ವಿಂಬಲ್ಡನ್‌ನಲ್ಲಿ ಈ ಸಲವೂ ಯಾನ್ನಿಕ್‌ ಸಿನ್ನರ್‌ ವಿನ್ನರ್!

Kannadaprabha News   | Kannada Prabha
Published : Jul 13, 2026, 10:55 AM IST
Jannik Sinner

ಸಾರಾಂಶ

ವಿಶ್ವದ ನಂ.1 ಆಟಗಾರ ಯಾನ್ನಿಕ್‌ ಸಿನ್ನರ್‌, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ರನ್ನು ಮಣಿಸಿ ಸತತ ಎರಡನೇ ಬಾರಿಗೆ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ರೋಚಕ ಗೆಲುವಿನೊಂದಿಗೆ, ಸಿನ್ನರ್‌ ತಮ್ಮ ವೃತ್ತಿಜೀವನದ ಐದನೇ ಗ್ರ್ಯಾನ್‌ಸ್ಲಾಂ ಕಿರೀಟವನ್ನು ಮುಡಿಗೇರಿಸಿಕೊಂಡರು.

ಲಂಡನ್‌: ವಿಶ್ವ ನಂ.1 ಆಟಗಾರ, ಇಟಲಿಯ ಯಾನ್ನಿಕ್‌ ಸಿನ್ನರ್‌ ಸತತ 2ನೇ ಬಾರಿ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ. ಕಳೆದ ವರ್ಷ ಫೈನಲ್‌ನಲ್ಲಿ ಕಾರ್ಲೊಸ್‌ ಆಲ್ಕರಜ್‌ ವಿರುದ್ಧ ಜಯಭೇರಿ ಬಾರಿಸಿದ್ದ ಸಿನ್ನರ್‌, ಈ ಬಾರಿ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ 6-7(7-9), 7-6(7-2), 6-3, 6-4 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು.

ಮೊದಲ ಸೆಟ್‌ನಲ್ಲಿ 24 ವರ್ಷದ ಸಿನ್ನರ್‌ ವಿರುದ್ಧ ಪ್ರಾಬಲ್ಯ ಸಾಧಿಸಿದ ಜ್ವೆರೆವ್‌, ರೋಚಕವಾಗಿ ಗೆದ್ದು 1-0 ಮುನ್ನಡೆ ಪಡೆದರು. ಆದರೆ 2ನೇ ಸೆಟ್‌ ಬಳಿಕ ಸಿನ್ನರ್‌ ಮೇಲುಗೈ ಸಾಧಿಸುತ್ತಲೇ ಹೋದರು. 3 ಮತ್ತು 4ನೇ ಸೆಟ್‌ಅನ್ನು ನೇರವಾಗಿ ಗೆದ್ದುಕೊಂಡ ಅವರು 5ನೇ ಗ್ರ್ಯಾನ್‌ಸ್ಲಾಂ ಕಿರೀಟ ಮುಡಿಗೇರಿಸಿಕೊಂಡರು.

ಎರಡೂವರೆ ವರ್ಷಕ್ಕೇ 5 ಗ್ರ್ಯಾನ್‌ಸ್ಲಾಂ ಕಿರೀಟ

ಸಿನ್ನರ್‌ ಮೊದಲ ಗ್ರ್ಯಾನ್‌ಸ್ಲಾಂ ಗೆದ್ದಿದ್ದು 2024ರಲ್ಲಿ. ಆ ವರ್ಷ ಆಸ್ಟ್ರೇಲಿಯನ್‌ ಓಪನ್‌, ಯುಎಸ್‌ ಓಪನ್‌ ಗೆದ್ದ ಅವರು, 2025ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಹಾಗೂ ವಿಂಬಲ್ಡನ್‌ ಚಾಂಪಿಯನ್‌ ಆದರು. ಈ ವರ್ಷ ಮತ್ತೊಂದು ಟ್ರೋಫಿ ಗೆದ್ದಿದ್ದಾರೆ.

₹46 ಕೋಟಿ: ಚಾಂಪಿಯನ್‌ ಸಿನ್ನರ್ ₹46.1 ಕೋಟಿ ನಗದು ಬಹುಮಾನ ಪಡೆದರು.

₹23 ಕೋಟಿ: ರನ್ನರ್‌-ಅಪ್‌ ಜ್ವೆರೆವ್‌ಗೆ ₹23 ಕೋಟಿ ನಗದು ಬಹುಮಾನ ಲಭಿಸಿತು.

4ನೇ ಫೈನಲ್‌ ಸೋಲು

ಜರ್ಮನಿಯ 29 ವರ್ಷದ ಜ್ವೆರೆವ್‌ಗೆ ಇದು ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ 4ನೇ ಫೈನಲ್‌ ಸೋಲು. 2020ರಲ್ಲಿ ಯುಎಸ್‌ ಓಪನ್‌, 2024ರ ಫ್ರೆಂಚ್‌ ಓಪನ್‌, 2025ರ ಆಸ್ಟ್ರೇಲಿಯನ್‌ ಓಪನ್‌, 2026ರ ವಿಂಬಲ್ಡನ್‌ ಫೈನಲ್‌ ಸೋತಿದ್ದಾರೆ. ಇತ್ತೀಚೆಗಷ್ಟೇ ಅವರು ಪ್ರೆಂಚ್‌ ಓಪನ್‌ ಚಾಂಪಿಯನ್‌ ಆಗಿದ್ದರು.

ನೋಸ್ಕೋವಾಗೆ ವಿಂಬಲ್ಡನ್‌ ಕಿರೀಟ

ಲಂಡನ್‌: ಚೆಕ್‌ ಗಣರಾಜ್ಯದ ಲಿಂಡಾ ನೋಸ್ಕೋವಾ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂನ ಮಹಿಳಾ ಸಿಂಗಲ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ನೋಸ್ಕೋವಾ, ತಮ್ಮ ದೇಶದವರೇ ಆದ ಕ್ಯಾರೋಲಿನಾ ಮುಕೋವಾ ವಿರುದ್ಧ 6-2, 5-7, 6-3 ಸೆಟ್‌ಗಳಲ್ಲಿ ಜಯಿಸಿ, ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗೆ ಮುತ್ತಿಟ್ಟರು. 

ಎರಡೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಫೈನಲ್‌ನಲ್ಲಿ ನೋಸ್ಕೋವಾ ಹಲವು ಬಾರಿ ಗೆಲುವಿನ ಹೊಸ್ತಿಲಿಗೆ ಬಂದರೂ, ಮುಕೋವಾ ಹೋರಾಟ ಬಿಡಲಿಲ್ಲ. ಕೊನೆಗೆ 6ನೇ ಚಾಂಪಿಯನ್‌ಶಿಪ್‌ ಪಾಯಿಂಟ್‌ನಲ್ಲಿ ನೋಸ್ಕೋವಾಗೆ ಯಶಸ್ಸು ದೊರೆಯಿತು. ಚಾಂಪಿಯನ್‌ ಆದ ನೋಸ್ಕೋವಾಗೆ ಬರೋಬ್ಬರಿ 46.1 ಕೋಟಿ ರು. ಬಹುಮಾನ ದೊರೆಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯಕ್ಕೆ ಶಿವಮೊಗ್ಗ ‘ಮಹಾರಾಜ’; ಬೆಂಗಳೂರು ಪರ ಸಮಿತ್ ದ್ರಾವಿಡ್ ಹೋರಾಟ ವ್ಯರ್ಥ
FIFA World Cup 2026: ವಿಶ್ವಚಾಂಪಿಯನ್‌ ಅರ್ಜೆಂಟೀನಾ ಸೆಮಿಫೈನಲ್‌ಗೆ