ಕೊಲೊಂಬೊ ಟೆಸ್ಟ್: ಸರಣಿ ಗೆಲುವಿನ ಮೇಲೆ ಭಾರತದ ಕಣ್ಣು, WTC ಫೈನಲ್ ಆಸೆಯೂ ಜೀವಂತ

Kannadaprabha News   | Kannada Prabha
Published : Aug 23, 2026, 09:31 AM IST
Team India vs Sri Lanka

ಸಾರಾಂಶ

3 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಗುರಿಯೊಂದಿಗೆ ಭಾರತ ತಂಡ ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್‌ಗೆ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದಿರುವ ಗಿಲ್ ಪಡೆ, ಕೊಲೊಂಬೊದಲ್ಲಿಯೂ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಕೊಲೊಂಬೊ: ತವರಿನಾಚೆ 3 ವರ್ಷಗಳಲ್ಲಿ ಮೊದಲ ಟೆಸ್ಟ್‌ ಸರಣಿ ಗೆಲುವಿನ ನಿರೀಕ್ಷೆಯೊಂದಿಗೆ, ಭಾನುವಾರದಿಂದ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಶುಭ್‌ಮನ್‌ ಗಿಲ್‌ ಪಡೆ, 2ನೇ ಟೆಸ್ಟ್‌ನಲ್ಲಿ ಮತ್ತಷ್ಟು ಸುಧಾರಿತ ಆಟವಾಡುವ ವಿಶ್ವಾಸ ಹೊಂದಿದೆ.

ಭಾರತ ಕೊನೆ ಬಾರಿಗೆ ತವರಿನಾಚೆ ಸರಣಿ ಗೆದ್ದಿದ್ದು, ವಿಂಡೀಸ್‌ ವಿರುದ್ಧ 2023ರ ಜುಲೈನಲ್ಲಿ. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತಿದ್ದ ಭಾರತ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ನಲ್ಲಿ ಸರಣಿ ಡ್ರಾ ಮಾಡಿಕೊಂಡಿತ್ತು. ಇದಲ್ಲದೇ, ತವರಿನಲ್ಲಿ ನ್ಯೂಜಿಲೆಂಡ್‌ ಹಾಗೂ ದ.ಆಫ್ರಿಕಾ ವಿರುದ್ಧ ಎದುರಾದ ಸರಣಿ ಸೋಲುಗಳು ಭಾರತ ತಂಡವನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿತ್ತು. ಹೀಗಾಗಿ, ಈ ಸರಣಿಯಲ್ಲಿ ತಂಡ ಗೆದ್ದರೇ ಆಟಗಾರರು ಸ್ವಲ್ಪ ಮಟ್ಟಿಗೆ ಸಮಾಧಾನಗೊಳ್ಳಲಿದ್ದಾರೆ. ಜೊತೆಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ಗೇರುವ ಭಾರತದ ಆಸೆ ಜೀವಂತವಾಗಿ ಉಳಿಯಲಿದೆ.

ಗಾಲೆಯಲ್ಲಿ ಟೀಂ ಇಂಡಿಯಾ ಆಲ್ರೌಂಡ್ ಆಟ

ಮೊದಲ ಟೆಸ್ಟ್‌ನಲ್ಲಿ ಭಾರತ ಆಲ್ರೌಂಡ್‌ ಪ್ರದರ್ಶನ ತೋರಿತ್ತು. ಆದರೂ, ಯಶಸ್ವಿ ಜೈಸ್ವಾಲ್‌ ಹಾಗೂ ನಾಯಕ ಶುಭ್‌ಮನ್‌ ಗಿಲ್‌ರಿಂದ ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆ ಮಾಡಲಾಗುತ್ತಿದೆ. ದೇವದತ್‌ ಪಡಿಕ್ಕಲ್‌ ತಮ್ಮ ಆಕರ್ಷಕ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದರೆ, ಕೆ.ಎಲ್‌.ರಾಹುಲ್‌ ಗಾಲೆಯಲ್ಲಿ ಕೈತಪ್ಪಿದ್ದ ಶತಕವನ್ನು ಕೊಲೊಂಬೊದಲ್ಲಿ ಪೂರೈಸಲು ಎದುರು ನೋಡುತ್ತಿದ್ದಾರೆ.

ರಿಷಭ್‌ ಪಂತ್‌, ಧೃವ್‌ ಜುರೆಲ್‌ ಮತ್ತೊಮ್ಮೆ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರೆ, ಬ್ಯಾಟಿಂಗ್‌ ವಿಚಾರದಲ್ಲಿ ಭಾರತಕ್ಕೆ ಹೆಚ್ಚು ತಲೆಬಿಸಿ ಇರುವುದಿಲ್ಲ.

ಈ ಪಂದ್ಯದಲ್ಲಿ ಪಿಚ್‌ ವೇಗಿಗಳಿಗೂ ಸ್ವಲ್ಪ ಹೆಚ್ಚಾಗಿಯೇ ನೆರವು ನೀಡುವ ನಿರೀಕ್ಷೆ ಇದ್ದು, ಪ್ರಸಿದ್ಧ್ ಕೃಷ್ಣ ಹಾಗೂ ಮೊಹಮದ್‌ ಸಿರಾಜ್‌ ಖುಷಿಯಿಂದಲೇ ದಾಳಿಗಿಳಿಯಲಿದ್ದಾರೆ. ಮಾನವ್‌ ಸುಥಾರ್‌ ತಂಡದ ಹೊಸ ಸ್ಪಿನ್‌ ಅಸ್ತ್ರವಾಗಿ ರೂಪುಗೊಳ್ಳುತ್ತಿದ್ದು, ಮತ್ತೊಮ್ಮೆ ವಿಕೆಟ್‌ ಬೇಟೆಗಿಳಿಯಲಿದ್ದಾರೆ. ಜಡೇಜಾ 2ನೇ ಸ್ಪಿನ್ನರ್‌ ಆಗಿ ಆಡುವುದು ಖಚಿತ. ಮೊದಲ ಟೆಸ್ಟ್‌ನಲ್ಲಿ ಕೇವಲ 1 ವಿಕೆಟ್‌ ಕಿತ್ತ ಕುಲ್ದೀಪ್‌ ಯಾದವ್‌ಗೆ ಇನ್ನೊಂದು ಅವಕಾಶ ಸಿಗಲಿದೆಯೇ ಎನ್ನುವ ಪ್ರಶ್ನೆಗೆ ಟಾಸ್‌ ಆದ ಬಳಿಕವಷ್ಟೇ ಉತ್ತರ ಸಿಗಲಿದೆ.

ಮಧ್ಯಪ್ರದೇಶದ ಸ್ಪಿನ್‌ ಬೌಲಿಂಗ್‌ ಆಲ್ರೌಂಡರ್‌ ಸಾರಾಂಶ್‌ ಜೈನ್‌ ಅವಕಾಶಕ್ಕಾಗಿ ಕಾಯುತ್ತಿದ್ದು, ಅವರಿಗೆ ಟೆಸ್ಟ್‌ ಕ್ಯಾಪ್‌ ಸಿಕ್ಕರೆ ಅಚ್ಚರಿಯಿಲ್ಲ.

ಮತ್ತೊಂದೆಡೆ ಲಂಕಾ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಚಾಂದಿಮಾಲ್‌ ಈ ಪಂದ್ಯದಲ್ಲಿ ಆಡುವುದು ಅನುಮಾನ. ಆದರೆ ಕಳೆದ ಪಂದ್ಯದಲ್ಲಿ ಸೋನಲ್‌ ದಿನುಶಾ, ನಿರೋಶನ್‌ ಡಿಕ್ವೆಲಾ ಹಾಗೂ ಧನಂಜಯ ಡಿ ಸಿಲ್ವಾ ಬ್ಯಾಟಿಂಗ್‌ನಲ್ಲಿ ಹೋರಾಟ ನಡೆಸಿದ್ದರು. ಆದರೆ ಲಂಕಾ ಸ್ಪಿನ್ನರ್‌ಗಳು ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾಗಿದ್ದರು. ಆತಿಥೇಯ ತಂಡ, ಸರಣಿ ಡ್ರಾ ಮಾಡಿಕೊಳ್ಳಬೇಕಿದ್ದರೆ ಸ್ಪಿನ್ನರ್‌ಗಳು ಅಸಾಧಾರಣ ಆಟ ತೋರಲೇಬೇಕಿದೆ.

ಪಿಚ್‌ ರಿಪೋರ್ಟ್‌

ಗಾಲೆಗಿಂತ ಕೊಲೊಂಬೊದಲ್ಲಿ ವಾತಾವರಣ ತಿಳಿ ಆಗಿರುವ ನಿರೀಕ್ಷೆ ಇದೆ. ಅಷ್ಟಾಗಿ ಮಳೆ ಮುನ್ಸೂಚನೆ ಇಲ್ಲ. ಅಲ್ಲದೇ ಪಿಚ್‌ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಹುಲ್ಲು ಇದ್ದು, ವೇಗಿಗಳಿಗೂ ನೆರವು ದೊರೆಯಬಹುದು.

ಪಂದ್ಯ ಆರಂಭ: ಬೆಳಗ್ಗೆ 10ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್‌/ಸೋನಿ ಲಿವ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket: 149 ವರ್ಷಗಳ ಕ್ರಿಕೆಟ್‌ ಇತಿಹಾಸದಲ್ಲೇ ಮಹಾ ದಾಖಲೆ: ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದ ಆರು ವೇಗಿಗಳು ಇವರೇ!
'Gen Z' ಮನಸ್ಸಿನಲ್ಲಿ ಯಾರಿಗೆ ಜಾಗ ; ಬಿಜೆಪಿಗೋ, ಕಾಂಗ್ರೆಸ್‌ಗೋ? ಇಲ್ಲಿದೆ ಅಸಲಿ ಲೆಕ್ಕಾಚಾರ!