ಭಾರತ-ಇಂಗ್ಲೆಂಡ್‌ ಟಿ20 ಪಂದ್ಯಕ್ಕೆ ಕ್ಷಣಗಣನೆ

By Web DeskFirst Published Mar 4, 2019, 9:46 AM IST
Highlights

ಹಾಲಿ ವಿಶ್ವ ಚಾಂಪಿಯನ್ನರ ವಿರುದ್ಧ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿರುವ ಭಾರತ, ಟಿ20 ಮಾದರಿಯಲ್ಲೂ ಪ್ರಾಬಲ್ಯ ಮೆರೆಯುವ ವಿಶ್ವಾಸದಲ್ಲಿದೆ. 

ಗುವಾಹಟಿ[ಮಾ.04]: 2020ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ಮಹಿಳಾ ತಂಡ ಸಿದ್ಧತೆ ಆರಂಭಿಸಿದೆ. ಸೋಮವಾರದಿಂದ ಇಲ್ಲಿ ಇಂಗ್ಲೆಂಡ್‌ ವಿರುದ್ಧ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿ, ಸೂಕ್ತ ಆಟಗಾರ್ತಿಯರನ್ನು ಗುರುತಿಸಲು ನೆರವಾಗಲಿದೆ. ಹಾಲಿ ವಿಶ್ವ ಚಾಂಪಿಯನ್ನರ ವಿರುದ್ಧ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿರುವ ಭಾರತ, ಟಿ20 ಮಾದರಿಯಲ್ಲೂ ಪ್ರಾಬಲ್ಯ ಮೆರೆಯುವ ವಿಶ್ವಾಸದಲ್ಲಿದೆ. ನ್ಯೂಜಿಲೆಂಡ್‌ನಲ್ಲಿ ಐತಿಹಾಸಿಕ ಏಕದಿನ ಸರಣಿ ಗೆದ್ದ ಬಳಿಕ ಟಿ20ಯಲ್ಲಿ 0-3 ಅಂತರದಲ್ಲಿ ವೈಟ್‌ವಾಶ್‌ ಮುಖಭಂಗ ಅನುಭವಿಸಿತ್ತು. ಆ ಸೋಲಿನ ಕಹಿಯನ್ನು ಮರೆಯಲು ಭಾರತ ಪಣ ತೊಟ್ಟಿದೆ.

ತವರಿನಲ್ಲಿ ಕೊನೆಯ ಏಕದಿನ ಪಂದ್ಯವಾಡಿದ ಗೇಲ್ ಹೇಳಿದ್ದಿಷ್ಟು...

ಕಾಯಂ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ, ಸರಣಿಯಲ್ಲಿ ಭಾರತ ತಂಡವನ್ನು ಸ್ಮೃತಿ ಮಂಧನಾ ಮುನ್ನಡೆಸಲಿದ್ದಾರೆ. ರಾಷ್ಟ್ರೀಯ ತಂಡವನ್ನು ಸ್ಮೃತಿ ಮುನ್ನಡೆಸುತ್ತಿರುವುದು ಇದೇ ಮೊದಲು. ಕರ್ನಾಟಕದ ವೇದಾ ಕೃಷ್ಣಮೂರ್ತಿ ತಂಡಕ್ಕೆ ವಾಪಸಾಗಿದ್ದು, ಅವರ ಹೆಗಲ ಮೇಲೆ ನಿರೀಕ್ಷೆಯ ಭಾರವಿದೆ. ಹಿರಿಯ ಆಟಗಾರ್ತಿ ಮಿಥಾಲಿ ರಾಜ್‌ ತಂಡದಲ್ಲಿದ್ದಾರೆ. ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ಗೂ ಮುನ್ನ ಮಿಥಾಲಿ ಟಿ20 ಮಾದರಿಗೆ ನಿವೃತ್ತಿ ಘೋಷಿಸುವ ನಿರೀಕ್ಷೆ ಇದ್ದು ಅವರ ಅನುಭವವನ್ನು ತಂಡ ಯಾವ ರೀತಿ ಉಪಯೋಗಿಸಿಕೊಳ್ಳಲಿದೆ ಎನ್ನುವ ಕುತೂಹಲವಿದೆ.

ಬೆಂಗಳೂರಲ್ಲಿ ‘ಈ ಸಲ ಕಪ್‌ ನಮ್ದೇ’ ಕೆಫೆ!

ಹರ್ಲೀನ್‌ ಡಿಯೋಲ್‌ ಹಾಗೂ ಭಾರತಿ ಫುಲ್ಮಾಲಿ ತಂಡಕ್ಕೆ ಸೇರ್ಪಡೆಗೊಂಡಿರುವ ಹೊಸ ಆಟಗಾರ್ತಿಯರಾಗಿದ್ದು, ಮೊದಲ ಯತ್ನದಲ್ಲೇ ಆಯ್ಕೆಗಾರರ ಗಮನ ಸೆಳೆಯುವ ವಿಶ್ವಾಸದಲ್ಲಿದ್ದಾರೆ. ಎಡಗೈ ವೇಗಿ ಕೋಮಲ್‌ ಜಂಜಾಡ್‌ ತಂಡಕ್ಕೆ ಪಾದಾರ್ಪಣೆ ಮಾಡಲಿದ್ದು, ಶಿಖಾ ಪಾಂಡೆ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಐವರು ಸ್ಪಿನ್ನರ್‌ಗಳಿರುವುದು ವಿಶೇಷ.

ಪಂದ್ಯ ಆರಂಭ: ಬೆಳಗ್ಗೆ 11ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
 

click me!