ಭಾರತ-ನ್ಯೂಜಿಲೆಂಡ್ 2ನೇ ಟಿ20- ಟೀಂ ಇಂಡಿಯಾದಲ್ಲಿ ಬದಲಾವಣೆ ಸಾಧ್ಯತೆ!

By Web DeskFirst Published Feb 8, 2019, 8:46 AM IST
Highlights

ನ್ಯೂಜಿಲೆಂಡ್ ವಿರುದ್ದದ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಮೊದಲ ಪಂದ್ಯದ ಸೋಲಿನಿಂದ ಭಾರತಕ್ಕಿದು ನಿರ್ಣಾಯಕ ಪಂದ್ಯ. ಹೀಗಾಗಿ ತಂಡದಲ್ಲಿ ಕೆಲ ಬದಲಾವಣೆ ಮಾಡಲು ರೋಹಿತ್ ಶರ್ಮಾ ಮುಂದಾಗಿದ್ದಾರೆ.

ಆಕ್ಲೆಂಡ್(ಫೆ.08):  ವೆಲ್ಲಿಂಗ್ಟನ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ನಿಂದ ಹಿಗ್ಗಾಮುಗ್ಗಾ ಚಚ್ಚಿಸಿಕೊಂಡಿದ್ದ ಭಾರತ ತಂಡ, ಶುಕ್ರವಾರ ಇಲ್ಲಿನ ಈಡನ್‌ ಪಾರ್ಕ್ನಲ್ಲಿ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಿ ಸುಧಾರಿತ ಪ್ರದರ್ಶನದೊಂದಿಗೆ ಪುಟಿದೇಳುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ: ವಿಶ್ವಕಪ್ 2019: ವಿರಾಟ್ ಕೊಹ್ಲಿಗೆ 4ನೇ ಕ್ರಮಾಂಕ?

ಬುಧವಾರ ಟಿ20ಯಲ್ಲಿ ಅತಿದೊಡ್ಡ ಸೋಲು ಕಂಡ ಭಾರತಕ್ಕೆ ಸಮಯದ ಅಭಾವವಿರುವ ಕಾರಣ ಹೆಚ್ಚಿನ ಆಲೋಚನೆ ನಡೆಸಲು ಅವಕಾಶವಿಲ್ಲ. ಹೀಗಾಗಿ ಮೊದಲ ಪಂದ್ಯದಲ್ಲಿ ಅನುಭವಿಸಿದ ಕಹಿಯನ್ನು ಮರೆತು ಪೂರ್ಣಬಲದೊಂದಿಗೆ 2ನೇ ಪಂದ್ಯಕ್ಕೆ ಕಣಕ್ಕಿಳಿಯಬೇಕಿದೆ.

ಆರಂಭಿಕ ಟಿಮ್‌ ಸೀಫರ್ಟ್‌ ಸ್ಫೋಟಕ ಆಟವನ್ನು ನಿಯಂತ್ರಿಸಲು ಭಾರತ ತಂಡ ಹೊಸ ಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ. ಅನುಭವಿ ಭುವನೇಶ್ವರ್‌ ಕುಮಾರ್‌ ಸಹ ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದರು. ಹಾರ್ದಿಕ್‌ ಪಾಂಡ್ಯ ಹಾಗೂ ಖಲೀಲ್‌ ಅಹ್ಮದ್‌ 12ಕ್ಕಿಂತಲೂ ಹೆಚ್ಚು ಎಕಾನಮಿ ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟಿದ್ದು ಭಾರತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಈ ಪಂದ್ಯದಲ್ಲಿ ಖಲೀಲ್‌ರನ್ನು ಹೊರಗಿಟ್ಟು ಅವರ ಬದಲಿಗೆ ಸಿದ್ಧಾಥ್‌ರ್‍ ಕೌಲ್‌ರನ್ನು ಆಡಿಸುವ ಸಾಧ್ಯತೆ ಹೆಚ್ಚಿದೆ. ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಲ್‌ ಹಾಗೂ ಕೃನಾಲ್‌ ಪಾಂಡ್ಯ ತಕ್ಕಮಟ್ಟಿಗಿನ ಪ್ರದರ್ಶನ ತೋರಿದರೂ, ಚೈನಾಮನ್‌ ಕುಲ್ದೀಪ್‌ ಯಾದವ್‌ರನ್ನು ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳಲು ನಾಯಕ ರೋಹಿತ್‌ ನಿರ್ಧರಿಸಿದರೆ ಅಚ್ಚರಿಯಿಲ್ಲ.

ಇದನ್ನೂ ಓದಿ: ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ!

ಭಾರತ ತಂಡ 8 ತಜ್ಞ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದರೂ, ಮೊದಲ ಪಂದ್ಯದಲ್ಲಿ ಹೀನಾಯ ಸೋಲಿಗೆ ಶರಣಾಗಿತ್ತು. ‘ಹೋರಾಟ ಮನೋಭಾವ ತೋರಲಿಲ್ಲ’ ಎಂದು ಸೋಲಿನ ಬಳಿಕ ರೋಹಿತ್‌ ಒಪ್ಪಿಕೊಂಡಿದ್ದರು. ಸರಣಿ ಸೋಲಿನ ಹೊಸ್ತಿಲಲ್ಲಿರುವ ಭಾರತ ತಂಡದ ಹೋರಾಟ ಹೇಗಿರಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಲಯ ಕಳೆದುಕೊಂಡಿರುವ ರೋಹಿತ್‌, ನ್ಯೂಜಿಲೆಂಡ್‌ ಪ್ರವಾಸವನ್ನು ಭರ್ಜರಿಯಾಗಿ ಮುಕ್ತಾಯಗೊಳಿಸಲು ಕಾತರಿಸುತ್ತಿದ್ದಾರೆ. 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದ ವಿಜಯ್‌ ಶಂಕರ್‌ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಆದರೂ ಶುಭ್‌ಮನ್‌ ಗಿಲ್‌ಗೆ ಸ್ಥಾನ ಸಿಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಏಕದಿನ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವ ಉತ್ಸಾಹದಲ್ಲಿರುವ ರಿಷಭ್‌ ಪಂತ್‌ರಿಂದ ಜವಾಬ್ದಾರಿಯುತ ಆಟ ಮೂಡಬೇಕಿದೆ. ಎಂ.ಎಸ್‌.ಧೋನಿ, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.

ಇದನ್ನೂ ಓದಿ: ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆಗೆ -20 ವರ್ಷದ ಸಂಭ್ರಮ!

ಆತ್ಮವಿಶ್ವಾಸದ ಅಲೆಯಲ್ಲಿ ಕಿವೀಸ್‌: ಅಪಾಯಕಾರಿ ಆರಂಭಿಕ ಜೋಡಿಯಾದ ಕಾಲಿನ್‌ ಮನ್ರೊ ಹಾಗೂ ಟಿಮ್‌ ಸೀಫರ್ಟ್‌ರನ್ನು ಬೇಗನೆ ಔಟ್‌ ಮಾಡುವುದು ಭಾರತದ ಪ್ರಮುಖ ಗುರಿಯಾಗಿರಲಿದೆ. ಏಕದಿನ ಸರಣಿಯಲ್ಲಿ ಕೇವಲ 1 ಪಂದ್ಯವನ್ನಾಡಿದ್ದ ಹಿರಿಯ ವೇಗಿ ಟಿಮ್‌ ಸೌಥಿ, ಮೊದಲ ಪಂದ್ಯದಲ್ಲಿ 4 ಓವರ್‌ಗಳಲ್ಲಿ ಕೇವಲ 17 ರನ್‌ ನೀಡಿ 3 ವಿಕೆಟ್‌ ಕಿತ್ತಿದ್ದರು. ಸ್ಪಿನ್ನರ್‌ಗಳಾದ ಇಶ್‌ ಸೋಧಿ, ಮಿಚೆಲ್‌ ಸ್ಯಾಂಟ್ನರ್‌ ಸಹ ಉತ್ತಮ ಲಯ ಪ್ರದರ್ಶಿಸಿದ್ದರು. ರಾಸ್‌ ಟೇಲರ್‌, ಕೇನ್‌ ವಿಲಿಯಮ್ಸನ್‌ ಸ್ಥಿರ ಪ್ರದರ್ಶನ ತೋರುತ್ತಿದ್ದು, ಭಾರತಕ್ಕೆ ಮತ್ತೊಂದು ಕಠಿಣ ಸವಾಲು ಎದುರಾಗಲಿದೆ.

ಸಂಭವನೀಯ ತಂಡಗಳು

ಭಾರತ: ರೋಹಿತ್‌ ಶರ್ಮಾ (ನಾಯಕ), ಶಿಖರ್‌ ಧವನ್‌, ಗಿಲ್‌/ವಿಜಯ್‌, ರಿಷಭ್‌ ಪಂತ್‌, ದಿನೇಶ್‌ ಕಾರ್ತಿಕ್‌, ಎಂ.ಎಸ್‌.ಧೋನಿ, ಹಾರ್ದಿಕ್‌ ಪಾಂಡ್ಯ, ಕೃನಾಲ್‌/ಕುಲ್ದೀಪ್‌, ಭುವನೇಶ್ವರ್‌, ಖಲೀಲ್‌/ಸಿದ್ಧಾಥ್‌ರ್‍, ಯಜುವೇಂದ್ರ ಚಹಲ್‌.

ನ್ಯೂಜಿಲೆಂಡ್‌: ಟಿಮ್‌ ಸೀಫರ್ಟ್‌, ಕಾಲಿನ್‌ ಮನ್ರೊ, ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಡರೆಲ್‌ ಮಿಚೆಲ್‌, ನೀಶಮ್‌/ಗ್ರಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಸ್ಕಾಟ್‌ ಕುಗ್ಗೆಲಿಯಾನ್‌, ಟಿಮ್‌ ಸೌಥಿ, ಇಶ್‌ ಸೋಧಿ, ಲಾಕಿ ಫಗ್ರ್ಯೂಸನ್‌.

ಪಂದ್ಯ ಆರಂಭ: ಬೆಳಗ್ಗೆ 11.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

ಪಿಚ್‌ ರಿಪೋರ್ಟ್‌

ಈಡನ್‌ ಪಾರ್ಕ್ನಲ್ಲಿ ಎಷ್ಟುದೊಡ್ಡ ಮೊತ್ತ ಗಳಿಸಿದರೂ ಸುರಕ್ಷಿತವಲ್ಲ. ಕಳೆದ ವರ್ಷ ಇದೇ ಮೈದಾನದಲ್ಲಿ ಆಸ್ಪ್ರೇಲಿಯಾ 244 ರನ್‌ ಗುರಿ ಬೆನ್ನತ್ತಿ ಗೆದ್ದಿತ್ತು. ನ್ಯೂಜಿಲೆಂಡ್‌ 143 ರನ್‌ ಗುರಿಯನ್ನು ಕೇವಲ 10 ಓವರ್‌ಗಳಲ್ಲಿ ತಲುಪಿತು. ಆದರೂ ಇಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡಗಳು 9 ಬಾರಿ ಗೆದ್ದರೆ, ಗುರಿ ಬೆನ್ನತ್ತಿದ ತಂಡಗಳು 6 ಬಾರಿ ಗೆದ್ದಿವೆ. ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ರನ್‌ ಹೊಳೆ ನಿರೀಕ್ಷಿಸಲಾಗಿದೆ.

02

ಈಡನ್‌ ಪಾರ್ಕ್ನಲ್ಲಿ 2 ಟಿ20 ಪಂದ್ಯಗಳು ಟೈಗೆ ಸಾಕ್ಷಿಯಾಗಿವೆ.

05

ಈಡನ್‌ ಪಾರ್ಕ್ನಲ್ಲಿ 5 ಬಾರಿ ತಂಡಗಳು 200+ ರನ್‌ ಗಳಿಸಿವೆ.

01

ಈ ಮೈದಾನದಲ್ಲಿ ಟಿ20ಯಲ್ಲಿ 1 ಶತಕ ದಾಖಲಾಗಿದೆ.

click me!