
ಬೆಂಗಳೂರು[ಆ.20]: 15 ವರ್ಷಗಳ ಕಾಲ ಕರ್ನಾಟಕ ಕ್ರಿಕೆಟ್ ತಂಡದ ಮುಂಚೂಣಿ ಆಟಗಾರನಾಗಿ, ತಂಡಕ್ಕೆ 2 ಬಾರಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಗೆಲ್ಲಿಸಿಕೊಟ್ಟ ವೇಗದ ಬೌಲರ್ ವಿನಯ್ ಕುಮಾರ್, ರಾಜ್ಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. 2019-20ರ ದೇಸಿ ಋುತುವಿನಲ್ಲಿ ಅವರು ಪುದುಚೇರಿ ತಂಡದ ಆಟಗಾರ ಹಾಗೂ ಸಲಹೆಗಾರನಾಗಿ ಕಾರ್ಯನಿರ್ವಹಿಸುವುದಾಗಿ ಸೋಮವಾರ ಘೋಷಿಸಿದರು.
ಸೋಮವಾರ ರಾತ್ರಿ 9 ಗಂಟೆಗೆ ವಿನಯ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇಷ್ಟು ವರ್ಷಗಳ ಕಾಲ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಕ್ಕೆ ಹೆಮ್ಮೆ ಇದೆ. ಕರ್ನಾಟಕ ಕ್ರಿಕೆಟ್ ತಮಗೆ ಎಲ್ಲವನ್ನೂ ಕೊಟ್ಟಿದೆ ಎಂದರು. ‘ರಾಜ್ಯ ಕ್ರಿಕೆಟ್‌ನಲ್ಲಿ ಹಲವು ಹೊಸ ಪ್ರತಿಭೆಗಳ ಉದಯವಾಗುತ್ತಿದೆ. ಯುವಕರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ವಿನಯ್ ಹೇಳಿದರು.
KPL 2019: ಬಳ್ಳಾರಿ ಟಸ್ಕರ್ಸ್‌ಗೆ ಶರಣಾದ ಹುಬ್ಳಿ ಟೈಗರ್ಸ್
ಕರ್ನಾಟಕ ತಂಡದ ಮಾಜಿ ಆಟಗಾರ, ಕೋಚ್ ಜೆ.ಅರುಣ್ ಕುಮಾರ್ ಪುದುಚೇರಿ ತಂಡದ ಕೋಚ್ ಆಗಿ ನೇಮಕಗೊಂಡಿದ್ದು, ಅವರು ಆ ತಂಡಕ್ಕೆ ಆಡುವಂತೆ ಆಹ್ವಾನ ನೀಡಿದ್ದಾಗಿ ವಿನಯ್ ತಿಳಿಸಿದರು. ‘ಪುದುಚೇರಿ ತಂಡ ಕಳೆದ ವರ್ಷ ದೇಸಿ ಕ್ರಿಕೆಟ್‌ಗೆ ಪ್ರವೇಶ ಪಡೆಯಿತು. ತಂಡದಲ್ಲಿ ಅನೇಕ ಪ್ರತಿಭಾನ್ವಿತ ಆಟಗಾರರಿದ್ದಾರೆ. ಅವರೊಂದಿಗೆ ಆಡಲು ಉತ್ಸುಕನಾಗಿದ್ದೇನೆ’ ಎಂದು ವಿನಯ್ ಹೇಳಿದರು.
2004ರಲ್ಲಿ ಕರ್ನಾಟಕ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ವಿನಯ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಾಜ್ಯದ ಪರ 400ಕ್ಕೂ ಹೆಚ್ಚು ವಿಕೆಟ್ ಕಬಳಿಸಿದ್ದಾರೆ. ವಿನಯ್ ನಾಯಕತ್ವದಲ್ಲಿ ಕರ್ನಾಟಕ 2013-14, 2014-15ರಲ್ಲಿ ರಣಜಿ, ಇರಾನಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಈ ಋುತುವಿನಲ್ಲಿ ವಲಸೆ ಹೋದ 3ನೇ ಆಟಗಾರ!
ಕರ್ನಾಟಕ ಕ್ರಿಕೆಟ್‌ನ ತಾರಾ ಆಟಗಾರರೆನಿಸಿದ್ದ ರಾಬಿನ್ ಉತ್ತಪ್ಪ 2 ಋುತುಗಳ ಹಿಂದೆಯೇ ಸೌರಾಷ್ಟ್ರ ತಂಡಕ್ಕೆ ವಲಸೆ ಹೋಗಿದ್ದರು. ಈ ಬಾರಿ ಅವರು ಕೇರಳ ತಂಡದ ಪರ ಆಡಲಿದ್ದಾರೆ. ಈ ಋುತುವಿನಲ್ಲಿ ಹಿರಿಯ ವಿಕೆಟ್ ಕೀಪರ್ ಸಿ.ಎಂ.ಗೌತಮ್ ಹಾಗೂ ಹಿರಿಯ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಕರ್ನಾಟಕ ಕ್ರಿಕೆಟ್ ಸಂಸ್ಥೆಯಿಂದ ನಿರಾಕ್ಷೇಪಣ ಪತ್ರ ಪಡೆದು ಬೇರೆ ರಾಜ್ಯದ ಪರ ಆಡಲು ನಿರ್ಧರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.