ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಮಾಜಿ ಆರ್‌ಸಿಬಿ ಆಟಗಾರ; ಸತತ ಮೂರು ಐಪಿಎಲ್ ಗೆದ್ದ ಭಾರತದ ಏಕೈಕ ಸ್ಪಿನ್ನರ್!

Published : Aug 23, 2026, 04:34 PM IST
Indian Cricketer Karn Sharma retired

ಸಾರಾಂಶ

ಭಾರತದ ಮಾಜಿ ಸ್ಪಿನ್ನರ್ ಕರಣ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೀಮಿತ ಅವಕಾಶಗಳನ್ನು ಪಡೆದರೂ, ಐಪಿಎಲ್‌ನಲ್ಲಿ ಸತತ ಮೂರು ವರ್ಷ ಮೂರು ವಿಭಿನ್ನ ತಂಡಗಳೊಂದಿಗೆ ಟ್ರೋಫಿ ಗೆದ್ದ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಭಾರತದ ಮಾಜಿ ಸ್ಪಿನ್ನರ್ ಕರಣ್ ಶರ್ಮಾ ಅವರು ಕ್ರಿಕೆಟ್‌ನ ಎಲ್ಲಾ ಮಾದರಿಗಳಿಗೂ ವಿದಾಯ ಹೇಳಿದ್ದಾರೆ. ಭಾರತ ತಂಡಕ್ಕಾಗಿ ಒಂದು ಟೆಸ್ಟ್, ಎರಡು ಏಕದಿನ ಮತ್ತು ಒಂದು ಟಿ20 ಪಂದ್ಯವನ್ನು ಆಡಿರುವ ಕರಣ್, ಶನಿವಾರ ರಾತ್ರಿ ಉತ್ತರ ಪ್ರದೇಶ ಟಿ20 ಲೀಗ್ ಪಂದ್ಯದ ನಂತರ ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದರು. 2007-08ರ ದೇಶೀಯ ಸೀಸನ್‌ನಲ್ಲಿ ಕರಣ್ ತಮ್ಮ ಫಸ್ಟ್-ಕ್ಲಾಸ್, ಲಿಸ್ಟ್-ಎ ಮತ್ತು ಟಿ20 ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ್ದರು. ಆರಂಭದಲ್ಲಿ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದ ಅವರು, ಆಡಿದ ಮೊದಲ ರಣಜಿ ಪಂದ್ಯದಲ್ಲೇ ಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು.

ಅನ್‌ಕ್ಯಾಪ್ಡ್ ಆಟಗಾರನಿಗೆ ಸಿಕ್ಕ ಅತಿ ದೊಡ್ಡ ಮೊತ್ತ

ಆದರೆ, ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ಸಿಕ್ಕಿದ್ದು 2012-13ರ ಸೀಸನ್‌ನಲ್ಲಿ. ಆ ಸೀಸನ್‌ನ ಮೂರು ರಣಜಿ ಪಂದ್ಯಗಳಿಂದ 19.04ರ ಸರಾಸರಿಯಲ್ಲಿ 21 ವಿಕೆಟ್‌ಗಳನ್ನು ಪಡೆದರು. ಈ ಪ್ರದರ್ಶನಕ್ಕಾಗಿ ಬಿಸಿಸಿಐ ಅವರಿಗೆ 'ಅತ್ಯುತ್ತಮ ಅಂಡರ್-25 ಕ್ರಿಕೆಟಿಗ' ಪ್ರಶಸ್ತಿ ನೀಡಿ ಗೌರವಿಸಿತು. ಈ ಯಶಸ್ಸು ಅವರಿಗೆ ಐಪಿಎಲ್ ಬಾಗಿಲು ತೆರೆಯಿತು. 2014ರ ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕರಣ್ ಶರ್ಮಾ ಅವರನ್ನು ಬರೋಬ್ಬರಿ 3.75 ಕೋಟಿ ರೂಪಾಯಿಗೆ ಖರೀದಿಸಿತು. ಆ ಸಮಯದಲ್ಲಿ, ಭಾರತದ ಯಾವುದೇ ಅನ್‌ಕ್ಯಾಪ್ಡ್ ಆಟಗಾರನಿಗೆ ಸಿಕ್ಕ ಅತಿ ದೊಡ್ಡ ಮೊತ್ತ ಇದಾಗಿತ್ತು.

ರೋಹಿತ್ 264 ರನ್ ಗಳಿಸಿದ ಪಂದ್ಯದಲ್ಲೇ ಕರಣ್ ಪದಾರ್ಪಣೆ

ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿನ ಸ್ಥಿರ ಪ್ರದರ್ಶನ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆಯಿತು. ಇದರ ಫಲವಾಗಿ, 2014ರ ಇಂಗ್ಲೆಂಡ್ ಪ್ರವಾಸಕ್ಕೆ ಭಾರತದ ಸೀಮಿತ ಓವರ್‌ಗಳ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿತು. ಈ ಸರಣಿಯಲ್ಲೇ ಅವರು ಟಿ-20ಗೆ ಪಾದಾರ್ಪಣೆ ಮಾಡಿ, ಜೋ ರೂಟ್ ವಿಕೆಟ್ ಪಡೆದರು. ಇದುವೇ ಟಿ20ಯಲ್ಲಿ ಅವರ ಏಕೈಕ ವಿಕೆಟ್. ನಂತರ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾದರು. ರೋಹಿತ್ ಶರ್ಮಾ 264 ರನ್ ಗಳಿಸಿದ ಐತಿಹಾಸಿಕ ಪಂದ್ಯದಲ್ಲೇ ಕರಣ್ ಏಕದಿನಕ್ಕೆ ಪದಾರ್ಪಣೆ ಮಾಡಿದರು. ಆದರೆ ಆಡಿದ ಎರಡು ಪಂದ್ಯಗಳಲ್ಲಿ ಅವರಿಗೆ ಯಾವುದೇ ವಿಕೆಟ್ ಸಿಗಲಿಲ್ಲ.

ಅದೇ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ ಅವರು ಟೆಸ್ಟ್ ಪಾದಾರ್ಪಣೆ ಮಾಡಿದರು. ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ ಎರಡು ವಿಕೆಟ್ ಪಡೆದು ಒಟ್ಟು ನಾಲ್ಕು ವಿಕೆಟ್ ಗಳಿಸಿದರು. ದುರದೃಷ್ಟವಶಾತ್, ಇದೇ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಯಿತು. 2015ರಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗಿದ್ದರೂ, ಗಾಯದ ಕಾರಣದಿಂದಾಗಿ ಅವರು ತಂಡದಿಂದ ಹೊರಗುಳಿಯಬೇಕಾಯಿತು. ನಂತರ ಅವರಿಗೆ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ.

ಮೂರು ಐಪಿಎಲ್ ಟ್ರೋಫಿಗಳು

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಮಿಂಚಲು ಸಾಧ್ಯವಾಗದಿದ್ದರೂ, ಐಪಿಎಲ್‌ನಲ್ಲಿ ಕರಣ್ ಶರ್ಮಾ ದೊಡ್ಡ ಯಶಸ್ಸು ಕಂಡರು. ಸತತ ಮೂರು ವರ್ಷ, ಮೂರು ವಿಭಿನ್ನ ತಂಡಗಳೊಂದಿಗೆ ಐಪಿಎಲ್ ಟ್ರೋಫಿ ಗೆದ್ದ ಮೊದಲ ಆಟಗಾರ ಎಂಬ ಅಪರೂಪದ ದಾಖಲೆಯನ್ನು ಅವರು ನಿರ್ಮಿಸಿದರು. 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್, 2017ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿ ಅವರು ಈ ಸಾಧನೆ ಮಾಡಿದರು. ಇತ್ತೀಚಿನ ವರ್ಷಗಳಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆಸ್ಟ್ರೇಲಿಯಾ ಪರ 13 ವರ್ಷ ಆಡಿದರು ಆಗಿಲ್ಲ, ಪೋರ್ಚುಗಲ್ ಪರ ಮೊದಲ ಶತಕ ಸಿಡಿಸಿದ RCB ಮಾಜಿ ಆಟಗಾರ
ಕೊಲೊಂಬೊ ಟೆಸ್ಟ್: ಸರಣಿ ಗೆಲುವಿನ ಮೇಲೆ ಭಾರತದ ಕಣ್ಣು, WTC ಫೈನಲ್ ಆಸೆಯೂ ಜೀವಂತ