
ಬೆಂಗಳೂರು(ಸೆ.06): ಕಳೆದ 2 ಆವೃತ್ತಿಗಳಲ್ಲಿ ಬುಲ್ಸ್ ತಂಡ ತನ್ನ ತವರಿನ ಚರಣವನ್ನು ಬೇರೆ ಸ್ಥಳಗಳಲ್ಲಿ ಆಡಿತ್ತು. 5ನೇ ಆವೃತ್ತಿಯಲ್ಲಿ ನಾಗ್ಪುರ, 6ನೇ ಆವೃತ್ತಿಯಲ್ಲಿ ಪುಣೆಯಲ್ಲಿ ಪಂದ್ಯಗಳನ್ನು ನಡೆಸಲಾಗಿತ್ತು. ಕಳೆದ 2 ವರ್ಷ ಬೆಂಗಳೂರಿಗೆ ಆತಿಥ್ಯ ಕೈತಪ್ಪಲು ತಂಡ ಮಾಡಿದ್ದ ಎಡವಟ್ಟೇ ಕಾರಣ ಎನ್ನಲಾಗಿದೆ. ಕ್ರೀಡಾ ಇಲಾಖೆ ಅಧಿಕಾರಿಗಳು ಈ ಸಂಬಂಧ ಮಾಹಿತಿ ನೀಡಿದ್ದಾರೆ. ‘ಕಳೆದ 2 ಆವೃತ್ತಿಗಳಲ್ಲಿ ಕ್ರೀಡಾಂಗಣ ನೀಡುವುದಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಆದರೆ ತಂಡ ಸರಿಯಾದ ಕ್ರಮದಲ್ಲಿ ಹಾಗೂ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಿರಲಿಲ್ಲ. ಆದರೆ ಈ ಬಾರಿ 2 ತಿಂಗಳು ಮುಂಚಿತವಾಗಿಯೇ ಅರ್ಜಿ ಸಲ್ಲಿಸಿ, ಪಂದ್ಯಗಳ ಆಯೋಜನೆ ಮಾಡಲು ಕೋರಲಾಗಿತ್ತು. ಕಬಡ್ಡಿ ಪಂದ್ಯಗಳು ನಿಗದಿಯಾಗಿದ್ದ ದಿನಗಳಂದು ಒಳಾಂಗಣ ಕ್ರೀಡಾಂಗಣದಲ್ಲಿ ಮತ್ತ್ಯಾವುದೇ ಕ್ರೀಡೆಗಳು ಆಯೋಜನೆಗೊಳ್ಳದ ಕಾರಣ, ಕ್ರೀಡಾಂಗಣವನ್ನು ಬಿಟ್ಟುಕೊಡಲಾಗಿದೆ’ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಕಂಠೀರವದಲ್ಲಿ ಫುಟ್ಬಾಲ್: ಉಗ್ರ ಹೋರಾಟಕ್ಕೆ KAA ನಿರ್ಧಾರ
ಪಂದ್ಯ ಆಯೋಜನೆ ಬಲು ದುಬಾರಿ!
ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು ಬಾಡಿಗೆ ಪಡೆಯಬೇಕಿದ್ದರೆ ಕ್ರೀಡಾ ಇಲಾಖೆಗೆ ಲಕ್ಷಾಂತರ ರುಪಾಯಿ ಶುಲ್ಕ ಪಾವತಿಸಬೇಕು. ವಿವಿಧ ವಿಭಾಗಗಳಲ್ಲಿ ಶುಲ್ಕ ಪಡೆಯಲಾಗುತ್ತದೆ. ಪಂದ್ಯಗಳು ಆರಂಭಗೊಳ್ಳುವ ಮುನ್ನ ಕ್ರೀಡಾಂಗಣವನ್ನು ಸಿದ್ಧಗೊಳಿಸಲಾಗುತ್ತದೆ. ಅದಕ್ಕೆ ಪ್ರತ್ಯೇಕ ಶುಲ್ಕ ಇರಲಿದೆ. ಪಂದ್ಯಗಳು ನಡೆಯುವ ದಿನಗಳಂದು ಪ್ರತಿ ದಿನಕ್ಕೆ .5 ಲಕ್ಷ ಬಾಡಿಗೆ ಪಾವತಿಸಬೇಕು. ಪಂದ್ಯಗಳು ಮುಕ್ತಾಯಗೊಂಡ ಬಳಿಕ, ಕ್ರೀಡಾಂಗಣ ತೆರವು ಮಾಡಲು ಸಹ ಶುಲ್ಕ ಕಟ್ಟಬೇಕಿದೆ. ಪಾರ್ಕಿಂಗ್, ಸ್ವಚ್ಛತಾ ಕಾರ್ಯಕ್ಕೆಂದು ಬುಲ್ಸ್ 2.35 ಲಕ್ಷ ನೀಡಿದೆ.
ಇದನ್ನೂ ಓದಿ: ಕನ್ನಡಪ್ರಭ ಇಂಪಾಕ್ಟ್: ಕಂಠೀರವಕ್ಕೆ ಆರ್ ಅಶೋಕ್ ಭೇಟಿ-ಅಧಿಕಾರಿಗಳಿಗೆ ಕ್ಲಾಸ್!
ಪಂದ್ಯಗಳನ್ನು ಪ್ರಸಾರ ಮಾಡುವ ಕೊಠಡಿ, ಮಾಧ್ಯಮ ಹಾಗೂ ಸುದ್ದಿಗೋಷ್ಠಿ ನಡೆಸಲು ಕೊಠಡಿ, ಅಭ್ಯಾಸ ನಡೆಸಲು ಸ್ಥಳ, ಉಗ್ರಾಣ, ಕಚೇರಿ, ಡ್ರೆಸ್ಸಿಂಗ್ ಕೊಠಡಿ, ರೆಫ್ರಿಗಳ ಕೊಠಡಿ, ವೈದ್ಯಕೀಯ ಕೊಠಡಿ, ಉದ್ದೀಪನಾ ಪರೀಕ್ಷಾ ಕೊಠಡಿ, ಟಿಕೆಟ್ ಮಾರಾಟ ಸ್ಥಳ ಹೀಗೆ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ಶುಲ್ಕ ಪಾವತಿಸಿ ಪಡೆಯಲಾಗಿದೆ.
ಇನ್ನು ಜಿಎಸ್‌ಟಿ ರೂಪದಲ್ಲಿ 9.29 ಲಕ್ಷ ಪಾವತಿಸಿರುವ ಬುಲ್ಸ್ ತಂಡ, 5 ಲಕ್ಷ ಭದ್ರತಾ ಠೇವಣಿ ಇರಿಸಿದೆ. ಒಟ್ಟು 65.94 ಲಕ್ಷ ಖರ್ಚು ಮಾಡಿದೆ. ಇದಲ್ಲದೇ, ಒಳಾಂಗಣ ಕ್ರೀಡಾಂಗಣದ ಮರದ ನೆಲಹಾಸಿನ ಸುರಕ್ಷತೆಗಾಗಿ ಕ್ರೀಡಾಕೂಟದ ಅವಧಿಗೆ ವಿಮಾ ಕಂಪನಿಗೆ ಅಗತ್ಯ ಪ್ರೀಮಿಯಂ ನೀಡಿ, 2 ಕೋಟಿಗಳ ವಿಮಾ ಮೊತ್ತದ ಪಾಲಿಸಿ ಬಾಂಡನ್ನು ಪಡೆಯಲಾಗಿದೆ.
ಐಐಪಿಕೆಎಲ್ಗೆ ಸಿಕ್ಕಿತ್ತು ಶೇ. 50% ರಿಯಾಯಿತಿ!
ಪ್ರೊ ಕಬಡ್ಡಿಗೂ ಮುನ್ನ ಈ ವರ್ಷ ಮೇ 29ರಿಂದ ಜೂ.4ರ ವರೆಗೂ ನೂ ಕಬಡ್ಡಿ ಫೆಡರೇಷನ್(ಎನ್‌ಕೆಎಫ್) ಆಯೋಜಿಸಿದ್ದ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ (ಐಐಪಿಕೆಎಲ್)ಗೆ ಕಂಠೀರವ ಕ್ರೀಡಾಂಗಣವನ್ನು ನೀಡಲಾಗಿತ್ತು. ಇದರಿಂದ ಪ್ರೊ ಕಬಡ್ಡಿ ಆಯೋಜಕರಿಗೂ ಈ ವರ್ಷ ಕ್ರೀಡಾಂಗಣ ದೊರೆಯುವ ವಿಶ್ವಾಸ ಸಿಕ್ಕಿತ್ತು. ಐಐಪಿಕೆಎಲ್ ಆಯೋಜಕರಿಗೆ ಕ್ರೀಡಾ ಇಲಾಖೆಯಿಂದ ಶೇ.50ರಷ್ಟುರಿಯಾಯಿತಿ ಸಿಕ್ಕಿತ್ತು. ಆಯೋಜಕರು ಅಂದಿನ ಮುಖ್ಯಮಂತ್ರಿಗಳಿಗೆ ಆಪ್ತರಾಗಿದ್ದ ಕಾರಣ, ರಿಯಾಯಿತಿ ಸಿಕ್ಕಿತ್ತು ಎಂದು ಹೇಳಲಾಗಿದೆ. ಪಂದ್ಯಗಳು ಆರಂಭಗೊಳ್ಳುವ ಮೊದಲು 3 ದಿನ ಹಾಗೂ 4 ದಿನ ಪಂದ್ಯಗಳ ಆಯೋಜನೆಗೆ ಒಟ್ಟು 24.5 ಲಕ್ಷ ಶುಲ್ಕ ಪಾವತಿಸಬೇಕಿತ್ತು. ಶೇ.50ರಷ್ಟುರಿಯಾಯಿತಿ ಬಳಿಕ ಎನ್‌ಕೆಎಫ್ 12.25 ಲಕ್ಷಕ್ಕೆ ಕ್ರೀಡಾಂಗಣವನ್ನು ಬಾಡಿಗೆಗೆ ಪಡೆದುಕೊಂಡಿತ್ತು ಎನ್ನುವ ವಿವರ ಮೂಲಗಳಿಂದ ತಿಳಿದುಬಂದಿದೆ.
ವರದಿ: ಧನಂಜಯ ಎಸ್.ಹಕಾರಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.