀರವ ಕ್ರೀಡಾಂಗಣದಲ್ಲಿ ಎಲ್ಲಾ ರೀತಿಯ ಕ್ರೀಡೆಗಳಿಗೂ ಮುಕ್ತ ಅವಕಾಶವಿದೆ. ಅಥ್ಲೆಟಿಕ್ಸ್‌ಗೆ ಮಾತ್ರ ಮೀಸಲಿಡುವುದು ಸೂಕ್ತವಲ್ಲ. ರಾಜ್ಯ ಸರ್ಕಾರದ ಆದೇಶದಂತೆ ಇಲಾಖೆ ಕಾರ‍್ಯನಿರ್ವಹಿಸಲಿದೆ’ ಎಂದು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಎಂ.ಎಸ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.