FIFA World Cup 2026: ವಿಶ್ವಚಾಂಪಿಯನ್‌ ಅರ್ಜೆಂಟೀನಾ ಸೆಮಿಫೈನಲ್‌ಗೆ

Kannadaprabha News   | Kannada Prabha
Published : Jul 13, 2026, 10:13 AM IST
Argentina vs Switzerland

ಸಾರಾಂಶ

ಹಾಲಿ ಚಾಂಪಿಯನ್‌ ಅರ್ಜೆಂಟೀನಾ, ಸ್ವಿಜರ್‌ಲೆಂಡ್‌ ವಿರುದ್ಧದ ಫಿಫಾ ವಿಶ್ವಕಪ್ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಜಯಗಳಿಸಿ ಸೆಮಿಫೈನಲ್‌ ಪ್ರವೇಶಿಸಿದೆ. ನಿಗದಿತ ಅವಧಿಯಲ್ಲಿ 1-1 ಗೋಲುಗಳಿಂದ ಸಮಬಲಗೊಂಡ ಪಂದ್ಯವು ಹೆಚ್ಚುವರಿ ಅವಧಿಗೆ ಸಾಗಿತು, ಅಲ್ಲಿ ಜೂಲಿಯನ್‌ ಆಲ್ವರೆಜ್‌ ಮತ್ತು ಲಾಟರೊ ಮಾರ್ಟಿನೆಜ್‌ ಗೋಲು ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಕಾನ್ಸಾಸ್‌ ಸಿಟಿ(ಅಮೆರಿಕ): ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಈ ಬಾರಿ ಫಿಫಾ ವಿಶ್ವಕಪ್‌ನಲ್ಲೂ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾರತೀಯ ಕಾಲಮಾನ ಭಾನುವಾರ ಬೆಳಗ್ಗೆ ಸ್ವಿಜರ್‌ಲೆಂಡ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಲಿಯೋನಲ್‌ ಮೆಸ್ಸಿ ಪಡೆ 3-1 ಗೋಲಿನ ಅಂತರದಲ್ಲಿ ಜಯಭೇರಿ ಬಾರಿಸಿದೆ.

ಸ್ವಿಜರ್‌ಲೆಂಡ್‌ ವಿರುದ್ಧ ಪಂದ್ಯದಲ್ಲಿ ಅರ್ಜೆಂಟೀನಾದ ಗೆಲುವು ಸುಲಭವಾಗಬಹುದು ಎಂದು ಹಲವರು ಅಂದಾಜಿಸಿದ್ದರು. ಆದರೆ ತಂಡಕ್ಕೆ ಸತತ 2ನೇ ಪಂದ್ಯದಲ್ಲೂ ಕಠಿಣ ಸವಾಲು ಎದುರಾಯಿತು. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಈಜಿಪ್ಟ್‌ ವಿರುದ್ಧ 14 ನಿಮಿಷಗಳಲ್ಲಿ 3 ಗೋಲು ಹೊಡೆದು ಗೆದ್ದಿದ್ದ ಪಡೆ, ಸ್ವಿಜರ್‌ಲೆಂಡ್‌ ವಿರುದ್ಧ ಗೆಲ್ಲಲು ಹೆಚ್ಚುವರಿ ಅವಧಿ ಬೇಕಾಯಿತು.

10ನೇ ನಿಮಿಷದಲ್ಲೇ ಅಲೆಕ್ಸಿಸ್‌ ಮ್ಯಾಕ್ ಅಲಿಸ್ಟರ್‌ ಹೊಡೆದ ಗೋಲು ಅರ್ಜೆಂಟೀನಾಗೆ ಮುನ್ನಡೆ ಒದಗಿಸಿತು. ಆದರೆ 67ನೇ ನಿಮಿಷದಲ್ಲಿ ಡ್ಯಾನ್‌ ಎನ್‌ಡೊಯೆ ಗೋಲು ಬಾರಿಸಿ ಸ್ವಿಜರ್‌ಲೆಂಡ್‌ ಸಮಬಲಕ್ಕೆ ಕಾರಣರಾದರು. ಬಳಿಕ ನಿಗದಿತ ಅವಧಿ ಕೊನೆಗೊಳ್ಳುವವರೆಗೂ ಉಭಯ ತಂಡಗಳು ಗೋಲು ದಾಖಲಿಸಲಿಲ್ಲ. ಹೀಗಾಗಿ ಹೆಚ್ಚುವರಿ 30 ನಿಮಿಷ ನೀಡಲಾಯಿತು. 112ನೇ ನಿಮಿಷದಲ್ಲಿ ಜೂಲಿಯನ್‌ ಆಲ್ವರೆಜ್‌ ಗೋಲು ದಾಖಲಿಸಿ ತಂಡದ ಗೆಲುವಿನ ಆಸೆಯನ್ನು ಚಿಗುರಿಸಿದರು. 120 ನಿಮಿಷದ ಆಟ ಮುಕ್ತಾಯಗೊಂಡು, ಇಂಜುರಿ ಸಮಯ ನೀಡಿದಾಗ ಅರ್ಜೆಂಟೀನಾ ಮತ್ತೊಂದು ಗೋಲು ಹೊಡೆಯಿತು. 121ನೇ ನಿಮಿಷದಲ್ಲಿ ಲಾಟರೊ ಮಾರ್ಟಿನೆಜ್‌ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ತಂಡವನ್ನು ಸೆಮಿಫೈನಲ್‌ಗೇರಿಸಿದರು.

ಡೈವ್‌ ಮಾಡಿದ್ದಕ್ಕೆ ರೆಡ್‌ ಕಾರ್ಡ್‌: ಪಂದ್ಯದಿಂದಲೇ ಹೊರಗಳಿದ ಎಂಬೊಲೊ

ಪಂದ್ಯದ ಮೊದಲಾರ್ಧದ 44ನೇ ನಿಮಿಷದಲ್ಲಿ ಅರ್ಜೆಂಟಿನಾ ಆಟಗಾರನನ್ನು ಕೆಳಗೆ ಬೀಳಿಸಿದ್ದಕ್ಕೆ ಸ್ವಿಜರ್‌ಲೆಂಡ್‌ನ ಎಂಬೊಲೊಗೆ ಹಳದಿ ಕಾರ್ಡ್ ನೀಡಲಾಗಿತ್ತು. 72ನೇ ನಿಮಿಷದಲ್ಲಿ ಎಂಬೊಲೊ ಅರ್ಜೆಂಟಿನಾದ ಪೆನಾಲ್ಟಿ ಬಾಕ್ಸ್‌ನೊಳಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಅರ್ಜೆಂಟಿನಾದ ಮಿಡ್‌ಫೀಲ್ಡರ್ ಲಿಯಾಂಡ್ರೊ ಪರೇಡೆಸ್ ದೂಡಿದ್ದರಿಂದ ಎಂಬೊಲೊ ನೆಲಕ್ಕೆ ಬಿದ್ದಿದ್ದಾರೆ ಎಂದು ಭಾವಿಸಿ ರೆಫ್ರಿ, ಪರೇಡೆಸ್‌ಗೆ ಹಳದಿ ಕಾರ್ಡ್‌ ನೀಡಿದರು. ಆದರೆ ‘ವಿಎಆರ್‌’ ಪರಿಶೀಲನೆ ಬಳಿಕ ಪರೇಡೆಸ್ ಫೌಲ್ ಮಾಡಿಲ್ಲ, ಬದಲಿಗೆ ಎಂಬೊಲೊ ಅವರೇ ಪೆನಾಲ್ಟಿ ಪಡೆಯುವ ಉದ್ದೇಶದಿಂದ ಡೈಮ್‌ ಮಾಡಿದ್ದಾರೆ ಎಂಬ ತೀರ್ಮಾನಕ್ಕೆ ಬಂದರು. ಅಲ್ಲದೆ, ಎಂಬೊಲೊಗೆ ಹಳದಿ ಕಾರ್ಡ್‌ ನೀಡಲಾಯಿತು. ಇದು ಪಂದ್ಯದಲ್ಲಿ ಅವರಿಗೆ ಸಿಕ್ಕ 2ನೇ ಹಳದಿ ಕಾರ್ಡ್‌ ಆಗಿದ್ದರಿಂದ ಅದು ರೆಡ್‌ ಕಾರ್ಡ್‌ ಆಗಿ ಬದಲಾಯಿತು. ಅವರು ಪಂದ್ಯದಿಂದ ಹೊರಗುಳಿಯಬೇಕಾಯಿತು. ತಂಡ ನಿರ್ಣಾಯಕ ಹಂತದಲ್ಲಿ 10 ಜನರೊಂದಿಗೆ ಆಡಬೇಕಾಯಿತು.

ರ್‍ಯಾಂಕಿಂಗ್‌ನ ಅಗ್ರ-4 ತಂಡ ಸೆಮಿಫೈನಲ್‌ಗೆ: ವಿಶ್ವಕಪ್‌ನಲ್ಲಿ ಮೊದಲು

1992ರಲ್ಲಿ ರ್‍ಯಾಂಕಿಂಗ್‌ ಪದ್ಧತಿ ಚಾಲ್ತಿಗೆ ಬಂದ ಬಳಿಕ ಇದೇ ಮೊದಲ ಬಾರಿ ರ್‍ಯಾಂಕಿಂಗ್‌ನಲ್ಲಿ ಅಗ್ರ-4 ಸ್ಥಾನಗಳಲ್ಲಿರುವ ತಂಡಗಳೇ ಸೆಮಿಫೈನಲ್‌ ಪ್ರವೇಶಿಸಿವೆ. ಫ್ರಾನ್ಸ್‌ ನಂ.1 ಸ್ಥಾನದಲ್ಲಿದ್ದರೆ, ಅರ್ಜೆಂಟೀನಾ 2ನೇ, ಸ್ಪೇನ್‌ 3ನೇ ಹಾಗೂ ಇಂಗ್ಲೆಂಡ್‌ 4ನೇ ಸ್ಥಾನದಲ್ಲಿದೆ.

ಸೆಮಿಫೈನಲ್‌ಗೇರಿದ ಎಲ್ಲಾ 4 ತಂಡಗಳೂ ಹಿಂದಿನ ಚಾಂಪಿಯನ್ಸ್‌

ಈ ಬಾರಿ ಫಿಫಾ ವಿಶ್ವಕಪ್‌ನ ಸೆಮಿಫೈನಲ್‌ ತಲುಪಿದ ಎಲ್ಲಾ 4 ತಂಡಗಳು ಕೂಡಾ ಈ ಹಿಂದೆ ಒಮ್ಮೆಯಾದರೂ ಚಾಂಪಿಯನ್‌ ಆಗಿವೆ. ಅರ್ಜೆಂಟೀನಾ 1930, 1990, 2014, ಫ್ರಾನ್ಸ್‌ 1998, 2018, ಇಂಗ್ಲೆಂಡ್‌ 1966 ಹಾಗೂ ಸ್ಪೇನ್‌ 2010ರಲ್ಲಿ ಟ್ರೋಫಿ ಗೆದ್ದಿವೆ.

04 ಬಾರಿ

ಅರ್ಜೆಂಟೀನಾ ತಂಡ ಸತತ 4 ಪಂದ್ಯಗಳಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಗೋಲು ಬಾರಿಸಿ ಗೆದ್ದಿದೆ. ಇದು ವಿಶ್ವಕಪ್‌ನಲ್ಲಿ ತಂಡವೊಂದರ ಜಂಟಿ ಗರಿಷ್ಠ. ಫ್ರಾನ್ಸ್‌ ಕೂಡಾ ಈ ಸಾಧನೆ ಮಾಡಿತ್ತು.

ಮೆಸ್ಸಿ, ಎಂಬಾಪೆ ತಲಾ 10+ ಗೋಲ್‌ ಕೊಡುಗೆ: 60 ವರ್ಷಗಳ ದಾಖಲೆ

ಮೆಸ್ಸಿ ಹಾಗೂ ಎಂಬಾಪೆ ಈ ಬಾರಿ ತಲಾ 10+ ಗೋಲು ಕೊಡುಗೆ(ಗೋಲು ಮತ್ತು ಅಸಿಸ್ಟ್ ಸೇರಿ) ನೀಡಿದ್ದಾರೆ. ಇವರಿಬ್ಬರು ಕಳೆದ ವಿಶ್ವಕಪ್‌ನಲ್ಲೂ ಈ ಸಾಧನೆ ಮಾಡಿದ್ದಾರೆ. ಕಳೆದ 60 ವರ್ಷಗಳಲ್ಲೇ ಬೇರೆ ಬೇರೆ ವಿಶ್ವಕಪ್‌ ಆವೃತ್ತಿಗಳಲ್ಲಿ ತಲಾ 10+ ಗೋಲ್‌ ಕೊಡುಗೆ ನೀಡಿದ್ದು ಇವರಿಬ್ಬರು ಮಾತ್ರ.

ಹೆಚ್ಚವರಿ ಅವಧಿಯಲ್ಲಿ 13ನೇ ಜಯ: ದಾಖಲೆ

ಅರ್ಜೆಂಟೀನಾ ತಂಡ ವಿಶ್ವಕಪ್‌ನಲ್ಲಿ 13ನೇ ಬಾರಿ ಹೆಚ್ಚುವರಿ ಸಮಯದಲ್ಲಿ ಗೆದ್ದಿದೆ. ಇದು ಯಾವುದೇ ತಂಡದ ಪೈಕಿ ಗರಿಷ್ಠ. ಜರ್ಮನಿ 12 ಪಂದ್ಯಗಳಲ್ಲಿ ಹೆಚ್ಚುವರಿ ಅವಧಿಯಲ್ಲಿ ಜಯಗಳಿಸಿದೆ.

7ನೇ ಸಲ ಅರ್ಜೆಂಟೀನಾ ಸೆಮಿಗೆ: ಕ್ವಾರ್ಟರ್‌ನಲ್ಲಿ 4ನೇ ಸಲ ಎಡವಿದ ಸ್ವಿಸ್

ಅರ್ಜೆಂಟೀನಾ ತಂಡ ಸತತತ 2ನೇ ಹಾಗೂ ಒಟ್ಟಾರೆ 7ನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದೆ. ಈ ಹಿಂದೆ 1930, 1978, 1986, 1990, 2014 ಹಾಗೂ 2022ರಲ್ಲಿ ಸೆಮಿಫೈನಲ್‌ಗೇರಿತ್ತು. ಈ ಎಲ್ಲಾ 6 ಆವೃತ್ತಿಗಳಲ್ಲೂ ತಂಡ ಫೈನಲ್‌ಗೆ ಬಂದಿತ್ತು ಎಂಬುದು ಗಮನಾರ್ಹ. ಇದೇ ವೇಳೆ ಸ್ವಿಜರ್‌ಲೆಂಡ್‌ 4ನೇ ಬಾರಿ(1934, 1938, 1954, 2026) ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದಿದೆ. ತಂಡ ಒಮ್ಮೆಯೂ ಸೆಮೀಸ್‌ ತಲುಪಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

FIFA World Cup 2026 ಆಡಿದ 25 ವರ್ಷದ ಸ್ಟಾರ್ ಫುಟ್ಬಾಲಿಗ ನಿಗೂಢ ಸಾವು!
FIFA World Cup 2026 ಕ್ವಾರ್ಟರ್‌ ಫೈನಲ್‌: ಬೆಲ್ಜಿಯಂ ಮಣಿಸಿ ಸೆಮೀಸ್‌ಗೆ ಸ್ಪೇನ್‌ ಲಗ್ಗೆ