ISSF World Championships ಕಂಚು ಗೆದ್ದು ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್‌ ಪಕ್ಕಾ ಮಾಡಿಕೊಂಡ ಅಖಿಲ್ ಶೆರೊನ್‌..!

By Naveen KodaseFirst Published Aug 21, 2023, 12:02 PM IST
Highlights

ಮುಂದಿನ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 5ನೇ ಶೂಟರ್‌ ಎನಿಸಿದರು. ಅಖಿಲ್‌ ಅರ್ಹತಾ ಸುತ್ತಿನಲ್ಲಿ 6ನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದ್ದರು.

ಬಾಕು(ಅಜರ್‌ಬೈಜಾನ್‌): ಭಾರತದ ಅಖಿಲ್‌ ಶೆರೊನ್‌, 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇಲ್ಲಿ ನಡೆಯುತ್ತಿರುವ ವಿಶ್ವ ಶೂಟಿಂಗ್‌ ಚಾಂಪಿಯನ್‌ಶಿಪ್‌ನ ಪುರುಷರ 50 ಮೀ. ಏರ್‌ ರೈಫಲ್‌ 3 ಪೊಸಿಷನ್‌ ಸ್ಪರ್ಧೆಯಲ್ಲಿ ಅಖಿಲ್‌ ಕಂಚಿನ ಪದಕ ಜಯಿಸಿ, ಮುಂದಿನ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 5ನೇ ಶೂಟರ್‌ ಎನಿಸಿದರು. 8 ಸ್ಪರ್ಧಿಗಳಿದ್ದ ಫೈನಲ್‌ನಲ್ಲಿ ಅಮಿತ್‌ 450.0 ಅಂಕ ಕಲೆಹಾಕಿದರು. ಅಖಿಲ್‌ ಅರ್ಹತಾ ಸುತ್ತಿನಲ್ಲಿ 6ನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದ್ದರು.

ಇದೇ ವೇಳೆ ಭಾರತಕ್ಕೆ ಭಾನುವಾರ 2 ಚಿನ್ನದ ಪದಕ ಸಹ ಒಲಿಯಿತು. ಮಹಿಳೆಯರ ಏರ್‌ ಪಿಸ್ತೂಲ್‌ 25 ಮೀ. ಸ್ಪರ್ಧೆಯಲ್ಲಿ ಇಶಾ ಸಿಂಗ್‌, ಮನು ಭಾಕರ್‌ ಹಾಗೂ ರಿದಮ್‌ ಸಾಂಗ್ವಾನ್‌ ಅವರನ್ನೊಳಗೊಂಡ ಚಿನ್ನ ಗೆದ್ದರೆ, ಪುರುಷರ ಏರ್‌ ರೈಫಲ್‌ 50 ಮೀ. 3 ಪೊಸಿಷನ್‌ ಸ್ಪರ್ಧೆಯಲ್ಲಿ ಐಶ್ವರಿ ಪ್ರತಾಪ್‌, ಅಖಿಲ್‌ ಶೆರೊನ್‌ ಹಾಗೂ ನೀರಜ್‌ ಕುಮಾರ್‌ ಅವರಿದ್ದ ತಂಡ ಸ್ವರ್ಣಕ್ಕೆ ಮುತ್ತಿಟ್ಟಿತು. ಭಾರತ 3 ಚಿನ್ನ, 3 ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಈಜು: ಕರ್ನಾಟಕ ಸಮಗ್ರ ಚಾಂಪಿಯನ್‌

ಒಡಿಶಾದ ಭುವನೇಶ್ವರದಲ್ಲಿ ನಡೆದ 39ನೇ ಸಬ್‌-ಜೂನಿಯರ್‌ ಹಾಗೂ 49 ಜೂನಿಯರ್‌ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ 50 ಚಿನ್ನ, 42 ಬೆಳ್ಳಿ, 27 ಕಂಚು ಸೇರಿ ಒಟ್ಟು 119 ಪದಕ ಜಯಿಸಿ ಮೊದಲ ಸ್ಥಾನ ಪಡೆಯಿತು. 11 ಚಿನ್ನ ಸೇರಿ 54 ಪದಕ ಗೆದ್ದ ಮಹಾರಾಷ್ಟ್ರ 2ನೇ, 10 ಚಿನ್ನ ಸೇರಿ 37 ಪದಕ ಗೆದ್ದ ತಮಿಳುನಾಡು 3ನೇ ಸ್ಥಾನ ಪಡೆದವು.

ಇಂದಿನಿಂದ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌..! ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿ ಸಾತ್ವಿಕ್‌-ಚಿರಾಗ್ ಶೆಟ್ಟಿ

ಏಷ್ಯನ್‌ ಕಿರಿಯರ ಸ್ಕ್ವ್ಯಾಶ್‌: ಭಾರತದ ಅನಾಹತ್‌ಗೆ ಚಿನ್ನ

ಡೇಲಿಯನ್‌(ಚೀನಾ): ಭಾರತದ 15 ವರ್ಷದ ಅನಾಹತ್‌ ಸಿಂಗ್‌, ಏಷ್ಯನ್‌ ಅಂಡರ್‌-17 ಸ್ಕ್ವ್ಯಾಶ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಅನಾಹತ್‌ ಹಾಂಕಾಂಗ್‌ನ ಎನಾ ಕ್ವೊಂಗ್‌ ವಿರುದ್ಧ 3-1ರ ಅಂತರದಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್‌ ಹಾಗೂ ಸೆಮೀಸ್‌ನಲ್ಲಿ ಕ್ರಮವಾಗಿ ಮಲೇಷ್ಯಾದ ಡಾಯ್ಸ್‌ ಲೀ ಹಾಗೂ ವೈಟ್ನಿ ಇಸಾಬೆಲ್‌ ವಿರುದ್ಧ ಅನಾಹತ್‌ ಜಯಿಸಿದ್ದರು.

Chess World Cup 2023: ಎರಡನೇ ಸುತ್ತಿನಲ್ಲೂ ಡ್ರಾ ಸಾಧಿಸಿದ ಪ್ರಜ್ಞಾನಂದ..! ಇಂದು ಟೈ ಬ್ರೇಕರ್

ಸ್ಪೇನ್‌ ವಿಶ್ವ ಚಾಂಪಿಯನ್‌!

ಸಿಡ್ನಿ: ಚೊಚ್ಚಲ ಬಾರಿಗೆ ಸ್ಪೇನ್‌ ಮಹಿಳಾ ತಂಡ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಗೆದ್ದಿದೆ. ಭಾನುವಾರ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 1-0 ಗೋಲಿನ ಗೆಲುವು ಸಾಧಿಸಿ ಟ್ರೋಫಿ ಎತ್ತಿಹಿಡಿಯಿತು. 29ನೇ ನಿಮಿಷದಲ್ಲಿ ಒಲ್ಗಾ ಕಾರ್ಮೊನಾ ಬಾರಿಸಿದ ಗೋಲು, ಸ್ಪೇನ್‌ ಪಾಲಿಗೆ ಗೆಲುವಿನ ಗೋಲಾಯಿತು. 9ನೇ ಆವೃತ್ತಿಯ ಟೂರ್ನಿಗೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಜಂಟಿ ಆತಿಥ್ಯ ವಹಿಸಿದ್ದವು. 1 ತಿಂಗಳು ನಡೆದ ಟೂರ್ನಿಯಲ್ಲಿ ಒಟ್ಟು 32 ತಂಡಗಳು ಪಾಲ್ಗೊಂಡಿದ್ದವು.

click me!